Advertisement
ಕಲ್ಮಕಾರು ಸರಕಾರಿ ಹಿ.ಪ್ರಾ. ಶಾಲೆ ಪಕ್ಕದ ರಂಗಮಂದಿರದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಆಶ್ರಯ ಒದಗಿಸಲಾಗಿದೆ. 10 ಕುಟುಂಬಗಳ 17 ಗಂಡಸರು, 18 ಮಹಿಳೆಯರು ಮತ್ತು 11 ಮಕ್ಕಳು ಸೇರಿ 46 ಮಂದಿಗೆ ಇಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಬುಧವಾರ ರಾತ್ರಿ ಈ ಭಾಗದಲ್ಲಿ ಭಾರೀ ಮಳೆಯಾಗಿದ್ದರಿಂದ ರಾತ್ರಿಯೇ ಕುಟುಂಬಗಳನ್ನು ಸ್ಥಳಾಂತರಿಸಲಾಯಿತು. 2 ಕುಟುಂಬಗಳ ಸದಸ್ಯರ ಮನ ವೊಲಿಸ ಬೇಕಾಯಿತು. ಇವರಿಗೆಲ್ಲ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಮೂರು ಹೊತ್ತು ಊಟ ಹಾಗೂ ಉಪಾಹಾರ ವ್ಯವಸ್ಥೆ, ಹೊದಿಕೆ, ಚಾಪೆ ಇತ್ಯಾದಿಗಳನ್ನು ಒದಗಿಸಲಾಗಿದೆ.
ಕಲ್ಮಕಾರು ಭಾಗದಲ್ಲಿ ಮೊಬೈಲ್ ಟವರ್ ಹಲವು ತಿಂಗಳಿಂದ ಸರಿಯಾಗಿ ಕಾರ್ಯಾಚರಿಸುತ್ತಿಲ್ಲ. ವಿದ್ಯುತ್ ಇದ್ದಾಗ ಮಾತ್ರ ಸಿಗ್ನಲ್ ಕೊಡುತ್ತದೆ. ತುರ್ತು ಸಂದರ್ಭದಲ್ಲೂ ಮೊಬೈಲ್ ಸಂಪರ್ಕ ಸಿಗುತ್ತಿಲ್ಲ. ತಾ.ಪಂ. ಸದಸ್ಯ ಉದಯ ಕುಮಾರ್ ಕೊಪ್ಪಡ್ಕ ಸ್ವಂತ ಖರ್ಚಿನಿಂದ ಡೀಸೆಲ್ ಪೂರೈಸಿದ್ದಾರೆ. ಗುರುವಾರ ಜನರೇಟರ್ ಚಾಲೂ ಮಾಡಿಸಿ, ಸಿಗ್ನಲ್ ಪಡೆದು ಅಧಿಕಾರಿಗಳಿಗೆ ಪ್ರವಾಹ ಸ್ಥಿತಿಯ ಮಾಹಿತಿ ನೀಡಿದ್ದಾರೆ. ತಹಶೀಲ್ದಾರ್ ಭೇಟಿ
ಕಲ್ಮಕಾರು ಪರಿಹಾರ ಕೇಂದ್ರಕ್ಕೆ ಗುರುವಾರ ಸುಳ್ಯ ತಹಶೀಲ್ದಾರ್ ಕುಂಞಿ ಅಹಮ್ಮದ್ ಭೇಟಿ ನೀಡಿ, ಚರ್ಚಿಸಿದರು. ಸಂತ್ರಸ್ತ ಕುಟುಂಬಗಳಿಗೆ ನಿವೇಶನ ಒದಗಿಸಲು ಜಾಗ ಮೀಸಲಿರಿಸುವುದಕ್ಕಾಗಿ ಸ್ಥಳ ಗುರುತಿಸುವಂತೆ ಗ್ರಾಮ ಲೆಕ್ಕಿಗರಿಗೆ ಸೂಚಿಸಿ, ಈ ಬಾರಿ ಖಂಡಿತವಾಗಿಯೂ ಮನೆ ಒದಗಿಸುವುದಾಗಿ ಭರವಸೆ ನೀಡಿದರು. ಸಂತ್ರಸ್ತರ ಎಲ್ಲ ಆವಶ್ಯಕತೆಗಳನ್ನು ಪೂರೈಸುವಂತೆಯೂ ನೋಡಲ್ ಅಧಿಕಾರಿಗೆ ಸೂಚಿಸಿದರು. ಸಂತ್ರಸ್ತರ ಜತೆಗೆ ನಿಂತುಕೊಂಡೇ ಊಟ ಮಾಡಿದರು. ತಾ.ಪಂ. ಸದಸ್ಯ ಉದಯ ಕೊಪ್ಪಡ್ಕ, ಗುರುಪ್ರಸಾದ್ ಪಂಜ, ನಿತಿನ್ ಭಟ್ ಉಪಸ್ಥಿತರಿದ್ದರು.