Advertisement

ಭಕ್ತ ಜನರಿಂದ ತುಂಬಿತು ಕಾಡು-ನಾಡು; ನಾಗಾರಾಧನೆಗೆ ಮಳೆ ಕೃಪೆ

11:53 PM Aug 05, 2019 | sudhir |

ಉಡುಪಿ: ಪೇಟೆ, ಪಟ್ಟಣ, ಕಾಡು ಗದ್ದೆ ಹಾದಿ, ರಸ್ತೆ ಬದಿ – ಎಲ್ಲೆಲ್ಲೂ ಭಕ್ತ ಜನರ ಗುಂಪು. ಹಸಿರು ಗದ್ದೆ ಸಾಲುಗಳ ನಡುವಿನ ಹಾದಿಯುದ್ದಕ್ಕೂ ತಮ್ಮ ತಮ್ಮ ಮೂಲ ನಾಗನ ಸನ್ನಿಧಿಗೆ ಹೋಗುವ ಧಾವಂತ…ವಾಹನದಲ್ಲಿ ಹೋದವರಿಗೆ ಕಿರಿದಾದ ರಸ್ತೆಗಳು, ವಾಹನ ದಟ್ಟಣೆ, ರಸ್ತೆಗಳಿಲ್ಲದ ಕಾಲು ಹಾದಿಯ ಸವಾಲು. ಆಗೊಮ್ಮೆ ಈಗೊಮ್ಮೆ ಸುರಿದು ಹೋಗುತ್ತಿದ್ದ ಮಳೆಯ ನಡುವೆಯೇ ನಾಗನಿಗೆ ತನು ತಂಬಿಲಕ್ಕೆ ಬೇಕಾದ ಪರಿಕರಗಳ ಖರೀದಿಯ ಸಂಭ್ರಮ…

Advertisement

ತುಳುನಾಡಿನಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲ್ಪಡುವ ನಾಗರಪಂಚಮಿ ಈ ಬಾರಿಯೂ ಅಪಾರ ಶ್ರದ್ಧಾ ಭಕ್ತಿ ಸಂಭ್ರಮೋಲ್ಲಾಸದಿಂದ ಸೋಮವಾರ ನಡೆಯಿತು. ಹಿರಿಯರು-ಕಿರಿಯರು ಕುಟುಂಬ ಸಮೇತವಾಗಿ ನಾಗಬನಗಳಿಗೆ ತೆರಳಿ ವಿವಿಧ ರೀತಿಯ ಸೇವೆಗಳನ್ನು ಸಮರ್ಪಿಸಿದರು. ತಮ್ಮ ಕುಟುಂಬದ ಮೂಲ ನಾಗನ ಸನ್ನಿಧಾನಕ್ಕೆ ತೆರಳಿದ ಅನಂತರ ತಮ್ಮ ಊರಿನ ಸುಬ್ರಹಣ್ಯ ದೇವಸ್ಥಾನಗಳಿಗೆ ತೆರಳಿದವರು ಹಲವರು. ಇದರಿಂದಾಗಿ ದೇವಸ್ಥಾನಗಳಲ್ಲಿಯೂ ಜನ ಸಂದಣಿಯಿತ್ತು. ಹಲವು ಸುಬ್ರಹ್ಮಣ್ಯ ದೇವಸ್ಥಾನ ಗಳು ಹಾಗೂ ಕೆಲವು ಕುಟುಂಬಿಕರ ಮೂಲ ನಾಗ ಬನಗಳಲ್ಲಿ ಅನ್ನಸಂತರ್ಪಣೆಯೂ ನಡೆಯಿತು. ಜಾಗದ ನಾಗದೇವರಿಗೂ ಹಾಲು-ಬೊಂಡಾಭಿಷೇಕ ನೆರವೇರಿತು.

ಕುಟುಂಬ ಸಮ್ಮಿಲನ

‘ನಾವು ವರುಷಕ್ಕೊಮ್ಮೆ ನಾಗಬನದಲ್ಲಿಯಾದರೂ ಒಂದಾಗುತ್ತೇವೆ. ನಮ್ಮ ಒಂದು ಕುಟುಂಬ ಮಾತ್ರವಲ್ಲದೆ ನಮ್ಮ ಸಮುದಾಯದ ಹಲವು ಕುಟುಂಬಗಳ ಸಮ್ಮಿಲನಕ್ಕೆ ನಾಗಬನ ಕಾರಣ ವಾಗುತ್ತಿದೆ. ದೇವರ ದರ್ಶನ, ಸೇವಾ ಭಾಗ್ಯದ ಜತೆಗೆ ಇಡೀ ಕುಟುಂಬದ ಬಹುತೇಕ ಮಂದಿಯನ್ನು ಭೇಟಿಯಾಗುವ ಅವಕಾಶವೂ ದೊರೆಯಿತು’ ಎಂದು ಉದ್ಯಾವರ ಸಮೀಪ ನಾಗನಿಗೆ ತನು ಅರ್ಪಿಸಿ ಉಡುಪಿಯತ್ತ ಆಗಮಿಸಿದ ಕೇಶವ ಕೋಟ್ಯಾನ್‌ ತಮ್ಮ ಖುಷಿ ಹಂಚಿಕೊಂಡರು.

ಉಡುಪಿ ಭಾಗದಲ್ಲಿ ಉಡುಪಿ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ದೇವರ ಗುಡಿ, ಸಗ್ರಿ, ಮುಚ್ಲುಕೋಡು, ಮಾಂಗೋಡು, ಅರಿತೋಡು, ಬಡಗುಪೇಟೆ, ಕಿದಿಯೂರು ಹೊಟೇಲ್ ಸಮೀಪದ ನಾಗಬನ ಸೇರಿದಂತೆ ವಿವಿಧೆಡೆ ನಾಗರಪಂಚಮಿ ಆಚರಿಸಲಾಯಿತು. ನಾಗರಪಂಚಮಿ ಪ್ರಯುಕ್ತ ಶಾಲಾ ಕಾಲೇಜುಗಳಿಗೆ ರಜೆ ಇತ್ತು. ಶ್ರೀಕೃಷ್ಣ ಮಠದ ರಥಬೀದಿ ಆಸುಪಾಸು ಸೇರಿದಂತೆ ನಗರದಲ್ಲಿ ಆಭರಣ, ಬಟ್ಟೆ ಇತ್ಯಾದಿಗಳ ಖರೀದಿ ಭರಾಟೆಯೂ ಕಂಡು ಬಂತು. ಕೆಲವು ಹೊಟೇಲ್ ಅಂಗಡಿ ಹಾಗೂ ಇತರ ವಾಣಿಜ್ಯ ಮಳಿಗೆಗಳು ಮುಚ್ಚಿದ್ದವು. ‘ಶಾಲೆಗಳಿಗೆ ಇಲಾಖೆ ರಜೆ ಘೋಷಿಸಿಲ್ಲ. ಆದರೆ ವರ್ಷದ 4 ವಿವೇಚನಾ ರಜೆಗಳಲ್ಲಿ ನಾಗರಪಂಚಮಿಯೂ ಒಂದಾಗಿತ್ತು. ಹಾಗಾಗಿ ಬಹುತೇಕ ಎಲ್ಲ ಶಾಲೆಯವರು ಕೂಡ ರಜೆ ನೀಡಿದ್ದರು’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪೂಜೆ ವೇಳೆ ‘ಪರಿಸರ ಸಹ್ಯ’ ಸಲಹೆ

ಕೆಲವು ನಾಗಬನಗಳಲ್ಲಿ ಪೂಜಾ ತಯಾರಿ ತರಾತುರಿಯ ನಡುವೆಯೂ ಕೆಲವು ಅರ್ಚಕರು ಪರಿಸರ ಸಹ್ಯವಾದ ನಾಗರ ಪಂಚಮಿಗಾಗಿ ಸಲಹೆಗಳನ್ನು ನೀಡುತ್ತಿದ್ದುದು ಕಂಡು ಬಂತು. ‘ನಾಗಬನಗಳಿಗೆ ಸಾಧ್ಯವಾದಷ್ಟು ದೇಸಿ ದನಗಳ ಅಥವಾ ಮನೆಯಲ್ಲಿ ಸಾಕಿದ ದನಗಳ ಹಾಲನ್ನೇ ತನ್ನಿ. ಪ್ಯಾಕೆಟ್ ಹಾಲು ಕಡಿಮೆ ಮಾಡಿ. ಹಣ್ಣು ಕಾಯಿ, ಹೂ ಮತ್ತಿತರ ಪೂಜಾ ಪರಿಕರಗಳನ್ನು ಪ್ಲಾಸ್ಟಿಕ್‌ ಕೈ ಚೀಲಗಳಲ್ಲಿ ತರಬೇಡಿ. ತಂದರೂ ದಯವಿಟ್ಟು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ…’ ಎಂಬಿತ್ಯಾದಿಯಾಗಿ ಭಕ್ತರಲ್ಲಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next