Advertisement
ಭಾರೀ ಪ್ರವಾಹದಿಂದಾಗಿ ಕುಮಾರಧಾರಾ ಸ್ನಾನ ಘಟ್ಟ ಸಂಪೂರ್ಣ ಮುಳುಗಿದೆ. ಘಟ್ಟದ ಮೇಲೆ ಮಳೆ ಹೆಚ್ಚಿದ್ದ ಕಾರಣ ನೀರಿನ ಮಟ್ಟ ಹೆಚ್ಚುತ್ತ ಸಾಗಿತು. ಗುರುವಾರ ಮಧ್ಯಾಹ್ನದ ವೇಳೆಗೆ ಕುಮಾರಧಾರಾ ಪ್ರವೇಶ ದ್ವಾರದವರೆಗೂ ವ್ಯಾಪಿಸಿತು. ಮಂಜೇಶ್ವರ- ಕಾಣಿಯೂರು ಸೇತುವೆಯೂ ಮುಳುಗಿತು. ಅದೇ ರಸ್ತೆಯ ಮುಂದಕ್ಕೆ ನೀರು ಹರಿದು ಸಂಪರ್ಕ ಕಡಿತಗೊಂಡಿತ್ತು.
ಸುಬ್ರಹ್ಮಣ್ಯದಲ್ಲಿ ತುರ್ತು ನಿರ್ವಹಣೆಗೆಂದು 30 ಮಂದಿಯ ಎನ್.ಡಿ.ಆರ್.ಎಫ್. ತಂಡವನ್ನು ಸಜ್ಜುಗೊಳಿಸಲಾಗಿದೆ. 12 ಅಗ್ನಿಶಾಮಕ ಸಿಬಂದಿ ಹಾಗೂ ಎರಡು ಬೋಟ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ನದಿ ಕಿನಾರೆ ಸುತ್ತ ಫ್ಲಡ್ ವಾಚ್ ಸಿಬಂದಿಯನ್ನು ನಿಯೋಜಿಸಲಾಗಿದೆ. ವಿಪತ್ತು ನಿರ್ವಹಣೆ ನಿಭಾಯಿಸಲು ಆಗಮಿಸಿರುವ ತಂಡಗಳ ಸಿಬಂದಿಗೆ ದೇವಸ್ಥಾನದ ವತಿಯಿಂದ ವಸತಿ, ಆಹಾರ ಒದಗಿಸಲಾಗುತ್ತಿದೆ. ವಸತಿ ಗೃಹದಲ್ಲಿ ವ್ಯವಸ್ಥೆ
Related Articles
Advertisement
ನೆಲ್ಯಾಡಿ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಎಂಬಲ್ಲಿ ಪ್ರವಾಹದ ನೀರು ಹೆದ್ದಾರಿಗೆ ಬಂದಿದ್ದರಿಂದ ಸುದೀರ್ಘ ನಾಲ್ಕು ತಾಸು ಸಂಚಾರ ಸ್ಥಗಿತಗೊಂಡಿತ್ತು. ಕೆಲವು ವಾಹನಗಳು ನೀರಿನಲ್ಲೇ ಸಂಚರಿಸಿದವು.
ಗುಂಡ್ಯದಲ್ಲಿ ಗಂಗಾಧರ ಗೌಡ, ಸುರೇಶ್, ಗೀತಾ, ಅಣ್ಣಯ್ಯ ಹಾಗೂ ಪ್ರತಾಪ್ ಅವರ ಮನೆಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಶಿರಾಡಿ ಗ್ರಾ.ಪಂ. ಸದಸ್ಯರಾದ ಪ್ರಕಾಶ್ ಗುಂಡ್ಯ ಈ ಮನೆಗಳ ನಿವಾಸಿಗಳನ್ನು ಗುರುನಾರಾಯಣ ಮಂದಿರಕ್ಕೆ ಸ್ಥಳಾಂತರಿಸಿ, ಬೆಳಗ್ಗಿನ ಉಪಾಹಾರದ ವ್ಯವಸ್ಥೆ ಮಾಡಿದ್ದಾರೆ.
ಹಾನಿಗೊಂಡ ಮನೆಗಳ ತಾತ್ಕಾಲಿಕ ದುರಸ್ತಿ ಹಾಗೂ ನೆರೆ ಸಂತ್ರಸ್ತರನ್ನು ಸ್ಥಳಾಂತರಿಸುವ ಕೆಲಸದಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ. ನಿತರವಾಗಿದೆ. ಮರ ಬಿದ್ದು ಹಾನಿಗೊಳಗಾದ ಮನೆಗಳ ತುರ್ತು ದುರಸ್ತಿಗೆ ಗ್ರಾ.ಪಂ. ಪಿಡಿಒ ಮುತ್ತಪ್ಪ, ಕಾರ್ಯದರ್ಶಿ ಮೋನಪ್ಪ ಡಿ., ಉಪಾಧ್ಯಕ್ಷ ರಾಜೇಶ್ ಎನ್.ಎಸ್., ಸದಸ್ಯರಾದ ಪ್ರಶಾಂತ್ ಭಟ್ ಮಾಣಿಲ, ಹರೀಶ್ ಇಂಜಾಡಿ, ಸಿಬಂದಿ ರಘು ಶ್ರಮಿಸುತ್ತಿದ್ದಾರೆ.
ಮಳೆ ತೀವ್ರಗೊಂಡ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಮುಳುಗಡೆ ಪ್ರದೇಶಗಳಿಗೆ ಪುತ್ತೂರು ಸಹಾಯಕ ಆಯುಕ್ತ ಕೃಷ್ಣಮೂರ್ತಿ, ಸುಳ್ಯ ತಾ.ಪಂ. ಇ.ಒ. ಭವಾನಿಶಂಕರ, ಕಡಬ ತಾಲೂಕು ತಹಶೀಲ್ದಾರ್ ಜಾನ್ ಪ್ರಕಾಶ್, ಸುಬ್ರಹ್ಮಣ್ಯ ದೇಗುಲದ ಇಒ ರವೀಂದ್ರ ಎಂ.ಎಚ್., ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ, ಅಧಿಕಾರಿಗಳಾದ ದೇವರಾಜ್ ಮುತ್ಲಾಜೆ, ಅವಿನ್ ರಂಗತ್ತಮಲೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಎಲ್ಲೆಡೆ ಜಲ ಪ್ರವಾಹಸುಬ್ರಹ್ಮಣ್ಯ – ಕಾಣಿಯೂರು ಮಾರ್ಗದ ಬೊಳ್ಮಲೆ ಎಂಬಲ್ಲಿ ನೀರು ರಸ್ತೆಗೆ ಹರಿದು ಗುರುವಾರವೂ ಸಂಚಾರ ಸ್ಥಗಿತಗೊಂಡಿತು. ಐನಕಿದುವಿನ ಗುಂಡಡ್ಕ ಸೇತುವೆ ಬೆಳಗ್ಗೆ ಮುಳುಡೆಯಾಯಿತು. ಯೇನೆಕಲ್ಲಿನಲ್ಲಿ ಹರಿಯುವ ಕಲ್ಲಾಜೆ ಹೊಳೆ ತುಂಬಿ ಹರಿದು ತಟದ ಹಲವು ತೋಟಗಳಿಗೆ ನೀರು ನುಗ್ಗಿದೆ. ಗುತ್ತಿಗಾರಿನ ಬಾಕಿಲ, ಬಾಳುಗೋಡು ಪದಕ ಹೊಳೆ, ಕಲ್ಮಕಾರು ನದಿಗಳು ತುಂಬಿ ಹರಿದಿವೆ. ಹಳ್ಳ-ಕೊಳ್ಳಗಳಲ್ಲಿ ಹರಿದು ಬಂದ ನೆರೆಗೆ ಮರಗಳು ತೇಲಿ ಬಂದು ಸೇತುವೆಗಳಲ್ಲಿ ಸಿಕ್ಕಿ ಹಾಕಿಕೊಂಡು ಅನೇಕ ಕಡೆಗಳಲ್ಲಿ ನೀರು ಬಂದು ಸಂಚಾರಕ್ಕೆ ತೊಡಕುಂಟಾಯಿತು. ಆಧಿಕಾರಿಗಳ ಖಡಕ್ ಸೂಚನೆ
ಸುಬ್ರಹ್ಮಣ್ಯದ ನೂಚಿಲ ಬಳಿ ಶಿವಾನಂದ ಜಮೀನಿನಲ್ಲಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳದೆ ಇದ್ದ ಕಾರಣ ಅಪಾರ ಪ್ರಮಾಣದಲ್ಲಿ ಕೃಷಿ ಭೂಮಿ ಮುಳುಗಡೆಗೊಂಡಿತ್ತು. ಎರಡು ಮನೆಗಳು ಮುಳುಗಡೆಗೊಳ್ಳುವ ಸ್ಥಿತಿ ಇತ್ತು. ದೂರಿನ ಮೇರೆಗೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ತತ್‌ಕ್ಷಣ ತೆರವುಗೊಳಿಸಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು. ಈ ವೇಳೆ ಶಿವಾನಂದ ಅಧಿಕಾರಿಗಳ ಬಳಿ ರೇಗಾಡಿದ ಪ್ರಸಂಗವೂ ನಡೆಯಿತು. ವಿದ್ಯುತ್ ವ್ಯತ್ಯಯ
ಸುಬ್ರಹ್ಮಣ್ಯ ಸುತ್ತಮುತ್ತಲ ಅನೇಕ ಕಡೆಗಳಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಕಡಬ-ಸುಬ್ರಹ್ಮಣ್ಯ ಮಾರ್ಗದ ಮರ್ಧಾಳ ಬಳಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಗುರುವಾರ ಸುಬ್ರಹ್ಮಣ್ಯಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ಕೊಲ್ಲಮೊಗ್ರು, ಹರಿಹರ, ಬಾಳುಗೋಡು, ಕಲ್ಮಕಾರು, ಐನಕಿದು ಭಾಗಕ್ಕೆ ಮೂರು ದಿನಗಳ ಹಿಂದೆ ಹೋದ ವಿದ್ಯುತ್ ಗುರುವಾರವೂ ಬಂದಿರಲಿಲ್ಲ. ಕುಲ್ಕುಂದ ಕಾಲನಿಗೆ ಪ್ರವಾಹ
ಕುಲ್ಕುಂದ ಕಾಲನಿಗೆ ಪ್ರವಾಹದ ನೀರು ನುಗ್ಗಿದ್ದು, ಚಂದ್ರ ನಾಯಕ್, ಸುಬ್ಬಪ್ಪ, ಚನಿಯಪ್ಪ ನಾಯ್ಕ, ದೇಜಮ್ಮ ಮಲೆ, ನೂಚಿಲದ ಮೇದಪ್ಪ ಗೌಡ, ನಾಗೇಂದ್ರ, ಕುಮಾರಧಾರಾ ಸೇತುವೆ ಪಕ್ಕದ ಭಾಸ್ಕರ ಎಂ.ಕೆ., ಕಿಟ್ಟಣ್ಣ ರೈ, ಹಲ್ಕುರೆ ಗೌಡ ಅವರ ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ. ಕುಲ್ಕುಂದ ರಾಮಕೃಷ್ಣ ಅವರ ಮನೆ ಮೇಲೆ ಮರಬಿದ್ದು ಅಪಾರ ಹಾನಿ ಸಂಭವಿಸಿದೆ. ಕುಟುಂಬಸ್ಥರು ನೆರೆಯ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನು ಈ ಭಾಗಗಳಲ್ಲಿ ಅನೇಕ ಕುಟುಂಬಗಳು ಮುಳುಗಡೆ ಭೀತಿ ಎದುರಿಸುತ್ತಿವೆ.