Advertisement

ನಿರಂತರ ಜಿನುಗುತ್ತಿರುವ ಮಳೆ : ಬೆಳೆ ನಷ್ಟ ದ ಆತಂಕ

03:03 PM Dec 10, 2020 | sudhir |

ರಾಮನಗರ: ನಿವಾರ್‌ ಚಂಡಮಾರುತದ ಪರಿಣಾಮ ಜಿಲ್ಲಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಜಿನುಗುತ್ತಿರುವ ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಕಟಾವಾಗಿದ್ದ ರಾಗಿ ಮತ್ತು ಭತ್ತ ಹೊಲ, ಗದ್ದೆಯಲ್ಲೇ ಮಣ್ಣಾಗುವ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಮುಂಗಾರು ಬಿತ್ತನೆಯ ಶ್ರಮಕ್ಕೆ ಫ‌ಲ ಸಿಗದೆ ಈ ವರ್ಷವೂ ಮತ್ತೆ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಒದಗಿರುವುದ ಅನ್ನದಾತರ ನೋವಿಗೆ ಕಾರಣವಾಗಿದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸುಮಾರು 68 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಮತ್ತು 4 ಸಾವಿರ 800 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿತ್ತು. ಈ ಬೆಳೆಗಳು ಇದೀಗ ಕಟಾವಿಗೆ ಬಂದಿದೆ.

ಮಳೆಯಿಂದಾಗಿ ಫ‌ಸಲು ಒದ್ದೆ: ಕಳೆದೊಂದು ವಾರದಿಂದ ರೈತರು ಕಟಾವು ಆರಂಭಿಸಿದ್ದಾರೆ. ಮಳೆ ಜಿನುಗುತ್ತಿರುವುದರಿಂದ ಕೆಲವೆಡೆ ಕಟಾವು ಆರಂಭವಾಗಿಲ್ಲ. ಆದರೆ ಕಟಾವು ಆದ ಬೆಳೆ ಹೊಲ, ಗದ್ದೆಯಲ್ಲೇ ಇದೆ. ಈಗಾಗಲೆಕಟಾವು ಆಗಿರುವ ಬೆಳೆ ಒಣಗಿದ ನಂತರ ಕಂತೆ ಕಟ್ಟಿ, ಮೆದೆ ಹಾಕಬೇಕಿತ್ತು. ಆದರೆ ಮೋಡ ಕವಿದ ವಾತಾವರಣ ಕಾರಣ ಮತ್ತು ನಿರಂತರ ಜಿನುಗುತ್ತಿರುವ ಮಳೆಯಿಂದಾಗಿ ಫ‌ಸಲು ಒದ್ದೆಯಾಗಿದೆ. ಮೆದೆ ಹಾಕುಲು ಆಗುತ್ತಿಲ್ಲ.

ಮೆದೆ ಹಾಕಿರುವವರು ಪ್ಲಾಸ್ಟಿಕ್‌ ಶೀಟುಗಳನ್ನು ಹೊದಿಸಿದ್ದರು ಉಪಯೋಗವಾಗುತ್ತಿಲ್ಲ. ಮಳೆ ಹೀಗೆ ಮುಂದುವರೆದರೆ ರಾಗಿ ಮೊಳಕೆಯೊಡೆಯುತ್ತದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ನೋವು ಕಾಡುತ್ತಿದೆ ಎಂದು ರೈತಾಪಿ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ:ಗ್ರಾ.ಪಂ ಚುನಾವಣೆ ಹಿನ್ನಲೆ ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡದಿರಲು ಕಾಂಗ್ರೆಸ್ ತೀರ್ಮಾನ

ಮತ್ತೆ ರೈತರಿಗೆ ನಷ್ಟ: ಉದಯವಾಣಿ ಜತೆ ಮಾತನಾಡಿದ ರೈತ ಗೂಳಿ ಕುಮಾರ್‌, ತಾವು ಮತ್ತು ಸಹೋದರರದ್ದು ಕೊತ್ತಿಪುರದ ಬಳಿ 2 ಎಕರೆ ಭೂಮಿಯಲ್ಲಿ ರಾಗಿ ಮತ್ತು 4 ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದಾಗಿ. ಜಿನುಗುತ್ತಿರುವ ಅಕಾಲಿಕ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಗಂಗರಾಜನಹಳ್ಳಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿಯೂ ಇದೇ ಪರಿಸ್ಥಿತಿ ಇದೆ ಎಂದಿದ್ದಾರೆ. ವಿಚಾರ ಗೊತ್ತಿದ್ದರು, ತಾಲೂಕಿನ ಕೃಷಿ ಅಧಿಕಾರಿಗಳಾಗಲಿ, ಕಂದಾಯ ಅಧಿಕಾರಿಗಳಲಾಗಲಿ ತಮ್ಮ ನೋವು
ಆಲಿಸುತ್ತಿಲ್ಲ ಎಂದು ಗೂಳಿ ಕುಮಾರ್‌ಅವರು ದೂರಿದ್ದಾರೆ.

ವಿಮಾ ಯೋಜನೆ ನೆರವಿಗೆಬರುತ್ತಾ?
ಕೃಷಿ ನಷ್ಟ ತಡೆಯಲು ಸರ್ಕಾರಗಳು ಜಾರಿ ಮಾಡಿರುವ ವಿಮಾಯೋಜನೆ ನೆರವಿಗೆ ಬರುತ್ತದೆ ಎಂಬ ಆಶಯ ರೈತರಲ್ಲಿದೆ. ಆದರೆ
ಅಧಿಕಾರಿ ವರ್ಗ ಹೇಳುವುದೆ ಬೇರೆ. ಅಕಾಲಿಕ ಮಳೆಯಿಂದಾಗಿ ಆದ ನಷ್ಟಕ್ಕೆ ಪರಿಹಾರ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಫ‌ಸಲ್‌ ಬಿಮಾಯೋಜನೆ ಮತ್ತು ಇನ್ನಿತರೆ ವಿಮಾ ಯೋಜನೆಗಳು ನೆರವಿಗೆ ಬರುವ ಅವಕಾಶ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರದ ಏಜೆನ್ಸಿಗಳು ವಾಡಿಕೆಗಿಂತ ಅಧಿಕ ಮಳೆಯಾಗಿರುವ ಬಗ್ಗೆ ಪ್ರಮಾಣಿಕರಿಸಬೇಕು. ಇಲ್ಲವೆ ವಾಡಿಕೆ ಮಳೆಗಿಂತಕಡಿಮೆ ಮಳೆಯಾಗಿದೆ, ಬರ ಪರಿಸ್ಥಿತಿ ಇದೆ ಎಂದು ಪ್ರಮಾಣಿಕರಿಸಬೇಕು ಇವೆರೆಡು ಇಲ್ಲದ ಹೊರತು ರೈತರಿಗೆ ಈಗ ಆಗಿರುವ ನಷ್ಟಕ್ಕೆ ಪರಿಹಾರ ಸಿಗುವುದುಕಷ್ಟಸಾಧ್ಯ, ಎಲ್ಲವೂ ಸರ್ಕಾರದ ನಿಲುವಿನ ಮೇಲಿದೆ ಎಂದು ಗುರುತಿಸಿಕೊಳ್ಳಲು ಇಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ.

ಅಕಾಲಿಕ ಮಳೆಯಿಂದಾಗಿ ರಾಗಿ ಮತ್ತು ಭತ್ತ ನಷ್ಟವುಂಟಾಗಿರುವ ಬಗ್ಗೆ ತಮಗೆ ದೂರುಗಳು ಬಂದಿಲ್ಲ. ಮಳೆಯಿಂದಾಗಿ ಕಟಾವು ತಡವಾಗಿ ಮಾಡುವುದಾಗಿ ಕೆಲವೆಡೆ ರೈತರು ಹೇಳಿದ್ದಾರೆ. ದೂರುಗಳು ಬಂದರೆ ತಮ್ಮ ಅಧಿನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ವರದಿ ಮಾಡುತ್ತಾರೆ. ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಸರ್ಕಾರದ ನಿರ್ದೇಶನದ ಅನುಸಾರ ಕಾರ್ಯನಿರ್ವಹಿಸುತ್ತೇವೆ.
– ಸೋಮಸುಂದರ್‌, ಜಂಟಿನಿರ್ದೇಶಕರು, ಕೃಷಿ ಇಲಾಖೆ

– ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next