ಬಾಗಲಕೋಟೆ: ಜಿಲ್ಲೆಯಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ರೈತರ ಬೆಳೆಗಳಿಗೆ ವಿತರಿಸಬೇಕಾದ ಬಾಕಿ ಪರಿಹಾರ ಒಂದು ದಿನದೊಳಗಾಗಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಸೂಚಿಸಿದರು.
ಜಿಪಂ ಸಭಾ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿಗೆ ಮುಂಗಾರು ಹಂಗಾಮಿನ ಬೆಳೆ ವಿವರ ದಾಖಲಿಸಲು ರೈತರಿಂದಲೇ ಸ್ವಯಂ ಬೆಳೆ ಸಮೀಕ್ಷೆ ಕೈಗೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ. ಬೆಳೆ ಸಮೀಕ್ಷೆಯಿಂದ ರೈತರಿಗೆ ಉಂಟಾಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಿ ಬೆಳೆ ಸಮೀಕ್ಷೆ ಕಾರ್ಯ ಯಶಸ್ವಿಗೆ ಅಧಿಕಾರಿಗಳು ಶ್ರಮಿಸಬೇಕು. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಶೇ.45ರಷ್ಟು ಬಿತ್ತನೆಯಾಗಿದ್ದು, ರೈತರು ತಾವು ಬೆಳೆದ ಬೆಳೆಯನ್ನು ವಿಮೆಗೆ ಒಳಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಏಕೆಂದರೆ ಪ್ರಕೃಷಿ ವಿಕೋಪದಿಂದ ನಷ್ಟ ಸಂಭವಿಸಿದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದರು.
ಕೃಷಿ ಚಟುವಟಿಕೆಗಳು ಚುರುಕಾಗಿ ನಡೆದಿದ್ದು, ಜಿಲ್ಲೆಯಲ್ಲಿ ರಸಗೊಬ್ಬರ ಅಕ್ರಮವಾಗಿ ದಾಸ್ತಾನು ಮಾಡುವವರ ಮೇಲೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ರಸಗೊಬ್ಬರ ಅಭಾವ ಸೃಷ್ಟಿಯಾಗದಂತೆ ಕೇವಲ ಕೃಷಿ ಇಲಾಖೆ ಅಧಿಕಾರಿಗಳು ಮಾತ್ರ ದಾಳಿ ನಡೆಸದೇ ಕಂದಾಯ ಇಲಾಖೆಯೂ ದಾಳಿ ನಡೆಸಿ ಅಕ್ರಮ ದಾಸ್ತಾನು ತಡೆಯಲು ಮುಂದಾಗಬೇಕು ಎಂದು ತಿಳಿಸಿದ ಅವರು, ಎಫ್‌ಪಿಒಗಳಿಗೆ ಸಾಕಷ್ಟು ಸೌಲಭ್ಯ ದೊರೆಯುತ್ತಿದ್ದು, ಸಾಕಷ್ಟು ಅನುದಾನ ದೊರೆಯುತ್ತಿದೆ ಎಂದು ತಿಳಿಸಿದರು.
ಜಲಜೀವನ ಮಿಷನ್ ಯೋಜನೆಗೆ ಹೆಚ್ಚಿನ ಒತ್ತು ನೀಡಿ ಮನೆ-ಮನೆಗೆ ನೀರು ಪೂರೈಸಬೇಕು. ನರೇಗಾ ಯೋಜನೆಯಲ್ಲಿ ಕಳೆದ ಸಾಲಿನಲ್ಲಿ ಟಾಪ್ ಲೆವೆಲ್ ಮಟ್ಟಕ್ಕೆ ಹೋಗಿತ್ತು. ಈ ವರ್ಷ ಪ್ರಗತಿಯಲ್ಲಿ ತಡವಾಗಿದೆ. ಹೆಚ್ಚಾಗಿ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಗಳಲ್ಲಿ ಹೆಚ್ಚಿನ ಒತ್ತು ಕೊಡಿ. ಅರಣ್ಯ ಇಲಾಖೆಯಲ್ಲಿ ಕ್ರಿಯಾ ಯೋಜನೆಗಳು ಕೇಂದ್ರ ಮಟ್ಟದಲ್ಲಿ ಅನುಮತಿ ಪಡೆಯಬೇಕಿದೆ. ಇನ್ನು ಮುಂದೆ ಜಿಲ್ಲಾ ಹಂತದಲ್ಲಿಯೇ ಅನುಮೋದನೆ ಕ್ರಮವಹಿಸುವುದಾಗಿ ತಿಳಿಸಲಾಯಿತು. ಜಿಪಂ ಸಿಇಒ ಟಿ. ಭೂಬಾಲನ್ ಕೃಷಿ ಮತ್ತು ತೋಟಗಾರಿಕೆಯಲ್ಲಿ ನರ್ಸರಿ ಮಾಡಲಾಗುತ್ತಿದೆ. ಎಸ್‌ಎಚ್‌ಜಿಗಳಿಗೆ ನೀಡಲಾಗುತ್ತಿದೆ. ಸರ್ಕಾರ ಹೊಸದಾಗಿ ಜಾರಿಗೆ ತಂದ ಅಮೃತ ಸರೋವರ ಯೋಜನೆಯಡಿ ಈಗಾಗಲೇ 15 ಪ್ರಸ್ತಾವನೆಗಳು ಬಂದಿದ್ದು, ಬರುವ ಆ.15ರೊಳಗಾಗಿ 75 ಪ್ರಸ್ತಾವನೆ ತಯಾರು ಮಾಡಲಾಗುತ್ತಿದೆ. ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಒತ್ತು ನೀಡುತ್ತಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನ ಯೋಜನೆಯಡಿ 5.93 ಕೋಟಿ ರೂ. ಕ್ರಿಯಾಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿದಂತೆ ಇತರರು ಇದ್ದರು.
ಅಧಿಕಾರಿಗಳಿಗೆ ಸೂಚನೆ ಜಿಲ್ಲೆಯಲ್ಲಿ ಜಮಖಂಡಿ, ರಬಕವಿ-ಬನಹಟ್ಟಿ, ಬೀಳಗಿ ಸೇರಿದಂತೆ 18.80 ಲಕ್ಷ ರೂ. ಪರಿಹಾರ ರೈತರ ಖಾತೆಗೆ ಜಮಾ ಮಾಡುವುದು ಬಾಕಿ ಉಳಿದಿದೆ. ಪಾವತಿಗೆ ಕೃಷಿ ಮತ್ತು ಕಂದಾಯ ಇಲಾಖೆಗಳು ಈ ಬಗ್ಗೆ ತಕ್ಷಣ ಜಂಟಿ ಸರ್ವೇ ಮಾಡಿ ಪಾವತಿಗೆ ಕ್ರಮವಹಿಸಬೇಕು. ಕ್ರಮ ವಹಿಸಿದ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಅಧಿ ಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.