Advertisement

ಗಾಳಿ ಮಳೆಗೆ ವಿದ್ಯುತ್‌ ವ್ಯವಸ್ಥೆ ಅಸ್ತವ್ಯಸ್ತ

11:28 PM Aug 08, 2019 | mahesh |

ಪುತ್ತೂರು: ಮೂರು ದಿನಗಳಿಂದ ಸುರಿಯುತ್ತಿರುವ ಗಾಳಿ ಸಹಿತ ಕುಂಭದ್ರೋಣ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬುಧವಾರ ಸಂಜೆಯಿಂದ ಬೀಸಿದ ಭಾರೀ ಗಾಳಿಗೆ ನಗರದ ಸಹಿತ ಗ್ರಾಮಾಂತರ ಭಾಗಗಳಲ್ಲಿ ವಿದ್ಯುತ್‌ ವ್ಯವಸ್ಥೆ ಬಹುತೇಕ ಕೈಕೊಟ್ಟಿದೆ.

Advertisement

ಬುಧವಾರ ರಾತ್ರಿಯಿಡೀ ಕತ್ತಲಲ್ಲಿ ಕಳೆದ ಗ್ರಾಮಾಂತರದ ಜನ ಗುರುವಾರ ಹಗಲಲ್ಲಿ ವಿದ್ಯುತ್ತಿಲ್ಲದೆ ಬವಣೆ ಪಡಬೇಕಾಯಿತು. ಪುತ್ತೂರು ಮೆಸ್ಕಾಂ ವಿಭಾಗದ ಎಲ್ಲ ಉಪ ವಿಭಾಗಗಳಲ್ಲೂ ವಿದ್ಯುತ್‌ ಪೂರೈಕೆ ಸಮಸ್ಯೆ ಉಲ್ಬಣಿಸಿದೆ. ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಕಡಬ, ಸುಬ್ರಹ್ಮಣ್ಯ ಮತ್ತು ಸುಳ್ಯ ಉಪ ವಿಭಾಗಗಳ ಪೈಕಿ ಪುತ್ತೂರು ನಗರದ ಸಮಸ್ಯೆ ಒಂದಷ್ಟು ನಿವಾರಣೆಯಾಗಿದ್ದರೂ ಇತರ ಉಪ ವಿಭಾಗಗಳ ಸಮಸ್ಯೆ ನಿವಾರಿಸಲು ಮೆಸ್ಕಾಂ ರಾತ್ರಿ ಹಗಲು ಶ್ರಮಿಸುತ್ತಿದೆ.

ಬುಧವಾರ ರಾತ್ರಿಯಿಂದ ಬಹುತೇಕ ಕಡೆಗಳಲ್ಲಿ ಬಲವಾದ ಸುಂಟರಗಾಳಿ ಬೀಸಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ಅಲ್ಲಲ್ಲಿ ಮರಗಳು, ಮರದ ಗೆಲ್ಲುಗಳು ತುಂಡಾಗಿ ಬಿದ್ದಿದ್ದು, ಇದರ ನೇರ ಪರಿಣಾಮ ವಿದ್ಯುತ್‌ ಲೈನ್‌ಗಳ ಮೇಲೆ ಬಿದ್ದಿದೆ. ಎರಡು ದಿನಗಳ ಮೊದಲ ಲೆಕ್ಕಾಚಾರದ ಪ್ರಕಾರ ಇಡೀ ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ 75 ಕಂಬಗಳು ತುಂಡಾಗಿದ್ದು, ಎರಡು ಪರಿವರ್ತಕಗಳು ಹಾನಿಗೀಡಾಗಿದ್ದವು. ಇಲ್ಲೆಲ್ಲ ಹೊಸ ಕಂಬ ಅಳವಡಿಸಿ, ಟಿಸಿ ದುರಸ್ತಿಗೊಳಿಸಿ ಮತ್ತೆ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಬುಧವಾರ ಮತ್ತೆ ಗಾಳಿಯ ನರ್ತನ ಸಮಸ್ಯೆ ತಂದೊಡ್ಡಿದೆ.

ಪರಿವರ್ತಕಗಳಿಗೆ ಹಾನಿ
ಗುತ್ತಿಗಾರು ಮತ್ತು ಬೆಟ್ಟಂಪಾಡಿಗಳಲ್ಲಿ ಪರಿವರ್ತಕಗಳು ಹಾಳಾಗಿದ್ದು, ಸರಿಪಡಿಸಲಾಗಿದೆ. ಬಡಕ್ಕೋಡಿ, ಕುಕ್ಕುನಾಜೆ, ಪದಡ್ಕ, ಕಜೆಮೂಲೆ, ದುಗ್ಗಳ, ಬಿಂತೋಡಿ, ಸಜಂಕಾಡಿಗಳ ಟಿಸಿಗಳು ಹಾನಿಗೀಡಾಗಿವೆ. ಮಳೆ, ಗಾಳಿ ಮುಂದುವರಿದರೆ ವಿದ್ಯುತ್‌ ಸಮಸ್ಯೆ ಮತ್ತು ಜನರ ಬವಣೆ ಉಲ್ಬಣಗೊಳ್ಳುವ ಅಪಾಯವಿದೆ.

ಮಾನ್ಸೂನ್‌ ಗ್ಯಾಂಗ್‌ಮನ್‌ಗಳು ಮರ ಕತ್ತರಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಎಲ್ಲ ಸಿಬಂದಿ ರಾತ್ರಿ ಹಗಲು ಕೆಲಸ ಮಾಡುತ್ತಿದ್ದಾರೆ. ಸಂಜೆಯ ವೇಳೆಗೆ ಎಲ್ಲ ಕೆಲಸ ಮುಗಿಸಿ ಮರು ಪೂರೈಕೆ ಮಾಡ ಬಹುದು ಎಂಬ ವಿಶ್ವಾಸದಲ್ಲಿದ್ದೇವೆ. ಅಷ್ಟರಲ್ಲಿ ಬೇರೆಲ್ಲಾದರೂ ಸಮಸ್ಯೆ ಕಾಣಿಸಿಕೊಂಡರೆ ಕಷ್ಟ ಎನ್ನುತ್ತಾರೆ ಅಧಿಕಾರಿಗಳು.

Advertisement

ಸಮಸ್ಯೆಯ ಸರಮಾಲೆ
ನಿರಂತರವಾಗಿ ವಿದ್ಯುತ್‌ ಕೈಕೊಡುತ್ತಿರುವ ಕಾರಣ ಮನೆಯಲ್ಲಿ ಅಡುಗೆ ಮಾಡಲು ಸಮಸ್ಯೆಯಾಗಿದ್ದು, ಕುಡಿಯುವ ನೀರಿನ ಸಮಸ್ಯೆಯೂ ಕಾಣಿಸಿಕೊಂಡಿದೆ. ಬಾವಿ, ಬೋರ್‌ಗಳಲ್ಲಿ ನೀರಿದ್ದರೂ ನೀರೆತ್ತಲು ವಿದ್ಯುತ್ತಿಲ್ಲ. ಟ್ಯಾಂಕಿಗಳೆಲ್ಲ ಖಾಲಿಯಾಗಿವೆ ಎಂದು ಜನರು ಅಲವತ್ತುಕೊಳ್ಳುತ್ತಿದ್ದಾರೆ. ಹೊಟೇಲ್ ಉದ್ಯಮಗಳಿಗೂ ತಿಂಡಿ, ಊಟ ತಯಾರಿಸಲು ಸಮಸ್ಯೆಯಾಗಿದೆ. ಇನ್ನೊಂದು ಕಡೆ ಮೊಬೈಲ್ ಚಾರ್ಜ್‌ ಮಾಡಲಾಗದೆ, ಇಂಟರ್ನೆಟ್ ಬಳಸ ಲಾಗದೆ ಜನ ಕಂಗಾಲಾಗಿದ್ದಾರೆ. ಕೆಲವೆಡೆ ಮೊಬೈಲ್ ಟವರ್‌ಗಳು ಕೂಡ ವಿದ್ಯುತ್‌ ಅಭಾವ ದಿಂದಾಗಿ ಕೈಕೊಡುತ್ತಿವೆ. ವಿಶೇಷವಾಗಿ ಸುಳ್ಯ ಮತ್ತು ಪುತ್ತೂರು ಭಾಗದಲ್ಲಿ ಬಿಎಸ್ಸೆನ್ನೆಲ್ ಮೊಬೈಲ್ ಟವರ್‌ಗಳು ವಿದ್ಯುತ್ತನ್ನೇ ಅವಲಂಬಿಸಿದ್ದು, ಜನರೇಟರ್‌ ಅಥವಾ ಬ್ಯಾಟರಿ ವ್ಯವಸ್ಥೆ ಹೊಂದಿಲ್ಲ.

ಪುತ್ತೂರು ನಗರ ಉಪ ವಿಭಾಗ ವ್ಯಾಪ್ತಿಯಲ್ಲಿ 9 ಕಂಬಗಳು ತುಂಡಾಗಿವೆ. ಬುಳೇರಿಕಟ್ಟೆ, ನೆಕ್ಕಿಲಾಡಿ, ಉಪ್ಪಿನಂಗಡಿ ಮೊದಲಾದ ಕಡೆಗಳಲ್ಲಿ ವಿದ್ಯುತ್‌ ವ್ಯವಸ್ಥೆಗೆ ಹಾನಿಯಾಗಿದೆ ಎಂದು ನಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ. ಗ್ರಾಮಾಂತರ ಉಪ ವಿಭಾಗದಲ್ಲಿ 33 ಕಂಬಗಳು ತುಂಡಾಗಿದ್ದು, 7 ಪರಿವರ್ತಕಗಳು ಹಾನಿಗೊಂಡಿವೆ ಎಂದು ಗ್ರಾಮಾಂತರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಮಚಂದ್ರ ಹೇಳಿದ್ದಾರೆ.

ವ್ಯಾಪಕ ಹಾನಿ
ಪುತ್ತೂರು ನಗರ ಉಪ ವಿಭಾಗ ವ್ಯಾಪ್ತಿಯಲ್ಲಿ 9 ಕಂಬಗಳು ತುಂಡಾಗಿವೆ. ಬುಳೇರಿಕಟ್ಟೆ, ನೆಕ್ಕಿಲಾಡಿ, ಉಪ್ಪಿನಂಗಡಿ ಮೊದಲಾದ ಕಡೆಗಳಲ್ಲಿ ವಿದ್ಯುತ್‌ ವ್ಯವಸ್ಥೆಗೆ ಹಾನಿಯಾಗಿದೆ ಎಂದು ನಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ. ಗ್ರಾಮಾಂತರ ಉಪ ವಿಭಾಗದಲ್ಲಿ 33 ಕಂಬಗಳು ತುಂಡಾಗಿದ್ದು, 7 ಪರಿವರ್ತಕಗಳು ಹಾನಿಗೊಂಡಿವೆ ಎಂದು ಗ್ರಾಮಾಂತರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಮಚಂದ್ರ ಹೇಳಿದ್ದಾರೆ.

ಶಕ್ತಿ ಮಿರಿ ಪ್ರಯತ್ನ

ಮಳೆಗಾಲದಲ್ಲಿ ತುರ್ತು ಕೆಲಸಗಳನ್ನು ನಿರ್ವಹಿಸಲೆಂದೇ ಮೆಸ್ಕಾಂ ಮಾನ್ಸೂನ್‌ ಗ್ಯಾಂಗ್‌ಮನ್‌ಗಳನ್ನು ನೇಮಿಸಿಕೊಳ್ಳುತ್ತದೆ. ಪ್ರತೀ ಸೆಕ್ಷನ್‌ ವ್ಯಾಪ್ತಿಯಲ್ಲಿ ಮೂವರು ಗ್ಯಾಂಗ್‌ಮನ್‌ಗಳಿದ್ದಾರೆ. ಮರ, ಗೆಲ್ಲು ಮುರಿದು ಬಿದ್ದಾಗ ಅವುಗಳನ್ನು ತೆರವು ಮಾಡುವ ಕೆಲಸವನ್ನು ಇವರು ಮಾಡುತ್ತಾರೆ. ಇದರೊಂದಿಗೆ ಮೆಸ್ಕಾಂ ಸಿಬಂದಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.
– ನರಸಿಂಹ,ಪುತ್ತೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್‌, ಮೆಸ್ಕಾಂ

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next