Advertisement

ಮಳೆ ಅಬ್ಬರ: ಜನಜೀವನ ಅಸ್ತವ್ಯಸ್ತ

11:55 AM Oct 07, 2017 | Team Udayavani |

ಸೇಡಂ: ಶುಕ್ರವಾರ ಮಧ್ಯಾಹ್ನ ತಾಲೂಕಿನ ಬಹುತೇಕ ಕಡೆಗಳಲ್ಲಿ ಅಬ್ಬರದ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಧ್ಯಾಹ್ನದ ಹೊತ್ತಿಗೆ ಸತತ ಗಂಟೆಕಾಲ ಸುರಿದ ಮಳೆಯಿಂದ ಪಟ್ಟಣದ ರಸ್ತೆಗಳು ಕೆಸರು ಗದ್ದೆಗಳಂತಾದರೆ. ಬಸ್‌ ನಿಲ್ದಾಣ ಸಣ್ಣ ಕೆರೆಯಂತೆ ಭಾಸವಾಗುತ್ತಿತ್ತು.

Advertisement

ಇದರಿಂದ ಕಲಬುರಗಿ, ಚಿಂಚೋಳಿ, ಯಾದಗಿರಿ, ಚಿತ್ತಾಪುರ, ಹೈದ್ರಾಬಾದಗೆ ತೆರಳುವ ಅನೇಕ ಪ್ರಯಾಣಿಕರು ತೊಂದರೆಗೀಡಾದರು. ಇನ್ನು ಮುಖ್ಯ ರಸ್ತೆ, ವೆಂಕಟೇಶ ನಗರ, ವಿದ್ಯಾನಗರ, ಇಂದಿರಾನಗರ, ಚೋಟಿಗಿರಣಿ, ದೊಡ್ಡ ಅಗಸಿ ಬಡಾವಣೆಗಳಲ್ಲಿನ ಅನೇಕ ರಸ್ತೆಗಳು ಜಲಾವೃತಗೊಂಡಿದ್ದವು. ಯುಜಿಡಿ ಕಾಮಗಾರಿ ಚಾಲನೆಯಲ್ಲಿರುವುದರಿಂದ ಅಲ್ಲಲ್ಲಿ ಅಗೆದ ರಸ್ತೆಗಳು ಕೆಸರುಮಯವಾಗಿದ್ದವು. ಈ ವೇಳೆ ಜನರು ಸಂಜರಿಸಬೇಕಾದರೆ ಹರಸಾಹಸ ಪಡುವಂತಾಗಿತ್ತು.

ವಾಡಿ: ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಆರ್ಭಟ ಶುಕ್ರವಾರವೂ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಟ್ಟವಾದ ಮೋಡ ಆಗಸವನ್ನು ಆವರಿಸಿಕೊಳ್ಳುತ್ತಿರುವುದರಿಂದ ಹಗಲು ಹೊತ್ತಿನಲ್ಲೂ ಕತ್ತಲೆ ವಾತಾವರಣ ಕಾಣುವಂತಾಗಿದೆ. ಶುಕ್ರವಾರ ಆರ್ಭಟಿಸಿದ ಮೋಡಗಳ ಘರ್ಷಣೆಯಿಂದ ಮೂಡಿದ ಗುಡುಗು ಮೈನಡುಗಿಸುವಂತಿತ್ತು. ಪಟ್ಟಣ ಸೇರಿದಂತೆ ಸನ್ನತಿ ವಲಯ, ನಾಲವಾರ, ಕೊಲ್ಲೂರ, ಯರಗೋಳ, ಲಾಡ್ಲಾಪುರ, ಕುಂಬಾರಹಳ್ಳಿ, ಹಳಕರ್ಟಿ, ಇಂಗಳಗಿ, ಚಾಮನೂರ, ಕುಂದನೂರ, ಮಾಲಗತ್ತಿ, ರಾವೂರ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದ ಬಿಸಿಲ ಝಳದ ಸಿಮೆಂಟ್‌ ನಗರಿ ಅಕ್ಷರಶಃ ತಂಪು ಸೂಸುತ್ತಿದ್ದು, ಮಲೆನಾಡಿನ ಅನುಭವ ನೀಡುತ್ತಿದೆ.

ರಭಸವಾದ ಮಳೆಯಿಂದ ಕೆಲ ಭಾಗದ ಜಮೀನುಗಳು ಜಲಾವೃತಗೊಂಡಿವೆ. ಹುಲುಸಾಗಿ ಬೆಳೆದು ನಿಂತಿರುವ ತೊಗರಿ ಬೆಳೆಯಲ್ಲಿ ಮಳೆ ನೀರು ನಿಂತಿದೆ. ಹೊಲಗದ್ದೆಗಳು ಕೆರೆ ಹೊಂಡಗಳಂತೆ ಗೋಚರಿಸುತ್ತಿವೆ. ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆ ರೈತರನ್ನು ಆತಂಕದ ಮಡುವಿಗೆ ನೂಕಿದೆ. ಪಟ್ಟಣದ ವಿವಿಧ ಬಡಾವಣೆಗಳ ರಸ್ತೆಗಳಲ್ಲಿ ನೀರು ಹರಿದಾಡಿ ಸಂಚಾರ ದುಸ್ತರಗೊಂಡಿತು.

ಮಾರುಕಟ್ಟೆ ರಸ್ತೆ, ಆಜಾದ್‌ ವೃತ್ತ, ಗಾಂಧಿ ಚೌಕ್‌ ಹಾಗೂ ಬಿಯ್ನಾಬಾನಿ ಬಡಾವಣೆ ರಸ್ತೆಗಳು ನೀರಿನಲ್ಲಿ ಮುಳುಗಿದ್ದವು. ಎಲ್ಲೆಡೆ ಜನಸಂಚಾರಕ್ಕೆ ಅಡ್ಡಿಯುಂಟಾಯಿತು. ಕೆಲವೆಡೆ ಮರಗಳು ಉರುಳಿ ಬಿದ್ದ ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next