Advertisement

ರಾಜ್ಯದಲ್ಲೇ ಕರಾವಳಿಯಲ್ಲಿ ಅತ್ಯಧಿಕ ಮಳೆ ಕೊರತೆ !

12:58 AM May 08, 2023 | Team Udayavani |

ಮಂಗಳೂರು: ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ರಾಜ್ಯದ ಕರಾವಳಿ ಭಾಗದಲ್ಲಿ ಈ ಬಾರಿ ಅತ್ಯಂತ ಕಡಿಮೆ ಪೂರ್ವ ಮುಂಗಾರು ಮಳೆಯಾಗಿದ್ದು, ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.

Advertisement

ದಕ್ಷಿಣ ಒಳನಾಡಿನಲ್ಲಿ ಶೇ. 30ರಷ್ಟು ಮಳೆ ಹೆಚ್ಚಳ, ಉತ್ತರ ಒಳನಾಡಿನಲ್ಲಿ ಶೇ. 53 ಹೆಚ್ಚಳ, ಮಲೆನಾಡಿನಲ್ಲಿ ಶೇ. 52 ಮಳೆ ಕೊರತೆ ಇದೆ. ದೇಶದ ಮಟ್ಟದಲ್ಲಿ ಶೇ. 28ರಷ್ಟು ಹೆಚ್ಚುವರಿ ಮಳೆಯಾಗಿದೆ. ಆದರೆ ಕರಾವಳಿ ಭಾಗದಲ್ಲಿ ಶೇ. 77ರಷ್ಟು ಮಳೆ ಕೊರತೆ ಇದ್ದು, ಇಷ್ಟೊಂದು ಕೊರತೆ ಅನುಭವಿಸುತ್ತಿರುವುದು ಇದೇ ಮೊದಲು. ಮಾರ್ಚ್‌ನಿಂದ ಎಪ್ರಿಲ್‌ 6ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 86 ಮಿ.ಮೀ. ಸುರಿಯಬೇಕಾದ ವಾಡಿಕೆ ಮಳೆಯಲ್ಲಿ 22 ಮಿ.ಮೀ. ಸುರಿದು ಶೇ. 74ರಷ್ಟು ಕೊರತೆ ಇದೆ. ಉಡುಪಿ ಜಿಲ್ಲೆಯಲ್ಲಿ 45 ಮಿ.ಮೀ. ವಾಡಿಕೆ ಮಳೆಯಲ್ಲಿ 9 ಮಿ.ಮೀ. ಮಳೆ ಸುರಿದು ವಾಡಿಕೆಗಿಂತ ಶೇ. 80 ಕಡಿಮೆ ಇದೆ.

ಮಂಗಳೂರು, ಬೈಂದೂರಿನಲ್ಲಿ ಭಾರೀ ಕೊರತೆ
ಮಂಗಳೂರು ಮತ್ತು ಬೈಂದೂರಿನಲ್ಲಿ ಮಳೆ ಪ್ರಮಾಣ ಭಾರೀ ಕಡಿಮೆ. ದ.ಕ.ದ ಬೆಳ್ತಂಗಡಿಯಲ್ಲಿ ಶೇ. 75, ಬಂಟ್ವಾಳದಲ್ಲಿ ಶೇ. 87, ಮಂಗಳೂರಿನಲ್ಲಿ ಶೇ. 98, ಪುತ್ತೂರಿನಲ್ಲಿ ಶೇ. 24, ಸುಳ್ಯದಲ್ಲಿ ಶೇ. 61, ಮೂಡುಬಿದಿರೆಯಲ್ಲಿ ಶೇ. 87, ಕಡಬದಲ್ಲಿ ಶೇ. 78 ಮಳೆ ಕೊರತೆಯಾಗಿದೆ. ಅದೇ ರೀತಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಶೇ. 83, ಕುಂದಾಪುರದಲ್ಲಿ ಶೇ. 96, ಉಡುಪಿಯಲ್ಲಿ ಶೇ. 85, ಬೈಂದೂರಿನಲ್ಲಿ ಶೇ. 98, ಬ್ರಹ್ಮಾವರದಲ್ಲಿ ಶೇ. 89, ಕಾಪುವಿನಲ್ಲಿ ಶೇ. 70 ಮತ್ತು ಹೆಬ್ರಿಯಲ್ಲಿ ಶೇ. 65ರಷ್ಟು ಕೊರತೆ ಉಂಟಾಗಿದೆ.
ಜೂನ್‌ ಮೊದಲ ವಾರದಲ್ಲಿ ಮುಂಗಾರು ಆರಂಭವಾಗಲಿದ್ದು, ವಾಡಿಕೆಯಂತೆ ಅಥವಾ ಅದಕ್ಕಿಂತ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆ ಇದೆ.

ಮಳೆ ಕೊರತೆಗೆ ಕಾರಣವೇನು?
ಸಾಮಾನ್ಯವಾಗಿ ಪೂರ್ವ ಮುಂಗಾರು ಆರಂಭ ಉತ್ತಮವಾಗಿರುತ್ತದೆ. ಆದರೆ ಈ ಬಾರಿ ಆರಂಭದಲ್ಲೇ ಕ್ಷೀಣಿಸಿತ್ತು. ಮಾರ್ಚ್‌-ಎಪ್ರಿಲ್‌ನಲ್ಲಿ ಸಾಮಾನ್ಯವಾಗಿ ಉತ್ತರ ಭಾಗದಿಂದ ತೇವಾಂಶ ಯುತ ಗಾಳಿ ಬೀಸುತ್ತದೆ. ಆದರೆ ಈ ಬಾರಿ ಆ ರೀತಿ ಆಗಲಿಲ್ಲ. ಪರಿಣಾಮವಾಗಿ ವಾತಾವರಣದಲ್ಲಿ ತೇವಾಂಶ ಇಲ್ಲದ ಕಾರಣ ಮೋಡ ಸೃಷ್ಟಿ ಯಾಗುತ್ತಿಲ್ಲ. ಅಲ್ಲದೆ ಈ ಹಿಂದೆ ಪೂರ್ವ ಮುಂಗಾರು ಆರಂಭದಲ್ಲೇ ಚಂಡಮಾರುತ ಸೃಷ್ಟಿಯಾಗಿ ಮಳೆ ತರುತ್ತಿತ್ತು. ಈ ಬಾರಿ ಅದಾಗಿಲ್ಲ.

ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಪೂರ್ವ ಮುಂಗಾರು ಆರಂಭ ಉತ್ತಮವಾಗಿರುತ್ತದೆ. ತೇವಾಂಶಯುಕ್ತ ಗಾಳಿ ಬೀಸಿದರೆ ಮೋಡ ಸೃಷ್ಟಿಯಾಗಿ ಮಳೆ ಸುರಿಯುತ್ತದೆ. ಆದರೆ ಈ ಬಾರಿ ಆ ರೀತಿಯ ಲಕ್ಷಣ ಕಾಣಿಸಿಕೊಂಡಿಲ್ಲ. ಚಂಡಮಾರುತವೂ ಸೃಷ್ಟಿಯಾಗಿಲ್ಲ. ಇದೇ ಬೇಸಗೆ ಮಳೆ ಕೊರತೆಗೆ ಕಾರಣ. ಸದ್ಯದ ಮುನ್ಸೂಚನೆಯಂತೆ ಈ ವಾರದ ಅಂತ್ಯದೊಳಗೆ ಮಳೆಯಾಗುವ ಸಾಧ್ಯತೆ ಇದೆ.
– ಪ್ರಸಾದ್‌, ಭಾರತೀಯ ಹವಾಮಾನ ಇಲಾಖೆ ಅಧಿಕಾರಿ

Advertisement

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next