Advertisement

ಉಡುಪಿ ಜಿಲ್ಲೆ: ಮಳೆ-ನೆರೆ ಸಂಬಂಧಿತ ಸುದ್ದಿಗಳು

06:00 AM Jul 09, 2018 | |

ಕಾಪು ವೃತ್ತ ನಿರೀಕ್ಷಕರ ಕಚೇರಿ – ಪೊಲೀಸ್‌ ಠಾಣೆಯವರೆಗಿನ ಸಂಚಾರ ದುಸ್ತರ
ಕಾಪು ಪೇಟೆಯಲ್ಲಿ ಮತ್ತೆ ಕುಸಿದ ಒಳಚರಂಡಿ ಯೋಜನೆ ಮ್ಯಾನ್‌ಹೋಲ್‌

Advertisement

ಕಾಪು: ಪುರಸಭೆ ವ್ಯಾಪ್ತಿಯ ಕಾಪು ಪೇಟೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಜನರನ್ನು ಕಾಡಿದ್ದ ಒಳಚರಂಡಿ ಯೋಜನೆಯ ಮ್ಯಾನ್‌ಹೋಲ್‌ಗ‌ಳು ಮತ್ತೆ ಕುಸಿದಿದ್ದು, ಕಾಪು ವೃತ್ತ ನಿರೀಕ್ಷಕರ ಕಛೇರಿ ಬಳಿಯಿಂದ ಹಿಡಿದು ಕಾಪು ಪೊಲೀಸ್‌ ಠಾಣೆಯವರೆಗಿನ ಪೇಟೆ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ.


ಕಾಪು ಪೇಟೆಯ ಮುಖ್ಯ ರಸ್ತೆಯಲ್ಲಿ ಒಳಚರಂಡಿ ನೀರು ಸರಬರಾಜು ಯೋಜನೆಯ ಕಾಮಗಾರಿಗಾಗಿ ವಿವಿಧೆಡೆ ಮ್ಯಾನ್‌ಹೋಲ್‌ಗ‌ಳನ್ನು ಅಳವಡಿಸ ಲಾಗಿದ್ದು, ಆ ಪ್ರದೇಶದಲ್ಲೇ ಮಳೆ ನೀರು ಹರಿಯುವ ಚರಂಡಿಯೂ ಇರುವುದರಿಂದ ಮತ್ತೆ ಮತ್ತೆ ಮ್ಯಾನ್‌ ಹೋಲ್‌ಗ‌ಳು ಕುಸಿತಕ್ಕೊಳಗಾಗುತ್ತಿವೆ.

ರವಿವಾರ ಸಮಸ್ಯೆ ಕಂಡು ಬಂದ ಪ್ರದೇಶಗಳಲ್ಲಿ ಸಾರ್ವಜನಿಕರು ಹಸಿರು ಗಿಡಗಳನ್ನು ಇಟ್ಟು, ಕೆಂಪು ವಸ್ತುಗಳನ್ನು ಇಟ್ಟು ಸಂಚಾರಿಗಳಿಗೆ ಎಚ್ಚರಿಕೆ ನೀಡುವ ಮತ್ತು ಅಧಿಕಾರಿಗಳು, ಗುತ್ತಿಗೆದಾರರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ. ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಸಹರಿಸುವ ನಿಟ್ಟಿನಲ್ಲಿ ಗುತ್ತಿಗೆದಾರರು ಮತ್ತು ಪುರಸಭೆ ತತ್‌ಕ್ಷಣ ಎಚ್ಚೆತ್ತುಕೊಂಡಿದ್ದು, ಹೊಂಡ ಮುಚ್ಚುವ ಪ್ರಯತ್ನದಲ್ಲಿ ನಿರತವಾಗಿದೆ.

ಸಮಸ್ಯೆಗಳು ಎಲ್ಲೆಲ್ಲಿ ?
ಒಳಚರಂಡಿ ಯೋಜನೆಯ ಪೈಪ್‌ಲೈನ್‌ ಅಳವಡಿಕೆ ಸಂದರ್ಭ ಕಾಪು ಪೊಲೀಸ್‌ ವೃತ್ತ ನಿರೀಕ್ಷಕರ ಕಛೇರಿ, ಶ್ರೀ ದೇವಿ ಅಮ್ಮ ಕಾಂಪ್ಲೆಕ್ಸ್‌, ವಿಜಯಾ ಬ್ಯಾಂಕ್‌ ಬಳಿ, ಕಾಪು ಪೇಟೆ, ರಿಕ್ಷಾ ನಿಲ್ದಾಣ, ಜಾವೇದ್‌ ಪ್ರಿಂಟಿಂಗ್‌ ಪ್ರಸ್‌ ಮತ್ತು ವೈಶಾಲಿ ಹೊಟೇಲ್‌, ಅನಂತ ಮಹಲ್‌, ಪೊಲೀಸ್‌ ಠಾಣೆ ಸಹಿತ ಒಟ್ಟು 14 ಕಡೆಗಳಲ್ಲಿ ಮ್ಯಾನ್‌ಹೋಲ್‌ಗ‌ಳನ್ನು ಅಳವಡಿಸಲಾಗಿದೆ.

ಸಮಸ್ಯೆಯೇನು ?
ಹಿಂದಿನ ಸಂದರ್ಭಗಳಲ್ಲಿ ಮ್ಯಾನ್‌ಹೋಲ್‌ಗ‌ಳು ಕುಸಿತಕ್ಕೊಳಗಾದ ಪ್ರದೇಶಗಳಲ್ಲಿ ಗುತ್ತಿಗೆದಾರರು ಸಿಮೆಂಟ್‌ ಮಿಕ್ಸರ್‌ ಮತ್ತು ಜಲ್ಲಿ ಹಾಕಿ ಹೊಂಡ ಸಮತಟ್ಟು ಮಾಡಿದ್ದು, ಅಲ್ಲಿ ಮತ್ತೆ ಮತ್ತೆ ರಸ್ತೆ ಕುಸಿತಕ್ಕೊಳಗಾಗಿತ್ತು. ಆ ಸಂದರ್ಭ ಹಾಕಲಾಗಿದ್ದ ಜಲ್ಲಿ ಕಲ್ಲುಗಳು ರಸ್ತೆಯಲ್ಲಾ ಚೆಲ್ಲಾಡಿ ಹೋಗಿ, ಅಂಗಡಿಗಳ ಹಾರಿ, ವಾಹನಗಳತ್ತ ಹಾರಿ ಸಮಸ್ಯೆ ಉಂಟಾಗುತ್ತಿತ್ತು. ಕಳೆದ ಜೂ. 30ರಂದು ನಡೆದಿದ್ದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆದು, ಅಂದು ಮತ್ತೆ ಮ್ಯಾನ್‌ಹೋಲ್‌ ಇದ್ದ ಪ್ರದೇಶಗಳಲ್ಲಿ ರಸ್ತೆ ಸಮತಟ್ಟು ಮಾಡಲಾಗಿತ್ತು.

Advertisement

ಒಳಚರಂಡಿ ಯೋಜನೆಯ ಕಾಮಗಾರಿಯ ವೇಳೆ ನಡೆದಿದ್ದ ಮಣ್ಣು ಕುಸಿತ ದುರಂತ, ಕಳೆದ ಮೇ ತಿಂಗಳಲ್ಲಿ ಸುರಿದ ಮಹಾಮಳೆಯ ಸಂದರ್ಭ ಉಂಟಾದ ಮ್ಯಾನ್‌ಹೋಲ್‌ ಬಳಿ ಭೂ ಕುಸಿತ, ಆ ಬಳಿಕ ನಿರಂತರವಾಗಿ ಸುರಿದ ಮಳೆಯ ಕಾರಣದಿಂದಾಗಿ ಒಳಚರಂಡಿ ಯೋಜನೆಯ ಕಾಮಗಾರಿ ವಿಳಂಬವಾಗಿ ನಡೆಯುವಂತಾಗಿದೆ ಎನ್ನುವುದು ಗುತ್ತಿಗೆದಾರರ ಅಭಿಪ್ರಾಯವಾಗಿದೆ.

ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ
ಕಾಪು ಪೇಟೆಯ ಒಳಚರಂಡಿ ಯೋಜನೆಯ ಕಾಮಗಾರಿಯಿಂದಾಗಿ ಉಂಟಾಗಿರುವ ಹಾನಿಯನ್ನು ಪರಿಶೀಲಿಸಲಾಗಿದೆ. ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದ್ದು, ಮಳೆಯ ಕಾರಣ ಕಾಮಗಾರಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ರವಿವಾರ ಮತ್ತೆ  ಮ್ಯಾನ್‌ಹೋಲ್‌ಗ‌ಳು ಕುಸಿತಕ್ಕೊಳಗಾದ ಪ್ರದೇಶಗಳಲ್ಲಿ ಗಟ್ಟಿಯಾಗಿ ಜಲ್ಲಿ ಕಲ್ಲು, ಸಿಮೆಂಟ್‌ ಮಿಕ್ಸರ್‌ ಹಾಕಿ ನೆಲಸಮತಟ್ಟು ಮಾಡಲಾಗುತ್ತಿದೆ.
–  ರಾಯಪ್ಪ, ಪುರಸಭೆ ಮುಖ್ಯಾಧಿಕಾರಿ

ಮಳೆ-ನೆರೆ ಜನರು ಸುರಕ್ಷಿತ ಸ್ಥಳಕ್ಕೆ
ಕಟಪಾಡಿ:
ಕುರ್ಕಾಲು ಗ್ರಾಮದ ಪಾಜೈ ಬರ್ಕನ್‌ ತೋಟ ಎಂಬಲ್ಲಿ ವಾಸವಾಗಿರುವ ಪೇತ್ರ ಪೂಜಾರಿ, ಅಕ್ಕಿ ಪೂಜಾರ್ತಿ ಮತ್ತು ಅವರ ಮನೆಯವರು ಸುಮಾರು 6 ಮಂದಿ ನೆರೆಯ ಹಾವಳಿಯಿಂದ ಭಾಗಶಃ ದ್ವೀಪದಂತಾಗಿದ್ದ ಮನೆಯೊಳಗೆ ಅಪಾಯಕಾರಿ  ಪರಿಸ್ಥಿತಿಯು ಜು.7ರಂದು  ನಿರ್ಮಾಣವಾಗಿತ್ತು.

ಅಗ್ನಿ ಶಾಮಕ ದಳದವರ ಸಹಕಾರದೊಂದಿಗೆ ಕುರ್ಕಾಲು ಗ್ರಾಮ ಪಂಚಾಯತ್‌ ಸದಸ್ಯರಾದ ಎಂ.ಜಿ.ನಾಗೇಂದ್ರ, ಸುದರ್ಶನ್‌ ರಾವ್‌, ಸ್ಥಳೀಯರಾದ ಕರುಣಾಕರ್‌ ಪೂಜಾರಿಯವರು ವಿಶೇಷ ದೋಣಿಯಲ್ಲಿ ಸುಮಾರು 2 ಗಂಟೆಗಳ ಕಾಲ ನೀರಿನ ಸೆಳೆತಕ್ಕೆ  ಸಿಲುಕಿದರೂ ಪ್ರಾಣಾಪಾಯವನ್ನೂ ಲೆಕ್ಕಿಸದೆ ಸುರಕ್ಷಿತ ಪ್ರದೇಶಕ್ಕೆ ಕರೆ ತಂದಿದ್ದಾರೆ.

ಈ ರಕ್ಷಣಾ ಕಾರ್ಯದಲ್ಲಿ  ಸ್ಥಳೀಯ ಬಿಜಂಟ್ಲ ನಿವಾಸಿಗಳಾದ ಪ್ರಶಾಂತ್‌ ಸಾಲಿಯಾನ್‌ ಕುಳೇದು ಮತ್ತು ಚಿನ್ನು ಶೆಟ್ಟಿ ಕುಳೇದು ಇವರ ಯುವಕರ ತಂಡವು ನೀರಿನ ಸೆಳೆತಕ್ಕೆ ಅವಘಡ ಸಂಭವಿಸದಂತೆ ಕೂಡಲೇ ಹಗ್ಗವನ್ನು ತಂದು ದೋಣಿಗೆ ಕಟ್ಟಿ ದಡಕ್ಕೆ ಎಳೆಯಲು ಸಹಕಾರ ನೀಡಿರುತ್ತಾರೆ.
ಇದಲ್ಲದೆ ಬಿಜಂಟ್ಲ- ಕುಂಜಾರುಗಿರಿ ಮುಖ್ಯ ರಸ್ತೆಯಲ್ಲಿ ಕೂಡಾ ರಸ್ತೆಯಲ್ಲಿ ನೀರು ತುಂಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು.ಪಾಜೈ ದಿ| ಅಪ್ಪು ಆಚಾರ್ಯ ಮತ್ತು ದಿ| ಭಾಸ್ಕರ ಆಚಾರ್ಯ ಮನೆಗೆ ಕೂಡಾ ನೀರು ತುಂಬಿದ್ದು ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆ ತರಲಾಗಿದೆ.

ಬಿಳಿಯಾರು ದುರ್ಗಾನಗರದ ದಾಮೋದರ ಆಚಾರ್ಯ ಮನೆ ಕಂಪೌಂಡ್‌ ಗೋಡೆ ಕುಸಿದು ಬಿದ್ದು , ಸುಮಾರು 25,000 ಕ್ಕೂ ಅಧಿಕ ನಷ್ಟ ಉಂಟಾಗಿರುತ್ತದೆ.

ಬಿಳಿಯಾರು ಇಂಚರ ಮನೆಯ ಬಳಿ ಶಾರದಾ ಆಚಾರಿಯವರ ಮನೆ ಕುಸಿದು ಸುಮಾರು 50,000 ಕ್ಕೂ ಅ ಕ ನಷ್ಟ ಉಂಟಾಗಿರುತ್ತದೆ.

ಪಾಜೈಯಲ್ಲಿ ನಡೆದ ರಕ್ಷಣಾ ಕಾರ್ಯದ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಲೆಸ್ಟರ್‌ ಕೆಸ್ತಲೀನೊ, ಕುರ್ಕಾಲು ಗ್ರಾಮ ಪಂಚಾಯತ್‌ ಪಿ.ಡಿ.ಓ. ಕು| ಚಂದ್ರಕಲಾ, ಗ್ರಾ.ಪಂ.ಸದಸ್ಯೆ ನತಾಲಿಯಾ ಮಾರ್ಟಿಸ್‌, ಗ್ರಾ. ಪಂ. ಸಿಬಂದಿ ಸತೀಶ್‌ ಪೂಜಾರಿ ಹಾಗು ಸಾರ್ವಜನಿಕರು, ಸ್ಥಳೀಯರು ಉಪಸ್ಥಿತರಿದ್ದರು.

ಪರೆಂಕುದ್ರು: ಮನೆ ಕುಸಿತ, ನಷ್ಟ
ಕಟಪಾಡಿ:
ಕೋಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪರೆಂಕುದ್ರು ಎಂಬಲ್ಲಿ ಮನೆಯೊಂದು ಜು.8ರ ಮುಂಜಾವಿನಲ್ಲಿ ನೆರೆಹಾವಳಿಯಿಂದ ಧರಾಶಾಹಿಯಾಗಿದ್ದು, ಮನೆಯೊಳ ಗಿದ್ದವರು ಅದೃಷ್ಟವಶಾತ್‌ ಪ್ರಾಣಾಪಾಯ ದಿಂದ ಪಾರಾದ ಘಟನೆ ನಡೆದಿದೆ.


ನೆರೆ ಹಾವಳಿಯಿಂದಾಗಿ ಮನೆ ಮತ್ತು ಪರಂಕುದ್ರು ಪರಿಸರದಲ್ಲಿ  ನೀರು ತುಂಬಿಕೊಂಡಿತ್ತು. ಮನೆಯ ಯಜಮಾನ ದಿನೇಶ್‌ ಮನೆಯೊಳಗೆ ಮಲಗಿದ್ದು ರವಿವಾರ ಮುಂಜಾವಿನ 3.30 ಗಂಟೆಯ ಸುಮಾರಿಗೆ ಗೋಡೆ ಬಿರುಕು ಬಿಡುವ ಸದ್ದನ್ನು ಆಲಿಸಿ ಮನೆಯೊಳಗೆ ಓಡಿ ಹೋಗಿ ನೋಡುತ್ತಿದ್ದಂತೆಯೇ ಪಡುಭಾಗದ ಗೋಡೆಯು ಕುಸಿದು ಬಿದ್ದಿದ್ದು ಅನಂತರ ಮನೆಯಿಂದ ಹೊರಗೋಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪತ್ನಿ ಶಕುಂತಳ ಅಂಚನ್‌ ಸನಿಹದಲ್ಲಿನ ತನ್ನ ದೊಡ್ಡಮ್ಮನ ಮನೆಗೆ 3 ಮಕ್ಕಳೊಂದಿಗೆ ತೆರಳಿದ್ದುದರಿಂದ ಸಂಭಾವ್ಯ ಹೆಚ್ಚಿನ ಅನಾಹುತವೂ ತಪ್ಪಿದಂತಾಗಿದೆ ಎಂದು ಮನೆಮಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮಕ್ಕಳ ಶಾಲಾ ಪುಸ್ತಕಗಳು ನೀರು ಪಾಲಾಗಿದೆ.

ಮಗಳ ವಿವಾಹದ ಚಿಂತೆ
ಇತ್ತೀಚೆಗಷ್ಟೇ ಮಗಳ ನಿಶ್ಚಿತಾರ್ಥಗೊಂಡಿದ್ದು, ಮನೆಯನ್ನು ದುರಸ್ತಿ ಮಾಡಲಾಗಿತ್ತು. ಇದೀಗ ಇದ್ದ ಮನೆಯೂ ಧರಾಶಾಹಿಯಾಗಿದ್ದರಿಂದ ಡಿಸೆಂಬರ್‌ನಲ್ಲಿ ನಡೆಯುವ ಮಗಳ ವಿವಾಹ ಶುಭ ಕಾರ್ಯದ ಬಗ್ಗೆ ಆರ್ಥಿಕ ಆಡಚಣೆಯ ಚಿಂತೆ ಇವರನ್ನು ಕಾಡತೊಡಗಿದೆ ಎಂದು ದಿನಕೂಲಿ ನೌಕರಿಯಿಂದ ಮನೆ ನಿಭಾಯಿಸುವ ಮನೆಯೊಡತಿ ಶಕುಂತಳ ಅಂಚನ್‌ ಪತ್ರಿಕೆಯೊಂದಿಗೆ ದುಃಖ ತೋಡಿಕೊಂಡಿರುತ್ತಾರೆ.

ಪರಿಶೀಲನೆ
ಕಾಪು ತಾಲೂಕು ತಹಶೀಲ್ದಾರ್‌ ಗುರುಸಿದ್ಧಯ್ಯ, ಗ್ರಾಮ ಲೆಕ್ಕಾಧಿಕಾರಿ ಲೋಕನಾಥ್‌, ಜಿ.ಪಂ.ಸದಸ್ಯೆ ಗೀತಾಂಜಲಿ ಎಂ.ಸುವರ್ಣ, ತಾ.ಪಂ.ಸದಸ್ಯ ರಾಜೇಶ್‌ ಅಂಬಾಡಿ, ಗ್ರಾ.ಪಂ. ಅಧ್ಯಕ್ಷೆ  ಕೃತಿಕಾ ರಾವ್‌, ಸದಸ್ಯರಾದ ರತ್ನಾಕರ ಕೋಟ್ಯಾನ್‌, ಜಗದೀಶ್‌ ಅಂಚನ್‌, ಕಿಶೋರ್‌ ಅಂಬಾಡಿ, ಯೋಗೀಶ್‌ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next