Advertisement

ಅಲ್ಪ ಮಳೆಗೆ ಕಿತ್ತು ಬಂದ ಡಾಮರು!; ಹೊಂಡಗಳ ಸೃಷ್ಟಿ

08:31 PM Jul 13, 2019 | sudhir |

ಕಟಪಾಡಿ: ಕೋಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಟಪಾಡಿ-ಕೋಟೆ-ಮಟ್ಟು ಸಂಪರ್ಕದ ಪ್ರಮುಖ ಮೀನುಗಾರಿಕಾ ಇಲಾಖಾ ರಸ್ತೆಯ ಡಾಮರು ಕಿತ್ತು ಹೋಗಿದ್ದು, ಈ ಭಾಗದಲ್ಲಿ ವಾಹನ ಸಂಚಾರಕ್ಕೆ ಕಷ್ಟವಾಗಿದೆ. ಈ ಬಾರಿಯ ಅಲ್ಪ ಮಳೆಗೇ ರಸ್ತೆಗಳು ಹೊಂಡ ಬಿದ್ದಿವೆ. ಮೊದಲೇ ಅಗಲ ಕಿರಿದಾಗಿರುವ ರಸ್ತೆ ಇದಾಗಿರುವುದರಿಂದ ಹೊಂಡಗಳೂ ತುಂಬಿಕೊಂಡು, ಸಂಚಾರಕ್ಕೆ ಸಮಸ್ಯೆಯಾಗಿದೆ.

Advertisement

ಸಂಪರ್ಕ ರಸ್ತೆ
ಮೀನುಗಾರರು ಹೆಚ್ಚು ಅವಲಂಬಿತರಾಗಿರುವ ರಸ್ತೆ ಇದಾಗಿದ್ದು, ನಿತ್ಯ 7 ಬಸ್‌ಗಳು, ಮೀನುಗಾರಿಕೆ ವಾಹನಗಳು, ಖಾಸಗಿ ವಾಹನಗಳು, ರಿಕ್ಷಾ, ಟೆಂಪೋ ಇತ್ಯಾದಿಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ರಸ್ತೆ ಹೊಂಡ ಬಿದ್ದಿರುವುದರಿಂದ ಪಾದಚಾರಿಗಳಿಗೆ ನಿತ್ಯ ಕೆಸರಿನ ಸಿಂಚನವಾಗುತ್ತದೆ. ದಟ್ಟನೆಯೂ ಇರುವುದರಿಂದ ಸಂಚಾರಕ್ಕೆ ತ್ರಾಸವಾಗಿದೆ.

ಈ ರಸ್ತೆಯು ಪಡುಭಾಗದಲ್ಲಿ ಕೈಪುಂಜಾಲು -ಮಟ್ಟು-ಕಟಪಾಡಿ, ಮಟ್ಟು-ಉದ್ಯಾವರ ಕೊಪ್ಲ -ಕ‌ಡೆತೋಟ-ಕನಕೋಡ-ಮಲ್ಪೆ ಸಂಪರ್ಕಕ್ಕೆ ರಿಂಗ್‌ ರಸ್ತೆಮಾದರಿಯಲ್ಲಿ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಈ ಭಾಗದ ಮಾತ್ರವಲ್ಲದೇ ಉದ್ಯಾವರ ಭಾಗದ ಜನರೂ ಇದನ್ನೇ ಪ್ರಮುಖ ಸಂಪರ್ಕ ರಸ್ತೆಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಕಳಪೆ ಕಾಮಗಾರಿ?
ಕಳೆದ ಡಿಸೆಂಬರ್‌ನಲ್ಲಿ ಮೀನುಗಾರಿಕಾ ಕೊಂಡಿ ರಸ್ತೆ ದುರಸ್ತಿಯ ಯೋಜನೆಯಡಿ ಕಟಪಾಡಿ-ಕೋಟೆ-ಮಟ್ಟು ಸಂಪರ್ಕದ ಪ್ರಮುಖ ಮೀನುಗಾರಿಕೆ ಇಲಾಖೆ ರಸ್ತೆಯ ದುರಸ್ತಿ ಕೆಲಸ ಕಾರ್ಯವನ್ನು ಸುಮಾರು 10 ಲಕ್ಷ ರೂ. ಅನುದಾನವನ್ನು ಬಳಸಿಕೊಂಡು ನಡೆಸಲಾಗಿತ್ತು.
ಒಂದು ಮಳೆಗಾಲ ಎದುರಿಸುವ ಮೊದಲೇ ರಸ್ತೆ ಡಾಮರು ಕಿತ್ತು ಹೊಂಡ ಬಿದ್ದಿರುವುದು ಕಾಮಗಾರಿ ಕಳಪೆಯಾಗಿರುವ ಶಂಕೆ ಮೂಡಿಸಿದೆ.

ಕಾಂಕ್ರೀಟೀಕರಣಗೊಂಡು ದ್ವಿಪಥವಾಗಿ ವಿಸ್ತರೀಕರಣಗೊಂಡು ಇಕ್ಕೆಲಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಾಣಗೊಂಡಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂಬ ಆಶಯ ಈ ಭಾಗದ ನಿತ್ಯ ಸಂಚಾರಿಗಳದ್ದು.

Advertisement

ಗಮನಕ್ಕೆ ತರಲಾಗಿದೆ
ಕಳೆದ ಸಾಲಿನಲ್ಲಿ ದುರಸ್ತಿಗೊಂಡಿರುವ ರಸ್ತೆಯು ಕೆಲವೆಡೆ ಕೆಟ್ಟಿರುವ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್‌ ಮತ್ತು ಗುತ್ತಿಗೆದಾರರ ಗಮನಕ್ಕೆ ತರಲಾಗಿದೆ
-ಸುರೇಖಾ, ಪಿ.ಡಿ.ಒ. ಕೋಟೆ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next