Advertisement

ಮಳೆ ಕೋಟಿ ಜೀವಗಳ ಅಮೃತ ಬಿಂದು

03:29 PM Jun 05, 2021 | Team Udayavani |

ಧರೆಯ ಮೇಲಿನ ಸಕಲ ಕೋಟ್ಯಾನು ಕೋಟಿ ಜೀವರಾಶಿಗೆ ಆ ಅಮೃತ ಬೇಕೆ ಬೇಕು. ಆ ಮಹಾನ್‌ ಅಮೃತವೇ ನಾವು ದಿನನಿತ್ಯ ಬಳಸಲ್ಪಡುವ “ನೀರು’. ಇದುವೇ ಇಡೀ ಜೀವ ಸಂಕುಲಗಳ ಉಳಿವಿಗಾಗಿ ಇರುವ ಜೀವಾಳ.

Advertisement

ಪ್ರತಿ ಜೀವಿಯು ಹುಟ್ಟಿನಿಂದ ಸಾವಿನವರೆಗೂ ಅವಲಂಬಿಸಿರುವುದು ಈ ನೀರನ್ನೇ ತಾನೇ…! ಅದು ನಿತ್ಯ, ವಿನೂತನ ನಿರಂತರ. ಉಕ್ಕಿ ಧುಮ್ಮುಕ್ಕಿ ತ‌ನ್ನದೇ ಲೋಕ ಎಂದು ಸಂಚರಿಸುವ ಅಮೃತಧಾರೆ. ಊಟವಿಲ್ಲದೆ ಒಂದೆರಡು ದಿನ ಹೇಗೋ ಕಳೆದುಬಿಡಬಹುದು. ಆದರೆ ನೀರಿಲ್ಲದೆ ಕೆಲವು ಗಂಟೆಗಳನ್ನು ಕಳೆಯುವುದು ಕಷ್ಟ. ಊಹಿಸಲೂ ಕೂಡ ಅಸಾಧ್ಯ. ಮಳೆ ಇಲ್ಲದಿದ್ದರೆ ಸಕಲ ಜೀವರಾಶಿಯೂ ತೊಂದರೆಗೆ ಸಿಲುಕುತ್ತವೆ. ಅದು ನಿರ್ಗುಣ, ನಿರಾಕಾರ, ನಿರ್ಭಾವ.

ನೀರಿನ ಮೂಲ ಮಳೆ :

ಜಲಚಕ್ರ ಎಂಬ ಅದ್ಭುತ ವ್ಯವಸ್ಥೆ ಮಳೆಯನ್ನು ಭೂಮಿಗೆ ಕರೆತರುವ ಸಾರಥಿ. ಭೂಮಿಯಿಂದ ನೀರು ಆವಿಯಾಗಿ ಆಗಸ ತಲುಪಿ ಮೋಡಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಮೋಡಗಳ ಸಾಂದ್ರತೆ ಹೆಚ್ಚಿ ಮತ್ತು ಅಲ್ಲಿನ ವಾತಾವರಣ ತಂಪಾದಾಗ ಮೋಡಗಳ ತೇವಾಂಶ ಹನಿಗೂಡಿ ಭೂಮಿಯನ್ನು ಸೇರುತ್ತದೆ. ನೆಲದ ಮೇಲೆ ಹೀಗೆ ಬಿದ್ದ ನೀರು ಹಳ್ಳ, ನದಿಗಳ ಮೂಲಕ ಮತ್ತೆ ಸಾಗರವನ್ನು ತಲುಪುವುದು. ಈ ಚಕ್ರಕ್ಕೆ ವಿಜ್ಞಾನದ ಭಾಷೆಯಲ್ಲಿ ಜಲಚಕ್ರ ಎನ್ನುವರು.

ಮಳೆ ಆಧರಿಸಿರುವುದು ಪ್ರಕೃತಿಯನ್ನು:

Advertisement

“ಹಸುರೇ ಉಸಿರು’ ಎಂಬ ಮಾತಿನಂತೆ ಕಾಡುಗಳು ವಿಸ್ತಾರಗೊಂಡರೆ ತಾನೇ ಮಳೆಯಾಗುವುದು. ಆದರೆ ಆಗಾಗುತ್ತಿಲ್ಲ, ವಾಸ್ತವವೇ ಬೇರೆಯಾಗಿದೆ. ಮನುಷ್ಯ ತನ್ನ ಸ್ವಾರ್ಥಕ್ಕೆ ಹಚ್ಚ ಹಸುರಿನಿಂದ ಕಂಗೊಳಿಸಬೇಕಿದ್ದ ಸಸ್ಯ ಸಂಪತ್ತನ್ನು ನಾಶಗೊಳಿಸುತ್ತಿದ್ದಾನೆ. ಎಲ್ಲೆಡೆ ಕಾಳಿYಚ್ಚಿನಿಂದ ಹೊತ್ತಿ ಉರಿಯುತ್ತಿದೆ, ಕಾಡು ನಾಶವಾಗುತ್ತಲೇ ಇದೆ.

ಕಾಡು ನಾಶವಾಗುವುದರಿಂದ ಮಳೆ ಕಡಿಮೆಯಾಗುತ್ತ ಬರಗಾಲ ಎಂಬ ಮಾಯದ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದೇವೆ. ಮಾನವ ತನ್ನ ದುರಾಸೆಯಿಂದ ತಾನು ಅಂತ್ಯವಾಗುವುದಲ್ಲದೆ, ಸಾವಿರಾರು ಜೀವರಾಶಿಗಳ ಸಾವಿಗೂ ಕಾರಣನಾಗುತ್ತಿದ್ದಾನೆ. ಬರಗಾಲದಲ್ಲಿ ಒಂದು ಹನಿ ನೀರಿಗಾಗಿ ಹಪಹಪಿಸುವ ಅದೆಷ್ಟೋ ಪ್ರಾಣಿ ಸಂಕುಲಗಳಿಗೆ ನೀರಿನ ಮಹತ್ವ ತಿಳಿದಿದೆ. ಆದರೆ ಮಾನವನಿಗೆ ಅದರ ಅರಿವು ಇನ್ನೂ ಮೂಡಿಲ್ಲ.

ನೈಸರ್ಗಿಕ ಸಂಪತ್ತು ಮಳೆ :

ಮುಗಿಯದ ಮಹಾನ್‌ ಸಂಪನ್ಮೂಲವಾಗಿರುವ ಹಾಗೂ ನೈಸರ್ಗಿಕವಾಗಿ ನಮಗೆ ದೊರೆಯುವುದು ಮಳೆಯ ನೀರು. ಅನೇಕ ರೂಪಗಳಲ್ಲಿ ಕಂಡುಬರುತ್ತದೆ. ಸಮುದ್ರ ಸಾಗರಗಳಲ್ಲಿ, ಆವಿಯಾಗಿ ಮೋಡಗಳಾಗಿ, ಕರಗಿ ಮಳೆಯಾಗಿ,ಧುಮ್ಮುಕ್ಕಿ ಹರಿಯುವ ನದಿ ಸರೋವರಗಳಾಗಿ, ಬೃಹತ್‌ ಹಿಮಗಡ್ಡೆಗಳ ರೂಪದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಕರಗುವಿಕೆ, ಆವಿಯಾಗುವಿಕೆ, ಮುಖಾಂತರ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ರೂಪಾಂತರ ಹೊಂದುತ್ತದೆ. ಅಬ್ಟಾ ಪ್ರಕೃತಿಯ ಈ ಸಹಜ ಪ್ರಕ್ರಿಯೆಯನ್ನು ಹುಡುಕುತ್ತ ಹೊರಟರೆ ನಿಗೂಢ,ಅಚ್ಚರಿ ಎನಿಸದಿರದು.

ಬಳಕೆ ಸರಿಯಾಗಬೇಕು :

ಭೂಮಿಯ ಮೇಲಿನ ನೀರಿನ ಪ್ರಮಾಣವನ್ನು ನೋಡಿದರೆ ಒಟ್ಟು ಭೂಭಾಗದ ಶೇ.70 ರಷ್ಟು ನೀರು ಅವರಿಸಿದೆ. ಶೇ.30 ರಷ್ಟು ಮಾತ್ರ ನೆಲ ಆವರಿಸಿದೆ. ವಿಪರ್ಯಾಸವೆಂದರೆ ನಮಗೆ ಶುದ್ಧ ನೀರು ಕುಡಿಯಲು ಬಳಸಬಹುದಾದ ನೀರಿನ ಪ್ರಮಾಣ ಕೇವಲ ಶೇ. 2 ರಷ್ಟುಮಾತ್ರ. ಪ್ರತಿಯೊಂದು ಜೀವಿಗೂ ಬದುಕಲು ಹೇಗೆ ಆಮ್ಲಜನಕದ ಅವಶ್ಯವಿದೆಯೋ ಹಾಗೆ ನೀರು ಕೂಡ ಅಷ್ಟೇ ಅಗತ್ಯವಿದೆ. ಸಸ್ಯಗಳು ಸಮೃದ್ಧವಾಗಿ ಬೆಳೆಯಲು, ದೇಶದ ಬೆನ್ನೆಲುಬು ಆದ ರೈತ ಕೂಡ ತನ್ನ ಬೆಳೆ ಬೆಳೆಯಲು, ಆಹಾರ ಧಾನ್ಯಗಳನ್ನು ಉತ್ಪಾದಿಸಿಕೊಳ್ಳಲು ಮಳೆಯ ನೀರು ಅವಶ್ಯ. ಎಲ್ಲ ಪ್ರಾಣಿಗಳು ಆಹಾರಕ್ಕಾಗಿ ನೇರ ಅಥವಾ ಪರೋಕ್ಷವಾಗಿ ಸಸ್ಯಗಳ ಮೇಲೆ ಅವಲಂಬಿತವಾಗಿವೆ. ಆದ್ದರಿಂದ ಮಳೆಯಿಲ್ಲದೆ ಯಾವ ಜೀವಿಗಳು ಅಸ್ತಿತ್ವದಲ್ಲಿರುವುದಿಲ್ಲ. ಇಷ್ಟೆಲ್ಲ ತಿಳಿದಿರುವ ಮಾನವ ನೀರನ್ನು ಬಳಸುವಾಗ ಮಾತ್ರ ಎಲ್ಲ ಆದರ್ಶಗಳನ್ನು ಗಾಳಿಗೆ ತೂರಿ ಜವಾಬ್ದಾರಿ ಇಲ್ಲದ ರೀತಿಯಲ್ಲಿ ನೀರಿನ ಬಳಕೆ ಮಾಡುತ್ತಾನೆ.

ಪ್ರಸ್ತುತ ದಿನಮಾನಗಳಲ್ಲಿ ಸಮುದ್ರದ ನೀರನ್ನು ಶುದ್ಧೀಕರಣಗೊಳಿಸುವ ತಂತ್ರಜ್ಞಾನ ವಿದೇಶಗಳಲ್ಲಿ ನಡೆಯುತ್ತಿದೆ. ಸಂಗ್ರಹ ಮತ್ತು ಬಳಕೆಗೆ ಸಮರ್ಪಕ ವ್ಯವಸ್ಥೆ ಇಲ್ಲದಿರುವುದರಿಂದಲೂ ಶುದ್ಧ ಮಳೆಯ ನೀರು ಪೋಲಾಗುತ್ತಿದೆ. ನೀರು ಪೋಲಾಗದಂತೆ ಸಂಗ್ರಹಿಸಿಟ್ಟುಕೊಳ್ಳುವುದು ಬಹುಮುಖ್ಯ. ಮನೆಯ ಮೇಲಿನ ಛಾವಣಿಯ ಹಾಗೂ ಹೊಲ, ಗದ್ದೆಗಳಲ್ಲಿ ನೀರು ಇಂಗುವಂತೆ, ಇಂಗು ಗುಂಡಿಗಳನ್ನು ಹಾಗೂ ಕೆರೆ ಕಟ್ಟೆಗಳನ್ನು ನಿರ್ಮಿಸಿ ಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ. ಲಭ್ಯವಿರುವ ಮೂಲ ಸೌಕರ್ಯಗಳನ್ನ ಮೊದಲು ಅಭಿವೃದ್ಧಿಪಡಿಸಿಕೊಂಡು ಎಲ್ಲರೂ ಮುನ್ನಡೆಯಬೇಕಿದೆ. ನಾಳೆಯ ನಮ್ಮ ಸುಂದರ ಬದುಕಿಗೆ ಬೇಕಿರುವುದು ಶುದ್ಧ ಪರಿಸರವೇ ಹೊರತು ವಿನಾಶದ ಅಂಚಿಗೆ ಕರೆದೊಯ್ಯುವ ಅಭಿವೃದ್ಧಿಗಳಲ್ಲ.

 

-  ಪರಮ ಕಿತ್ಲಿ ಕೆ.ಎಸ್‌.ಎಸ್‌.ಕಾಲೇಜ್‌, ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next