Advertisement

Rain ಬರಲಿ, ಬರ ದೂರ ಇರಲಿ: ನಂದಿನಿ, ಶಾಂಭವಿ ನದಿಗಳ ಒಡಲಲ್ಲೂ ನೀರಿಲ್ಲ!

11:35 PM Sep 03, 2023 | Team Udayavani |

ಮಂಗಳೂರು: ಪ್ರತೀ ಮಳೆಗಾದಲ್ಲಿಯೂ ಮೈದುಂಬಿ ಹರಿಯುವ ನಂದಿನಿ, ಶಾಂಭವಿ ನದಿಗಳಲ್ಲಿ ಈ ವರ್ಷ ನೀರಿನ ಹರಿವು ತೀರಾ ಕಡಿಮೆಯಿದೆ. ಮುಂದಿನ ಎರಡು ವಾರ ಮಳೆ ಸುರಿಯದಿದ್ದರೆ ಮತ್ತೆ “ಬರ’ದ ಪರಿಸ್ಥಿತಿ ಎದುರಾಗಬಹುದು.

Advertisement

ನಂದಿನಿ ನದಿ ಕಳೆದ ಬೇಸಗೆಯಲ್ಲಿಯೂ ಸಂಪೂರ್ಣ ಬತ್ತಿ ಹೋಗಿ ತೀವ್ರ ಜಲಕ್ಷಾಮ ಉಂಟಾಗಿತ್ತು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೂ ಜಲಕ್ಷಾಮ ತಟ್ಟಿತ್ತು. ಶಾಲೆಗಳಲ್ಲಿ ಬಿಸಿಯೂಟಕ್ಕೂ ನೀರಿನ ಕೊರತೆ ಉಂಟಾಗಿತ್ತು. ಆದರೆ ಈ ವರ್ಷ ಜೂನ್‌ ಎರಡನೇ ವಾರ ಮತ್ತು ಜುಲೈ ಅಂತ್ಯಕ್ಕೆ ಸುರಿದ ಮಳೆಯಿಂದಾಗಿ ತುಸು ನೀರಿನ ಬವಣೆ ತಪ್ಪಿತ್ತು. ಬಳಿಕ ಮಳೆಯ ಕೊರತೆ ಕಾಣಿಸಿಕೊಂಡಿದ್ದು, ಪ್ರಸ್ತುತ ಕೆಲವು ಕಡೆಗಳಲ್ಲಿ ನದಿಯ ತಳಭಾಗ ಕಾಣಿಸುತ್ತಿದೆ.

ಈ ನದಿಯ ನೀರನ್ನೇ ನಂಬಿಕೊಂಡು ಕೃಷಿ ಚಟುವಟಿಕೆಗಳು ನಡೆಯುತ್ತಿದ್ದು, ದುರ್ಬಲ ಮುಂಗಾರು ಇದೇ ರೀತಿ ಮುಂದುವರಿದರೆ ಕೃಷಿ ಮತ್ತು ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಸಾಧ್ಯತೆ ಇದೆ. ನಂದಿನಿ ನದಿಗೆ ವಿಷ್ಣುಮೂರ್ತಿ ದೇವಸ್ಥಾನ ಬಳಿ, ಪಳ್ಳ, ಒಂಟಿಮಾರು, ಚೇಳಾçರು, ಕಟೀಲು ಸಹಿತ ವಿವಿಧ ಕಡೆಗಳಲ್ಲಿ ಕಿಂಡಿ ಅಣೆಕಟ್ಟು ಕಟ್ಟಲಾಗಿದೆ. ಸದ್ಯಕ್ಕೆ ಬಹುತೇಕ ಕಡೆಗಳಲ್ಲಿ ಅಣೆಕಟ್ಟಿನ ಬಾಗಿಲು ತೆರೆದಿದೆ. ಮಳೆ ಮತ್ತಷ್ಟು ದೂರವಾದರೆ ಸದ್ಯದಲ್ಲೇ ಹಲಗೆ ಅಳವಡಿಸಬೇಕಾದ ಪರಿಸ್ಥಿತಿ ಉಂಟಾಗಬಹುದು.

ಶಾಂಭವಿಯಲ್ಲೂ ಕೊರತೆ: ನಂದಿನಿಯಂತೆ ಶಾಂಭವಿ ನದಿಯಲ್ಲಿಯೂ ನೀರಿನ ಕೊರತೆ ಎದುರಾಗಿದೆ. ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ಶಾಂಭವಿ ನದಿಯಲ್ಲಿ ಉಪ್ಪಿನ ಅಂಶ ಹೆಚ್ಚಿರುವ ಕಾರಣ ನೀರನ್ನು ಕುಡಿಯಲು ಅಥವಾ ಕೃಷಿ ಚಟುವಟಿಕೆಗೆ ಬಳಸುವುದು ಕಡಿಮೆ. ನಂದಿನಿ ಮತ್ತು ಶಾಂಭವಿ ನದಿ ನೀರು ಒಟ್ಟಾಗಿ ಸಸಿಹಿತ್ಲು ಬಳಿ ಸಮುದ್ರ ಸೇರುತ್ತದೆ.

ಸಂಕಲಕರಿಯ, ಪಲಿಮಾರು, ಕರ್ನಿರೆ, ಮೂಲ್ಕಿ ಸಹಿತ ಕೆಲವೊಂದು ಕಡೆಗಳಲ್ಲಿ ಕಿಂಡಿ ಅಣೆಕಟ್ಟು ಇದೆ. ಶಾಂಭವಿ ನದಿಯನ್ನು ಹೊಂದಿಕೊಂಡು ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪುಗೊಂಡಿದ್ದು, 14 ಗ್ರಾಮಗಳಿಗೆ ಈ ನದಿಯಿಂದಲೇ ನೀರು ಸರಬರಾಜು ಆಗುತ್ತದೆ. ಸದ್ಯ ನೀರಿನ ಮಟ್ಟ ಕಡಿಮೆಯಾದ ಹಿನ್ನೆಲೆಯಲ್ಲಿ ಬೇಸಗೆಯ ಮೊದಲೇ ಕುಡಿಯುವ ನೀರಿನ ತೊಂದರೆ ಉಂಟಾಗಬಹುದು.

Advertisement

ಕಟೀಲು ಕ್ಷೇತ್ರಕ್ಕೂ ಜಲಕ್ಷಾಮದ ಭೀತಿ!
“ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರವನ್ನು ಹೊಂದಿಕೊಂಡಿರುವ ನಂದಿನಿಯಲ್ಲಿ ನೀರಿಲ್ಲದ ಪರಿಣಾಮ ಕಳೆದ ಬೇಸಗೆಯಲ್ಲಿ ಕ್ಷೇತ್ರಕ್ಕೆ ಜಲಕ್ಷಾಮ ಎದುರಾಗಿತ್ತು. ಆದರೆ ಈ ಬಾರಿ ಅದಕ್ಕೂ ಮುನ್ನ ನೀರಿನ ಕೊರತೆ ಎದುರಾಗುವ ಲಕ್ಷಣ ಕಾಣುತ್ತಿದೆ. ನಂದಿನಿಯಲ್ಲಿ ನೀರಿನ ಹರಿವು ಕ್ಷೀಣಿಸಿದ್ದರೂ ಸದ್ಯಕ್ಕೆ ಕ್ಷೇತ್ರಕ್ಕೆ ನೀರಿನ ಸಮಸ್ಯೆ ಇಲ್ಲ. ಆದರೆ ಮುಂದಿನ ಕೆಲವು ದಿನ ಮಳೆ ಬಾರದೆ ಇದ್ದರೆ ಮತ್ತೆ ಜಲಕ್ಷಾಮದ ಭೀತಿ ಎದುರಾಗಬಹುದು. ಉತ್ತಮ ಮಳೆ ಸುರಿಯಲೆಂದು ಕ್ಷೇತ್ರದಲ್ಲಿ ಪರ್ಜನ್ಯ ಜಪ ಮಾಡಲು ಉದ್ದೇಶಿಸಲಾಗಿದೆ’ಎನ್ನುತ್ತಾರೆ ಶ್ರೀ ಕ್ಷೇತ್ರ ಕಟೀಲಿನ ಹರಿನಾರಾಯಣ ಆಸ್ರಣ್ಣ.

ಶಾಂಭವಿಗೆ ಹೋಲಿಸಿದರೆ ನಂದಿನಿ ನದಿಯಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗಿದೆ. ನದಿ ನೀರನ್ನು ಅವಲಂಬಿಸಿ ಅನೇಕ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಮಳೆ ಬಾರದೆ ಇದ್ದರೆ ಸದ್ಯದಲ್ಲೇ ನೀರಿನ ಕ್ಷಾಮ ಉಂಟಾಗಬಹುದು. ನಾವು ಕೂಡ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ. ಸದ್ಯದಲ್ಲೇ ಹೆಚ್ಚುವರಿ ಕೊಳವೆಬಾವಿ ಕೊರೆಸಲಾಗುವುದು.
– ನಾಗರಾಜ್‌,
ಹಿರಿಯ ಅಧಿಕಾರಿ,
ಕಿನ್ನಿಗೋಳಿ ಪಟ್ಟಣ ಪಂಚಾಯತ್‌

ನದಿಯಲ್ಲಿ ನೀರಿನ ಮಟ್ಟ ತೀರಾ ಕಡಿಮೆಯಾಗಿದೆ. ಇದು ಕೃಷಿ ಚಟುವಟಿಕೆಯ ಮೇಲೂ ಪರಿಣಾಮ ಬೀರಿದೆ. ಮಳೆ ಇಲ್ಲದ ಕಾರಣ ಸದ್ಯ ಪಂಪ್‌ ಚಾಲೂ ಮಾಡಲಾಗುತ್ತಿದೆ. ಮುಂದೆ ಕೆಲವು ದಿನಗಳಲ್ಲಿ ಮಳೆ ಬಾರದೇ ಇದ್ದರೆ ಸಮಸ್ಯೆ ಉಂಟಾಗಬಹುದು.
– ಸುಧಾಕರ ಸಾಲ್ಯಾನ್‌,
ಕೃಷಿಕ, ಸಂಕಲಕರಿಯ

Advertisement

Udayavani is now on Telegram. Click here to join our channel and stay updated with the latest news.

Next