ಹಾಸನ: ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವ ಕಾರಣ ಪ್ರಮುಖ ಬೆಳೆ ಗಳಾದ ಕಾಫಿ, ಆಲೂಗಡ್ಡೆ, ಮೆಕ್ಕೆಜೋಳ, ಮೆಣ ಸು, ಅಡಕೆ, ರಾಗಿ, ಭತ್ತ ಹಾಗೂ ತರಕಾರಿ ಬೆಳೆಹಾನಿ ಜೊತೆಗೆ ಮನೆ, ಸಾರ್ವಜನಿಕ ಆಸ್ತಿಪಾಸ್ತಿ ಹಾಳಾಗಿದೆ. ನಷ್ಟ ವನ್ನು ಅಂದಾಜಿಸಿ ಸರ್ಕಾರ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ನಷ್ಟದಿಂದ ರೈತರು ಹಾಗೂ ಕಾಫಿ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಆದ್ದರಿಂದ ಸರ್ಕಾರ ಕೂಡಲೇ ಸಂತ್ರಸ್ತರ ನೆರವಿಗೆ ಧಾವಿಸಬೇಕು . ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ನಿರೀಕ್ಷೆಗೂ ಮೀರಿ ದುಪ್ಪಟ್ಟು ಮಳೆಯಾದ ಪರಿಣಾಮ ಭೂಮಿ ಯನ್ನೇ ನಂಬಿಕೊಂಡು ರೈತರಿಗೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
450 ಕೋಟಿ ರೂ.ನಷ್ಟ: ಜಿಲ್ಲಾಡಳಿತದ ಮಾಹಿತಿ ಪ್ರಕಾರ ಸುಮಾರು 450 ಕೋಟಿಯಷ್ಟು ನಷ್ಟವಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿ ಗಣಿಸಬೇಕು. ಜಿಲ್ಲೆಯೊಂದರಲ್ಲೇ 1500 ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ. . ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳೂ ಸಂಪರ್ಕ ಕಳೆದುಕೊಂಡಿವೆ.
ಪರಿಹಾರ ಬಿಡುಗಡೆ ಮಾಡಿಲ್ಲ: ಕೇವಲ ಬಾಯಿ ಮಾತಿನಲ್ಲಿ ನಮ್ಮದು ಜನಪರ ಸರ್ಕಾರ ಎನ್ನುವ ಬಿಜೆಪಿ ನಾಯಕರು, ಈವರೆಗೂ ಸೂಕ್ತ ಪರಿಹಾರ ಬಿಡುಗಡೆ ಮಾಡಿಲ್ಲ. ಜಿಲ್ಲೆಗೆ ಕೇವಲ 15 ಕೋಟಿ ರೂ. ಬಿಡುಗಡೆ ಮಾಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ. ರಾಜ್ಯ ಸರ್ಕಾರವು ಜನಮುಖೀ ಆಡಳಿತ ನೀಡುತ್ತಿಲ್ಲ. ನಿರ್ಲಕ್ಷ್ಯ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಪ್ರತಿಪಕ್ಷ ಕಾಂಗ್ರೆಸ್ ಮಾಡುತ್ತಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಆರೋಪ – ಪ್ರತ್ಯಾರೋಪದಲ್ಲಿಯೇ ಮುಳುಗಿವೆ ಎಂದು ಟೀಕಿಸಿದ್ದಾರೆ.
ಮನವಿಗೆ ಸ್ಪಂದಿಸದ ಸರ್ಕಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೊದಲು ರೈತರಿಗಾಗಿರುವ ಬೆಳೆ ನಷ್ಟ ಪರಿಹರಿಸುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದಿದ್ದಾರೆ. ಜಿಲ್ಲೆಯಲ್ಲಾಗಿರುವ ಬೆಳೆ ನಷ್ಟದ ಬಗ್ಗೆ ಜೆಡಿಎಸ್ ವತಿಯಿಂದ ಹಲವಾರು ಬಾರಿ ಸರ್ಕಾರಕ್ಕೆ ಮನವರಿಕೆ ಮಾಡಿದ್ದರೂ, ಇದುವರೆಗೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಇದು ಜನಪರ, ರೈತಪರ ಸರ್ಕಾರವೇ ಎಂದು ಅವರು ಪ್ರಶ್ನಿಸಿದ್ದಾರೆ.
ರೈತರ ಹಿತ ಕಾಯಬೇಕು: ಸಾಲಮಾಡಿ ಬೆಳೆದ ಫಸಲು ಕೈ ಸೇರುವ ಮುನ್ನವೇ ಮಣ್ಣು ಪಾಲಾಗಿದೆ. ಇನ್ನೊಂದೆಡೆ ಬ್ಯಾಂಕ್ ಇತ್ಯಾದಿ ಕಡೆಗಳಿಂದ ಸಾಲ ಮಾಡಿರುವ ರೈತರು, ಶೇ. 50ರಿಂದ 60 ಬೆಳೆ ಕಳೆದುಕೊಂಡಿರುವ ಕಾಫಿ ಬೆಳೆಗಾರರು, ಸಾಲ ಮರುಪಾವತಿ ಮಾಡುವುದು ಹೇಗೆ ಎಂಬ ಚಿಂತೆಗೆ ಬಿದ್ದಿದ್ದಾರೆ.
ಸಾಲಬಾಧೆ ಆತ್ಮಹತ್ಯೆ ಪ್ರಕರಣ ಮರುಕಳಿಸುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳ ಬೇಕು ಎಂದು ರಘು ಒತ್ತಾಯಿಸಿದ್ದಾರೆ. ಬೆಳೆಗಳನ್ನೇ ನಂಬಿರುವ ರೈತರು ಹಾಗೂ ಬೆಳೆಗಾರರನ್ನು ಬೆಳೆವಿಮೆ, ಸಹಾಯಧನ ಯೋಜನೆಗೆ ಒಳಪಡಿಸಿ ಅವರ ನೆರವಿಗೆ ಧಾವಿಸಬೇಕು. ಕೇವಲ ಚುನಾವಣಾ ಲಾಭಕ್ಕಾಗಿ ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ಹೊಡೆದಾಡಿಸುವುದನ್ನು ಬಿಟ್ಟು ನೊಂದಿರುವ, ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಜನರ ಹಿತಕಾಯಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.