Advertisement

ಮಳೆ; ಕೆಲ ರೈತರಲ್ಲಿ ಹರ್ಷ-ಕೆಲವರಲ್ಲಿ ಆತಂಕ

06:15 PM Nov 21, 2021 | Shwetha M |

ಆಲಮಟ್ಟಿ: ಕಳೆದ ಎರಡು ದಿನಗಳಿಂದ ಜಿಟಿ ಜಿಟಿ ಸುರಿಯುತ್ತಿರುವ ಮಳೆಯಿಂದ ಬಿಳಿ ಜೋಳ ಬಿತ್ತನೆ ಮಾಡಿದ ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ. ಜತೆಗೆ ಕೆಲ ರೈತರಲ್ಲಿ ಆತಂಕವನ್ನೂ ಮೂಡಿಸಿದೆ.

Advertisement

ಮುಂಗಾರು ಹಂಗಾಮಿನಲ್ಲಿ ಸಮರ್ಪಕವಾಗಿ ಮಳೆಯಾಗದಿದ್ದರೂ ಕಾಲುವೆ ನೀರು ಮತ್ತು ಅಲ್ಪ ಸುರಿದ ಮಳೆಯಿಂದ ರೈತರು ಮೆಕ್ಕೆ ಜೋಳವನ್ನು ಬಿತ್ತನೆ ಮಾಡಿ ರಾಶಿಯನ್ನೂ ಮಾಡಿದ್ದಾರೆ. ಆದರೆ ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣ ಹಾಗೂ ಜಿಟಿಜಿಟಿ ಮಳೆಯಿಂದ ಫಸಲು ಒಣಗಿಸಲು ಸಾಧ್ಯವಾಗದೇ ಅವುಗಳಿಗೆ ಪ್ಲಾಸ್ಟಿಕ್‌ ಹಾಳೆಯಿಂದ ಮುಚ್ಚಿ ಮಳೆಯ ನೀರಿನಿಂದ ಸಂರಕ್ಷಿಸಲಾಗುತ್ತಿದ್ದರೂ ಪ್ಲಾಸ್ಟಿಕ್‌ ಹಾಳೆ ಬೇಗುದಿಯಿಂದ ಮೆಕ್ಕೆಜೋಳದ ಕಾಳುಗಳು ಅಲ್ಲಿಯೇ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ.

ಇದರಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆಯ ಫಸಲು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಮಕ್ಕೆಜೋಳ ಬೆಳೆದ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಎರಡನೇ ತೊಗರಿಯ ಕಣಜ ಎಂಬ ಖ್ಯಾತಿಗೆ ಒಳಗಾಗಿರುವ ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಬೆಳೆ ಸಮರ್ಪಕವಾಗಿ ಸುರಿಯದ್ದರಿಂದ ಅಪಾರ ಪ್ರಮಾಣದಲ್ಲಿ ತೊಗರಿ ಬೆಳೆಯು ನಾಶವಾಗುವಂತಾಗಿತ್ತು. ಇನ್ನು ಅಲ್ಪಸ್ವಲ್ಪ ಉಳಿದಿರುವ ಬೆಳೆಯಾದರೂ ಕೈಗೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಒಂದು ವಾರದಿಂದ ಮೋಡ ಮುಸುಕಿದ ವಾತಾವರಣದಿಂದ ತೊಗರಿ ಬೆಳೆಯಲ್ಲಿ ಕೀಟಗಳ ಹಾವಳಿ ಹೆಚ್ಚಾಗಿರುವುದು ನುಂಗಲಾರದ ತುತ್ತಾಗಿದೆ ಎನ್ನುತ್ತಾರೆ ರೈತರು.

ರೈತರು ಕಬ್ಬು ಕಟಾವು ಮಾಡದಿರುವುದರಿಂದ ಈಗಾಗಲೇ ಕಬ್ಬು ಗರಿ ಬಿಟ್ಟಿರುವುದರಿಂದ ತೂಕದಲ್ಲಿ ವ್ಯಾಪವಾಗಿ ಕಡಿಮೆಯಾಗುತ್ತದೆ. ಇದರಿಂದ ವರ್ಷದವರೆಗೂ ಹಗಲಿರುಳು ಶ್ರಮಿಸಿ ನೀರು, ಗೊಬ್ಬರ ಹಾಕಿ ಉತ್ತಮವಾಗಿ ಬೆಳೆದರೂ ಜಿಟಿ ಜಿಟಿ ಮಳೆಯ ಕಾರಣದಿಂದ ರೈತರು ಹಾನಿ ಅನುಭವಿಸುವಂತಾಗಿದೆ. ಒಟ್ಟಾರೆ ಈಗ ಸುರಿಯುತ್ತಿರುವ ಮಳೆ ಕೆಲ ರೈತರ ಮಂದಹಾಸಕ್ಕೆ ಕಾರಣವಾಗಿದ್ದರೆ ಇನ್ನುಳಿದ ರೈತರ ಸಂಕಟಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next