ಬಹಳ ವರ್ಷಗಳ ಹಿಂದೆ ಅಂದರೆ ನಾನು ಚಿಕ್ಕವನಿರುವಾಗ ನಾನು ನಮ್ಮ ಮಲೆನಾಡಿನ ಹಳ್ಳಿಗಳಲ್ಲಿ ನೋಡುತ್ತಿದ್ದ ಸಾಮಾನ್ಯ ದೃಶ್ಯಗಳು. ಭೋರ್ಗರೆದು ಸುರಿಯುವ ಮಳೆ. ಆ ಮಳೆಯಲ್ಲಿ ಪ್ಲಾಸ್ಟಿಕ್‌ನಲ್ಲಿ ಮಾಡಿದ ಕೋಟ್ ಒಂದನ್ನು ಧರಿಸಿ ಮತ್ತೂಂದು ಪ್ಲಾಸ್ಟಿಕ್ ಅನ್ನು ತಲೆಯ ಮೇಲೆ ಕಿರೀಟದಂತೆ ಸುತ್ತಿಕೊಂಡು ಗದ್ದೆಗಳ ಮಾಲಕರು ರಾಜಾರೋಷವಾಗಿ “ಹರ…! ಬಾ ಬಾ,…! ಅಯ್ಯೋ ನಿನ್ ಬಾಯಿಗ್ ಮಣ್ಣಾಕ ಅಂತ ಕಷ್ಟಪಟ್ಟು ಹೆಜ್ಜೆ ಕೀಳುತ್ತಿದ್ದರು. ಗದ್ದೆಯ ಮಾಲಕರ ಮಕ್ಕಳು ಉದ್ದವಾದ ಛತ್ರಿ ಕೊಟ್ಟು ಕಳುಹಿಸಿ ಬೆಳ್ಳಂಬೆಳಗ್ಗೆ ಕಾರ್ಯದಲ್ಲಿ ತೊಡಗಿದ್ದ ನನ್ನ ತಂದೆಗೆ ಅಮ್ಮ ಬಿಸಿ ಬಿಸಿ ತಿಂಡಿ ಜತೆಗೆ ಕಾಫಿ ಮಾಡಿ ಕೊಟ್ಟು ಕಳುಹಿಸುತ್ತಿದ್ದಳು.
ಅದನ್ನು ಹೊತ್ತು ಹವಾಯ್ ಸ್ಲಿಪ್ಪರ್‌ಹಾಕಿ ಅಪ್ಪನ ಬಳಿಗೆ ಹೋಗುವಷ್ಟರಲ್ಲಿ ತಲೆಯ ತನಕ ಕೆಸರು ಹಾರಿರುತ್ತಿತ್ತು.
ಊಟ ಕಂಡೊಡನೆ ಅಪ್ಪನಿಗೆ ಅದೆಲ್ಲಿಲ್ಲದ ಸಂತೋಷ, ಕೊಂಚ ಬಿಡುವಿನಲ್ಲಿ ತಿಂಡಿ ತಿನ್ನುತ್ತಿದ್ದರು. ನಾನು ಬೇಸಾಯ ಮಾಡುವವನಂತೆ ಗದ್ದೆಗೆ ಇಳಿಯುತ್ತಿದ್ದೆ.
ಅಲ್ಲಿ ಏಡಿ ಮೀನುಗಳ ಹಾವಳಿ ನೋಡುವುದಕ್ಕೆ ಒಂದು ರೀತಿಯ ಖುಷಿ. ಆದರೆ ಆ ಸಂದರ್ಭದಲ್ಲಿ ಕೆಸರಿನಿಂದ ಕಾಲು ಕೀಳಲು ಸಾಧ್ಯವಾಗುತ್ತಿರಲಿಲ್ಲ. ನಮಗೆ ಹೀಗೆ ಎನ್ನಿಸುವಾಗ ಪಾಪ ಆ ಎತ್ತುಗಳ ಕತೆಯೇನು ಎಂದು ಮರುಗುತ್ತಿದ್ದೆ. ಇದಕ್ಕೆ ಪರಿಹಾರವೇ ಇಲ್ಲವೇ ಎಂದುಕೊಳ್ಳುತ್ತಿದ್ದೆ. ಈಗ ಪರಿಹಾರವೇನೋ ಬಂದಿದೆ.
ಸಸಿ ಕೀಳುವುದು, ನಾಟಿ ಮಾಡುವುದು, ಅಡೆ ಕಡಿಯುವುದು. ನಾಟಿ ಮಾಡಿ ಹೋದ ಅನಂತರದಲ್ಲಿ ಕಾಗೆ ಬೆಳ್ಳಕ್ಕಿಗಳು ಮತ್ತೂಮ್ಮೆ ನಾಟಿ ಮಾಡಲು ಬರುತ್ತಿದ್ದವು. ಬೆಳಗ್ಗೆ ಬಂದು ನೋಡಿದರೆ ಸಸಿ ಸತ್ತ ಮೀನುಗಳಂತೆ ನೀರ ಮೇಲೆ ತೇಲುತ್ತಿದ್ದವು. ನಮ್ಮ ಹಳ್ಳಿಯವರೇನು ಕಡಿಮೆಯಲ್ಲ ಅದಕ್ಕೂ ಪರಿಹಾರ ಕಂಡುಕೊಂಡಿದ್ದರು.
ಶಬ್ದ ಮಾಡುವಂತೆ ಬಾಡಲಿ ಮತ್ತು ಕಲ್ಲುಗಳನ್ನು ತೂಗು ಹಾಕುವುದು. ಬೆದರು ಗೊಂಬೆಗಳನ್ನು ಮಾಡುವುದು ನೋಡಲು ಅದ್ಭುತವಾಗಿ ಇರುತ್ತಿತ್ತು. ಈಗಂತೂ ಇವುಗಳ ಅನುಭವವೇ ಇಲ್ಲ..!
ವಿದೇಶಿ ಆಹಾರ ಬಂದ ಮೇಲೆ ಇವಕ್ಕೆ ಬೆಲೆಯೇ ಇಲ್ಲ, ಮುಂದಿನ ಪೀಳಿಗೆಗೆ ತೋರಿಸಲು ನಮ್ಮ ಬಳಿ ಕೇವಲ ಫೋಟೋ ಮತ್ತು ವೀಡಿಯೋಗಳು ಮಾತ್ರ ಇರುತ್ತವೆ…
ಮಂಜುನಾಥ್ ದೇವಾಂಗ ಶೆಟ್ಟಿ
ಫಿಲೋಮಿನಾ ಕಾಲೇಜು ಮೈಸೂರು