Advertisement

ಜಿಲ್ಲೆಯಲ್ಲಿ ತಗ್ಗಿದ ಮಳೆ ಅಬ್ಬರ: ನಿಟ್ಟುಸಿರು ಬಿಟ್ಟ ಜನ

01:35 PM Aug 11, 2019 | Team Udayavani |

ಕಾರವಾರ: ಉತ್ತರ ಕನ್ನಡದ ಕರಾವಳಿಯಲ್ಲಿ ಮಳೆಯ ಅಬ್ಬರ ತಗ್ಗಿದೆ. ಆದರೆ ಘಟ್ಟದ ಮೇಲಿನ ಸಿದ್ದಾಪುರ, ಶಿರಸಿ, ಮುಂಡಗೋಡ, ಹಳಿಯಾಳದಲ್ಲಿ ಇನ್ನು ಮಳೆ ಬಿರುಸು ನಿಲ್ಲಿಸಿಲ್ಲ. ಸಿದ್ದಾಪುರದಲ್ಲಂತೂ ಶನಿವಾರ 153 ಮಿಮೀ ಮಳೆ ಸುರಿದಿದೆ. ಜಲಾಶಯಗಳಿಂದ ನೀರು ಹೊರ ಬಿಡುವುದು ನಿಲ್ಲಿಸಲಾಗಿದ್ದರೂ, ಈಗ ನೆರೆ ನಂತರದ ಗೋಳು ಆರಂಭವಾಗಿದೆ.

Advertisement

ನೆರೆ ಸಂತ್ರಸ್ತರಿಗೆ ವಿವಿಧ ಸಂಘ ಸಂಸ್ಥೆಗಳು ನೆರವು ನೀಡಲು ಮುಂದಾಗಿವೆ. ಆದರೆ ಇದು ಒಂದು ದಿನದ ಒಪ್ಪತ್ತಿನ ನೆರವು ಆಗಿದ್ದು, ಶಾಶ್ವತ ಪರಿಹಾರವನ್ನು ಸರ್ಕಾರ ನೀಡೀತೆ ಎಂದು ಕಾಯುತ್ತಿದ್ದಾರೆ. ನದಿ ದಂಡೆಯ ಜನರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಮನೆಯಲ್ಲಿನ ಎಲ್ಲ ಸಾಮಾಗ್ರಿಗಳು ನಾಶವಾಗಿವೆ. ಇವನ್ನೆಲ್ಲಾ ವರ್ಷಗಟ್ಟಲೇ ದುಡಿದು ಸಂಪಾದಿಸಿದ್ದು, 12 ತಾಸಿನ ನೆರೆಯಲ್ಲಿ ಕೊಚ್ಚಿ ಹೋಗಿದೆ. ಈಗ ಮುಳುಗಿದ ಬದುಕು ಕಟ್ಟುವುದು ಹೇಗೆ ಎಂದು ಸಂತ್ರಸ್ತರು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಕಾಳಿ ನದಿ ದಂಡೆಯ ನೆರೆ ಸಂತ್ರಸ್ತರ ಕಣ್ಣೀರು ಒರೆಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬರುವ ಭರವಸೆ ಇಟ್ಟುಕೊಂಡೇ ನಿಟ್ಟುಸಿರಿನೊಂದಿಗೆ ಸೋಮವಾರ ಹಳ್ಳಿಗಳತ್ತ ಹೆಜ್ಜೆ ಹಾಕಬೇಕಿದೆ.

ಜನರು ದಶಕಗಳಿಂದ ದುಡಿದು ಕಟ್ಟಿದ ಮನೆ ಸತತ ಮೂರು ದಿನಗಳ ಮಳೆಗೆ ನಾಶವಾಗಿವೆ. ಮತ್ತು ಕೃಷಿ ಭೂಮಿಯಲ್ಲಿ ಬೆಳೆದ ಬೆಳೆ ಕಳೆದುಕೊಂಡು ಖಾಲಿ ಕೈಯಲ್ಲಿ ನಿಂತಿದ್ದಾರೆ. ಕಾರವಾರ ತಾಲೂಕಿನ 35 ಗ್ರಾಮಗಳು, ಅಂಕೋಲಾ 33, ಹೊನ್ನಾವರ 12, ಯಲ್ಲಾಪುರ 5, ಉಳಿದ ತಾಲೂಕುಗಳಲ್ಲಿ ತಲಾ 2 ಗ್ರಾಮಗಳ ಜನರು ಎಲ್ಲವನ್ನು ಕಳೆದುಕೊಂಡಿದ್ದಾರೆ. ಅವರೀಗ ಸರ್ಕಾರದ ಸಹಾಯದತ್ತ ಮುಖ ಮಾಡಿದ್ದಾರೆ. ರಾಜ್ಯ ಸರ್ಕಾರ ಜಿಲ್ಲೆಯ 11 ತಾಲೂಕುಗಳನ್ನು ಪ್ರವಾಹ ಪೀಡಿತ ಜಿಲ್ಲೆಯೆಂದು ಶನಿವಾರ ಸಂಜೆ ಘೋಷಿಸಿದೆ. ಆದರೆ ಪರಿಹಾರ ತಲುಪುವ ತನಕ ಜನ ಕಾಯಬೇಕಿದೆ. ಜಿಲ್ಲೆಯಲ್ಲಿ ನೆರೆಯಿಂದ 9104 ಹೆಕ್ಟೇರ್‌ ಕೃಷಿ ಭೂಮಿ ಜಲಾವೃತ ಆಗಿದ್ದು, ಬೆಳೆ ಹಾನಿಯಾಗಿದೆ. 996,72 ಹೆ. ತೋಟಗಾರಿಕಾ ಬೆಳೆ ಹಾನಿಯಾಗಿದೆ. ಪ್ರಾಥಮಿಕ ಸಮೀಕ್ಷೆಯಲ್ಲಿ 2018 ಮನೆಗಳು ಬಿದ್ದಿವೆ. ಇನ್ನೂ ಭಾಗಶಃ ಬಿದ್ದ ಮನೆಗಳು 3 ಸಾವಿರ ದಾಟಬಹುದು. 26 ಜಾನುವಾರುಗಳು ಸತ್ತಿವೆ. ಈ ಸಂಖ್ಯೆ ಸಹ 100 ದಾಟಬಹುದು. ಅಧಿಕಾರಿಗಳು ಸಮೀಕ್ಷೆ ಆರಂಭಿಸಿದ್ದಾರೆ. ನಷ್ಟದ ಅಂದಾಜು ಸಹ ನಡೆದಿದೆ.

ನಾಲ್ವರ ಸಾವು: ಜಿಲ್ಲೆಯಲ್ಲಿ ಈವರೆಗೆ ಸುರಿದ ಭಾರಿ ಮಳೆಗೆ ನೆರೆಯಿಂದ ನಾಲ್ವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಹೇಳಿದೆ. ಈ ಪೈಕಿ ಒಂದು ಪ್ರಕರಣದಲ್ಲಿ ತಕ್ಷಣ 5 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ.

 

Advertisement

•ನಾಗರಾಜ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next