ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ, ರಾತ್ರಿ ವೇಳೆ ಮಳೆಯಾಗಿದೆ. ಕೊಕ್ಕಡ, ನಿಂತಿಕಲ್ಲು, ಬಳ್ಪ, ಕಡಬ, ಉಪ್ಪಿನಂಗಡಿ ಮೊದಲಾದ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.
ಪುತ್ತೂರು, ವಿಟ್ಲ ಸೇರಿದಂತೆ ಹಲವಡೆ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ. ಉಳಿದಂತೆ ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಕಂಡು ಬಂದಿತ್ತು.
ಉಡುಪಿ, ಮಣಿಪಾಲ, ಪರ್ಕಳ ಸೇರಿದಂತೆ ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಸಂಜೆ, ರಾತ್ರಿ ಸ್ವಲ್ಪ ಮಳೆಯಾಗಿದೆ. ಮಂಗಳೂರು ನಗರದ ಆಸುಪಾಸಿನಲ್ಲಿ ರಾತ್ರಿ ವೇಳೆ ಮಳೆಯಾಗಿದೆ.
ಬುಧವಾರ ಮತ್ತು ಗುರುವಾರ ಕರಾವಳಿಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.