ಗುವಾಹಟಿ: ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟಿ ಟ್ವೆಂಟಿ ಪಂದ್ಯ ನಡೆಯುವುದು ಅನುಮಾನವಾಗಿದೆ. ರವಿವಾರ ರಾತ್ರಿಯ ಪಂದ್ಯಕ್ಕೆ ವರುಣ ರಾಯ ಕಾಡುವ ಸಂಭವವಿರುವುದೆ ಇದಕ್ಕೆ ಕಾರಣ.
ಇಲ್ಲಿನ ಬರ್ಸಾಪರ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ವಿರುದ್ಧದ ಮೊದಲ ಟಿ ಟ್ವೆಂಟಿ ಪಂದ್ಯಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಆದರೆ ವರುಣರಾಯ ಕಾಡಿದರೆ ದಶಕದ ಮೊದಲ ಪಂದ್ಯಕ್ಕೆ ಅಡಚಣೆಯಾಗುವುದು ಖಂಡಿತ.
ರವಿವಾರ ಮುಂಜಾನೆ ಗುವಾಹಟಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಸಿಡಿಲು ಗುಡುಗು ಕಾಣಿಸಿಕೊಂಡಿದೆ. ಸಂಜೆ ಐದರಿಂದ ಆರು ಗಂಟೆಯವರೆಗೆ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಪಂದ್ಯದ ಟಾಸ್ ಪ್ರಕ್ರಿಯೆ ಸಂಜೆ 6.30ಕ್ಕೆ ನಡೆಯಲಿದ್ದು, ಪಂದ್ಯ ಏಳು ಗಂಟೆಯಿಂದ ಆರಂಭವಾಗಲಿದೆ.
ಅಸ್ಸಾಂ ರಾಜಧಾನಿಯ ಹೊಸ ಕ್ರೀಡಾಂಗಣದಲ್ಲಿ ಇದುವರೆಗೆ ಕೇವಲ ಒಂದು ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯ ನಡೆದಿದೆ. ಆಸೀಸ್ ವಿರುದ್ಧದ ಆ ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು.
ಅಸ್ಸಾಂ ರಾಜ್ಯದೆಲ್ಲೆಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ನಡೆಯುತ್ತಿದೆ. ಹಾಗಾಗಿ ಪೊಲೀಸರು ಬಿಗು ಭದ್ರತೆ ಒದಗಿಸಿದ್ದಾರೆ.