ಬೆಂಗಳೂರು: ನಗರದಲ್ಲಿ ಸತತ ಎರಡನೇ ದಿನವೂ ಮಳೆ ಮುಂದುವರಿದಿದ್ದು, ಧಾರಾಕಾರವಾಗಿ ಸುರಿದ ಮಳೆಗೆ ಕೆಲಹೊತ್ತು ನಗರ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ಸಂಜೆ 7ರ ಸುಮಾರಿಗೆ ಶುರುವಾದ ಮಳೆ ವಿವಿಧೆಡೆ ಅರ್ಧಗಂಟೆಗೂ ಹೆಚ್ಚು ಕಾಲ ಸುರಿಯಿತು. ಪ್ರಮುಖ ಜಂಕ್ಷನ್‌ಗಳು, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತಿದ್ದರಿಂದ ಸುಗಮ ಸಂಚಾರಕ್ಕೆ ವಾಹನ ಸವಾರರು ಕೆಲಕಾಲ ಪರದಾಡುವಂತಾಯಿತು.
ಆದರೆ, ತುಸು ಹೊತ್ತಿನಲ್ಲಿ ಮಳೆ ಇಳಿಮುಖವಾಗಿದ್ದರಿಂದ ಸಮಸ್ಯೆ ಉದ್ಭವಿಸಲಿಲ್ಲ. ಪಾಲಿಕೆ ವೃತ್ತ, ಗಾಂಧಿನಗರ, ಕೆ.ಜಿ ರಸ್ತೆ, ಲಾಲ್‌ಬಾಗ್, ಜಯನಗರ, ಜೆ.ಪಿ. ನಗರ, ವಿಜಯನಗರ, ಗೊರಗುಂಟೆಪಾಳ್ಯ, ಯಶವಂತಪುರ, ರಾಜಾಜಿನಗರ ಮತ್ತಿತರ ಕಡೆಗಳಲ್ಲಿ ಮಳೆ ಅಬ್ಬರ ಜೋರಿತ್ತು. ಆದರೆ, ಮಹದೇವಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ, ದಾಸರಹಳ್ಳಿ ಮತ್ತಿತರ ಕಡೆ ತುಂತುರು ಹನಿಯಿತು.
ಸತತ ಎರಡು ದಿನಗಳಿಂದ ಸಂಜೆ ಸರಿಯಾಗಿ 7ರ ಸುಮಾರಿಗೆ ವರುಣನ ಆಗಮನ ಆಗುತ್ತಿರುವುದರಿಂದ ನಗರದ ಸಂಜೆಯ ಮನರಂಜನೆಗೆ ತಡೆಯೊಡ್ಡಿದಂತಾಗಿದೆ. ಥಿಯೇಟರ್, ಶಾಪಿಂಗ್, ಕಾಫಿ ಡೇ ಮತ್ತಿತರ ಕಾರಣಗಳಿಗೆ ಜನ ಸಾಮಾನ್ಯವಾಗಿ ರಸ್ತೆಗಿಳಿಯುತ್ತಾರೆ. ಆದರೆ, ಈ ಉತ್ಸಾಹಕ್ಕೆ ಮಳೆ ತಣ್ಣೀರೆರಚಿದೆ. ಈ ಮಧ್ಯೆ ಆಗಾಗ್ಗೆ ವಿದ್ಯುತ್ ಕೂಡ ಕೈಕೊಟ್ಟಿದ್ದರಿಂದ, ನಗರದ ಕೆಲ ಭಾಗಗಳಲ್ಲಿ ಕತ್ತಲು ಕವಿದಿತ್ತು.
ಇಂದು ಕೂಡ ಮಳೆ?: ಕಳೆದ ಕೆಲ ದಿನಗಳಿಂದ ನಗರದ ಸುತ್ತಮುತ್ತ ಬರೀ ಮೋಡಕವಿದ ವಾತಾವರಣ ಇರುತ್ತಿತ್ತು. ಆದರೆ, ಶುಕ್ರವಾರ ನಗರದ ಉಷ್ಣಾಂಶದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ. ಬೆನ್ನಲ್ಲೇ ಮೋಡ ಸರಿದು, ಮಳೆ ಬೀಳುತ್ತಿದೆ. ವಾತಾವರಣದಲ್ಲಿ ಯಾವುದೇ ಪ್ರಮುಖ ವ್ಯತ್ಯಾಸಗಳು ಆಗಿಲ್ಲ. ನಗರದಲ್ಲಿ ಇನ್ನೂ ಒಂದೆರಡು ದಿನ ಇದೇ ವಾತಾವರಣ ಇರಲಿದ್ದು, ಒಂದೆರಡು ಬಾರಿ ಹಗುರವಾದ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.