“ಮೇಘರಾಜ ಬಂದ ನಮ್ಮ ಊರಿಗೆ ‘ ಎನ್ನುವ ಹಾಡು ಗುನುಗುತ್ತಲೆ ಆಕಾಶದ ಮೊಡದ ಮರೆಯಿಂದ ಚಿಟಪಟ ಹನಿ ಬೀಳುತ್ತಿದ್ದರೆ ಅದನ್ನು ನೋಡುವುದೇ ಒಂದು ಖುಷಿ ಇದ್ದಂತೆ. ಕಾಡುಗಳು ಮೆಲ್ಲನೆ ಹಸುರ ಸೆರಗನ್ನು ಹೊದ್ದು ಆಕಾಶಕ್ಕೆ ಮುಖ ಮಾಡಿ ಕನ್ನಡಿ ನೋಡಿಕೊಳ್ಳುವಂತೆ ನೋಡುತ್ತಾ ಶೃಂಗರಿಸಿಕೊಳ್ಳುತ್ತದೆ. ಅಲ್ಲಿಗೆ ಮೊದಲ ಮಳೆಯ ಹನಿ ಭುವಿಗೆ ಬಿದ್ದು ನಾಚುತ್ತಾ ಕರಗಿ ಹೋಗುತ್ತದೆ. ಆಮೇಲಿನದು ಏನಿದ್ದರೂ ನಾಚಿಕೆಯನ್ನೂ ಬಡಿದೆಬ್ಬಿಸಿಕೊಂಡು ಆಗಸದ ಮೇಲಿಂದ ಮೇಲೆ ಮಳೆಯ ಪ್ರಣಯಗೀತೆಯನ್ನು ಹಾಡುತ್ತಲೇ ಇರುತ್ತದೆ.
ಮಳೆ ಎಂದ ಕೂಡಲೇ ಬಾಲ್ಯದ ನೆನಪಾಗುತ್ತದೆ. ಮಳೆಯಲ್ಲಿ ನೆನೆಯುವ ಆ ಸುಖವೇ ಬೇರೆ. ನಿಸರ್ಗದ ಈ ಪರಮ ರೋಚಕತೆಯನ್ನು ಅನುಭವಿಸಲು ವಯಸ್ಸಿನ ಹಂಗಿಲ್ಲ. ಚಿಟಪಟ ಸುರಿಯುವ ಮಳೆಯ ನಡುವೆ ಮೈ ಮನ ಪುಳಕಗೊಂಡು ಮಿದುವಾದ ನೆಲದಲ್ಲಿ ನಾಲ್ಕು ಹೆಜ್ಜೆ ಹಾಕುತ್ತೇವೆ. ಆಗಸದ ಶೂನ್ಯದಿಂದ ಥಳಥಳಿಸುವ ಮುತ್ತುಗಳಂತೆ ನೆಲಕ್ಕೆ ಬಿದ್ದು ಜೀವಸೃಷ್ಟಿಗೆ ಮುನ್ನುಡಿಯ ಹಾಡುವ ಮಳೆಯು ಅದ್ಯಾವುದೋ ಮಾಯಾ ನಗರಿಯಿಂದ ಲಗ್ಗೆ ಇಟ್ಟಿದೆಯೇನೋ ಎಂದು ಭಾಸವಾಗುತ್ತದೆ.
ಈ ಮಳೆಯ ಹುಟ್ಟೇ ಒಂದು ಚೋದ್ಯ. ಬಿಸಿ ಬಿಸಿ ಬೇಗೆಯ ದಿನಗಳಲ್ಲಿ, ಮಳೆಯ ಸೂಚನೆ ಇರದೇ, ಆಗಸದಲ್ಲೆಲ್ಲ ಬಿಳಿ ಮೋಡ, ಬಿಸಿ ಗಾಳಿ. ನೆಲವೂ ಸಹ ಬಿರುಕು ಬಿಟ್ಟಿದ್ದು, ಅಂತರಾಳದ ಬೇಗೆಯನ್ನು ತಾಳದೇ ಬಿಸಿಯುಸಿರನ್ನು ಹೊರಹಾಕುತ್ತಿದೆಯೇನೊ ಎಂಬ ಭಾವನೆ. ಆಗ ಅದೆಲ್ಲಿಂದಲೋ ಒಂದಷ್ಟು ತಂಗಾಳಿ. ಬಿಳಿ ಮೋಡಗಳ ನಡುವೆ ದಟ್ಟ ನೀಲಿಯ ಛಾಯೆ; ಮದಿಸಿದ ಕರಿಗಳ ರೂಪ ಪಡೆಯುವ ಕರಿಮೋಡಗಳು. ಮಿಂಚುಗಳ ಕೋರೈಸುವ ಬೆಳಕು, ಗುಡುಗುಗಳ ಕೂಗಾಟ. ಖಾಲಿಯಾಗಿದ್ದ ಆಗಸದಲ್ಲಿ ಒಮ್ಮೆಗೇ ಸೃಷ್ಟಿಯಾಗುವ ನೀರಿನ ಹನಿಗಳು ನೆಲಕ್ಕೆ ಬಿದ್ದು, ಬಿಸಿ ಬಿಸಿ ಭೂಮಿಯನ್ನು ಹಸಿ ಹಸಿಗೊಳಿಸುವ ಅಪೂರ್ವ ಪ್ರಕ್ರಿಯೆಯೇ ಚಂದ. ಅದಕ್ಕೇ ಇರಬೇಕು. ಮಳೆ ತರುವ ವಾಸನೆಯನ್ನೇ ಮನದೊಳಗೆ ಅಚ್ಚೊತ್ತಿಕೊಳ್ಳುವ ತವಕದಿಂದ, ಕಣ್ಮುಚ್ಚಿ ಮಣ್ಣಿನ ವಾಸನೆಯನ್ನು ಘ್ರಾಣಿಸುತ್ತಾರೆ.
ಮಳೆ ಬಿದ್ದ ಕೂಡಲೇ ಅದೇ ಮಳೆಯಲ್ಲಿ ನೆನೆಯುತ್ತಾ ನಿಲ್ಲುವರು, ತನ್ನ ಮನದ ಮೂಲೆಯಲ್ಲಿ ಅಡಗಿ ಕುಳಿತಿರುವ ಪ್ರೀತಿಯ ಸೆಲೆಗೆ ದಾರಿ ಮಾಡಿಕೊಟ್ಟು, ಬಾನಿನಿಂದ ಬೀಳುವ ಮಳೆಯೊಡನೆ ಹರಿಬಿಡುತ್ತಾರೆ. ಮಳೆಯಲ್ಲಿ ನೆನೆಯುವುದರಲ್ಲೂ ಒಂದು ಖುಷಿ ಇದೆ – ಚಿಟಟಪ ಎಂದು ಆಗಸದಿಂದ ಬೀಳುವ ಮಳೆ ಹನಿಗಳು, ತಲೆ ಮೇಲೆ ತಮಟೆಯಂತೆ ಕುಟ್ಟಿ, ಕುತ್ತಿಗೆ ಭುಜದ ಮೇಲೆ ಹರಿದು, ಮೈ ಮನಗಳನ್ನೆಲ್ಲ ತೋಯಿಸಿ, ಮೂರ್ತ – ಅಮೂರ್ತ ಲೋಕಗಳ ಮಧ್ಯೆ ಇರುವ ಸೀಮಾರೇಖೆಯನ್ನು ಅಳಿಸಿ ಹಾಕಿ, ಅದ್ಯಾವುದೋ ಭಾವುಕ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.
- ಪೂರ್ವಾ ಚಂದ್ರಕಾಂತ್ ,ಪೆಲತ್ತಡಿ