ಬೆಂಗಳೂರು: ಹೆಚ್ಚು ಕಡಿಮೆ ಎರಡು ವಾರಗಳ ಬಳಿಕ ನಗರದಲ್ಲಿ ಮಳೆ ಅಬ್ಬರಿಸಿತು. ಗುರುವಾರವಷ್ಟೇ ಗಣೇಶನ ಹಬ್ಬದಲ್ಲಿ ಮಿಂದೆದ್ದ ಜನ ಶುಕ್ರವಾರ, ಮಳೆಯಲ್ಲಿ ಮುಳುಗೆದ್ದರು. ಸಂಜೆ 5 ಗಂಟೆ ಸುಮಾರಿಗೆ ಆರಂಭವಾದ ಮಳೆ ಅಬ್ಬರ ಸತತ ಒಂದು ತಾಸಿಗೂ ಅಧಿಕ ಹೊತ್ತು ಮುಂದುವರಿಯಿತು. ಪರಿಣಾಮ ಅಲ್ಲಲ್ಲಿ ಮರಗಳು ಧರೆಗುರುಳಿದವು, ನಗರದ ಹಲವು ಭಾಗಗಳಲ್ಲಿ ಕತ್ತಲೆ ಆವರಿಸಿತು.
ಬಾಣಸವಾಡಿಯ ಸುಬ್ಬಣ್ಣಪಾಳ್ಯದಲ್ಲಿ ಮನೆಯ ಗೋಡೆಯೊಂದು ಕುಸಿದಿದೆ. ಬಾಣಸವಾಡಿಯ ಡಾ.ರಾಜ್‌ಕುಮಾರ್ ಉದ್ಯಾನ, ನ್ಯಾಯಾಂಗ ಬಡಾವಣೆ, ಲಿಂಗರಾಜಪುರದ ಆಂಧ್ರಬ್ಯಾಂಕ್ ಬಳಿ, ಕೋರಮಂಗಲದಲ್ಲಿ ಮರಗಳು ಬಿದ್ದ ಬಗ್ಗೆ ವರದಿಯಾಗಿದೆ.
ಸುಜಾತ ಚಿತ್ರಮಂದಿರ ರಸ್ತೆ ಜಂಕ್ಷನ್, ಓಕಳೀಪುರ ಅಂಡರ್‌ಪಾಸ್, ಶೇಷಾದ್ರಿಪುರ ಜಂಕ್ಷನ್, ಕಬ್ಬನ್‌ಪಾಕ್ ಮೆಟ್ರೋ ನಿಲ್ದಾಣ ಬಳಿ ಮತ್ತಿತರ ಕಡೆಗಳಲ್ಲಿ ನೀರು ರಸ್ತೆಯನ್ನು ಆವರಿಸಿದ್ದರಿಂದ ಜನ ಪರದಾಡಿದರು. ಇನ್ನು ಹಬ್ಬದ ಹಿನ್ನೆಲೆಯಲ್ಲಿ ಶೆಡ್ಯುಲ್‌ಗಳಿಗೆ ಕತ್ತರಿ ಬಿದ್ದಿತ್ತು. ಈ ಮಧ್ಯೆ ಮಳೆಯಿಂದ ಬಸ್‌ಗಳು ನಿಗದಿತ ಸಮಯಕ್ಕೆ ಬರಲಿಲ್ಲ. ಇದರಿಂದ ಪ್ರಯಾಣಿಕರು ಗಂಟೆಗಟ್ಟಲೆ ಕಾದುನಿಂತರು. ಬೆಂಗಳೂರು ಪೂರ್ವಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಿತ್ತು.
ಇದರ ನಡುವೆ ವಾಹನಗಳ ಭರಾಟೆಯ ಸದ್ದು ಅಡಗಿಹೋಯಿತು. ಹಬ್ಬಕ್ಕೆ ಬಹುತೇಕ ನಗರ ಖಾಲಿ ಆಗಿದ್ದರಿಂದ ವಾಹನದಟ್ಟಣೆ ಅಷ್ಟಾಗಿ ತಟ್ಟಲಿಲ್ಲ. ಆದರೂ ರಾತ್ರಿವರೆಗೆ ಒಂದಿಲ್ಲೊಂದು ಕಡೆ ಹನಿಯುತ್ತಿದ್ದುದರಿಂದ ಮೆಜೆಸ್ಟಿಕ್, ಮೆಯೊಹಾಲ್, ಮೈಸೂರು ರಸ್ತೆ, ಬೊಮ್ಮನಹಳ್ಳಿ, ಕೆ.ಆರ್. ಮಾರುಕಟ್ಟೆ-ಮಾಗಡಿ ರಸ್ತೆಗಳು ಸೇರಿದಂತೆ ಬಹುತೇಕ ನಗರದ ಹೃದಯಭಾಗಗಳಲ್ಲಿ ಸಂಚಾರದಟ್ಟಣೆ ಬಿಸಿ ತಟ್ಟಿತು. ನಗರದಲ್ಲಿ ಬೆಂಗಳೂರು ಉತ್ತರದಲ್ಲಿ ಅತಿ ಹೆಚ್ಚು 55 ಮಿ.ಮೀ. ಮಳೆ ದಾಖಲಾಗಿದೆ.
ಮಳೆ ಎಷ್ಟೆಷ್ಟು?: ಬೆಂಗಳೂರು ಉತ್ತರ 55 ಮಿ.ಮೀ., ಮಂಡೂರು 33.5, ದೇವನಹಳ್ಳಿ 24.5, ಬಿದರಹಳ್ಳಿ 51.5, ಕಣ್ಣೂರು 34.5, ದೊಡ್ಡಗುಬ್ಬಿ 37.5, ಮಾರೇನಹಳ್ಳಿ 49.5, ದೊಡ್ಡಜಾಲ 10, ಹುಣಸೆಮಾರನಹಳ್ಳಿ 10, ರಾಜಾನುಕುಂಟೆ 20, ಮಾದಾವರ 7.5, ಯಶವಂತಪುರ 15, ಆರ್.ಆರ್. ನಗರ 10.5, ಕೆಂಗೇರಿ 5, ಚಿಕ್ಕಬಾಣಾವರ 10.5 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.
ಇಂದೂ ಮಳೆ ಸಾಧ್ಯತೆ: ಮುಂಗಾರು ಚುರುಕುಗೊಂಡಿದ್ದರಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆ ಆಗುತ್ತಿದೆ. ಶನಿವಾರ ಕೂಡ ಮಳೆ ಬೀಳುವ ಸಾಧ್ಯತೆ ಇದೆ. ಆದರೆ, ಪ್ರಮಾಣ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.