Advertisement
ಮಂಗಳೂರು: ಕರಾವಳಿ ಭಾಗದಲ್ಲಿ ಪೂರ್ವ ಮುಂಗಾರು ಮಳೆ ಬಿರುಸು ಪಡೆದುಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ರವಿವಾರ ಸಂಜೆ ಬಳಿಕ ಗುಡುಗು-ಸಿಡಿಲು ಸಹಿತ ಬಿರುಸಿನ ಮಳೆ ಸುರಿದಿದೆ. ಕೆಲವು ಕಡೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾದ ವರದಿಯಾಗಿದೆ.
ಉಡುಪಿ: ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ, ರವಿವಾರ ಹಲವೆಡೆ ಸಾಧಾರಣ ಮಳೆಯಾಗಿದೆ. ಕಾರ್ಕಳ,
ಉಡುಪಿ, ಕಾಪು, ಪಡುಬಿದ್ರಿ, ಹೆಬ್ರಿ ಭಾಗದಲ್ಲಿ ಶನಿವಾರ ತಡರಾತ್ರಿ ಮಳೆ ಸುರಿದಿದ್ದು, ರವಿವಾರ ಬಿಸಿಲು ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಉಡುಪಿ, ಮಣಿ ಪಾಲ, ಮಲ್ಪೆ ಸುತ್ತಮುತ್ತ ಹನಿಹನಿ ಮಳೆ ಸುರಿದಿದೆ.
Related Articles
ಅರಂತೋಡು: ಆಲೆಟ್ಟಿ ಗ್ರಾಮದ ಪರಿವಾರಕಾನ ಮಾಣಿ ಮೈಸೂರು ರಸ್ತೆಗೆ ಬೃಹತ್ ಮರವೊಂದು ಬೇರು ಸಮೇತ ಉರುಳಿ ಬಿದ್ದಿದ್ದು ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಸ್ಥಗಿತ ಗೊಂಡ ಘಟನೆ ರವಿವಾರ ವರದಿಯಾಗಿದೆ.ಬೃಹತ್ ಮರವು ಅಲ್ಲೇ ಪಕ್ಕದಲ್ಲಿದ್ದ ಎಲೆಕ್ಟ್ರಿಕ್ ಕೇಬಲ್ ನ ಮೇಲೆ ಬಿದ್ದ ಪರಿಣಾಮ ರಸ್ತೆಯ ಮತ್ತೂಂದು ಭಾಗದಲ್ಲಿದ್ದ ಎರಡು ವಿದ್ಯುತ್ ಕಂಬಗಳು ತುಂಡಾಗಿ ಅದು ಕೂಡ ರಸ್ತೆಗೆ ಬಿದ್ದ ಹಿನ್ನೆಲೆಯಲ್ಲಿ ಸಂಚಾರಕ್ಕೆ ತೊಡಕು ಉಂಟಾಯಿತು.
Advertisement
ಘಟನಾ ಸ್ಥಳಕ್ಕೆ ಧಾವಿಸಿದ ಸುಳ್ಯ ಪೊಲೀಸರು, ಹಾಗೂ ಮೆಸ್ಕಾಂ ಸಿಬ್ಬಂದಿಗಳು, ಮರ ತೆರವು ಮಾಡಿ, ಮುರಿದು ಬಿದ್ದಿದ್ದ ವಿದ್ಯುತ್ ಕಂಬವನ್ನು ಪಕ್ಕಕ್ಕೆ ಸೇರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪುತ್ತೂರು: ಆಲಿಕಲ್ಲು ಮಳೆ ಪುತ್ತೂರು: ತಾಲೂಕಿನ ವಿವಿಧ ಭಾಗಗಳಲ್ಲಿ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ಸುಮಾರು ಅರ್ಧ ತಾಸು ಉತ್ತಮ ಮಳೆ ಸುರಿದಿದೆ. ನಗರದಲ್ಲಿ ಕೆಲ ಮನೆಗಳಿಗೆ ಹಾನಿ ಉಂಟಾಗಿದೆ. ಕಳೆದ ಎರಡು ದಿನಗಳಿಂದ ಪುತ್ತೂರು ನಗರ ಸಹಿತ ಗ್ರಾಮಾಂತರ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು ಸಿಡಿಲಿನ ಆರ್ಭಟ ಜೋರಾಗಿತ್ತು. ಮೇ 12ರಂದು ಆಲಿಕಲ್ಲು ಸಹಿತ ಮಳೆಯಾಗಿದ್ದು ದೊಡ್ಡ ದೊಡ್ಡ ಗಾತ್ರದ ಆಲಿಕಲ್ಲು ಇಳೆಗೆ ಬಿದ್ದಿದೆ. ಅಡಿಕೆ ತೋಟಕ್ಕೆ ಹಾನಿ: ಭಾರೀ ಗಾಳಿ ಬೀಸಿದ ಪರಿಣಾಮ ಇಳಂತಿಲ ಸಹಿತ ವಿವಿಧ ಭಾಗಗಳಲ್ಲಿ ಅಡಿಕೆ ತೋಟಕ್ಕೆ ಹಾನಿ ಉಂಟಾಗಿದೆ. ಹಲವೆಡೆ ಅಡಿಕೆ ಮರಗಳು ಧರೆಗೆ ಉರುಳಿವೆ. ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ. ನಗರ ಸಹಿತ ಗ್ರಾಮಾಂತರ ಭಾಗಗಳಲ್ಲಿ ವಿದ್ಯುತ್, ಇಂಟರ್‌ನೆಟ್ ಸಂಪರ್ಕ ಕಡಿತಗೊಂಡಿತು. ಮನೆಗೆ ಹಾನಿ: ಬಪ್ಪಳಿಗೆಯ ಸಿಂಗಾಣಿಯಲ್ಲಿ ಕಮಲ ಅವರ ಮನೆಯ ಮಾಡಿನ ಶೀಟು ಗಾಳಿಗೆ ಹಾರಿ ಹೋಗಿದ್ದು, ಉರ್ಲಾಂಡಿಯಲ್ಲಿ ಶೋಭಾ ಹೆಗ್ಡೆ ಅವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಜಖಂಗೊಂಡಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದು ಕಾರು, ಆಟೋಗೆ ಹಾನಿ
ಕಡಬ: ಕಡಬ, ಬಿಳಿನೆಲೆ, ಸುಬ್ರಹ್ಮಣ್ಯ, ಪಂಜ, ಕಾಣಿಯೂರು, ಆಲಂಕಾರು, ಆತೂರು, ಇಚಿಲಂ ಪಾಡಿ ಮೊದಲಾದೆಡೆ ಭಾರೀ ಗಾಳಿ ಮಳೆಯಾಗಿದ್ದು, ಮರ್ಧಾಳ -ಕೊಣಾಜೆ ಸಂಪರ್ಕ ರಸ್ತೆಯ ಕೇನ್ಯ ಎಂಬಲ್ಲಿ ಬೃಹತ್ ಮರ ಬಿದ್ದ ಪರಿಣಾಮ ಆಟೋ ರಿಕ್ಷಾ ಹಾಗೂ ಕಾರಿಗೆ ಹಾನಿಯಾಗಿದೆ. ಕೊಂಬಾರು ಭಾಗದಲ್ಲಿ ಗಾಳಿ ಮಳೆಗೆ ಅಡಿಕೆ, ತೆಂಗು ಹಾಗೂ ಬಾಳೆ ಕೃಷಿಗೆ ಹಾನಿಯಾಗಿದೆ. ಕೊಂಬಾರಿನ ದೇವುಪಾಲ್ ಕೋಲ್ಪೆ ನಿವಾಸಿ ಕುಸುಮಾ ಅವರಿಗೆ ಸೇರಿದ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಮುರಿದುಬಿದ್ದಿದೆ. ಕಡಬ ಪೇಟೆಯಲ್ಲಿ ಸೈಂಟ್ ಜೋಕಿಮ್ ಶಾಲೆಯ ಬಳಿ ಬೃಹತ್ ಮರ ವಿದ್ಯುತ್ ಲೈನ್ ಮೇಲೆ ಮುರಿದು ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕಡಬ ತಾಲೂಕಿನ ಕುದ್ಮಾರು ಗ್ರಾಮದ ದೈಪಿಲ ದ್ವಾರದ ಕಜೆ ಎಂಬಲ್ಲಿ 5 ವಿದ್ಯುತ್ ಕಂಬಗಳು ಮುರಿದು ಬಿದ್ದು ಹಾನಿಯಾಗಿದೆ. ಕಾಮಗಾರಿ ಅಪೂರ್ಣ ಸಂಚಾರ ಅಸ್ತವ್ಯಸ್ತ
ಬೆಳ್ಳಾರೆ: ಧರ್ಮಸ್ಥಳ ಕ್ಷೇತ್ರಕ್ಕೆ ಮಡಿಕೇರಿ, ಸುಳ್ಯ ಭಾಗದಿಂದ ಕಡಿಮೆ ಅವಧಿಯಲ್ಲಿ ಸಂಪರ್ಕ ಕಲ್ಪಿಸುವ ಬೆಳ್ಳಾರೆ ಸವಣೂರು ರಸ್ತೆಯ ಕಾಪುಕಾಡು ಸಮೀಪದಲ್ಲಿ ಕಾಮಗಾರಿ ಅಪೂರ್ಣದ ಪರಿಣಾಮ ಮಳೆಗೆ ಇಡೀ ರಸ್ತೆಯೇ ಕೆಸರುಮಯವಾಗಿದೆ. ಸುಮಾರು 10 ಕೋ.ರೂ.ವೆಚ್ಚದ ಕಾಮಗಾರಿಯು ಕಳೆದ 3 ತಿಂಗಳಿನಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದು ಕಾಮಗಾರಿ ಅವ್ಯವಸ್ಥೆ ಯಿಂದಲೇ ಸಮಸ್ಯೆ ಉದ್ಭವಿಸಿದೆ. ಸ್ಥಳೀಯ ಅಡಿಕೆ ತೋಟಕ್ಕೂ ಹಾನಿ ಉಂಟಾಗುವ ಆತಂಕವಿದೆ. ಬೆಳ್ತಂಗಡಿ: ಪಪ್ಪಾಯಿ ತೋಟ ನಾಶ
ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಗ್ರಾಮದ ಗಜಂತೋಡಿ ಸಮೀಪ ಪಪ್ಪಾಯ ಕೃಷಿಗೆ ಹಾನಿಯಾಗಿದೆ. ಗಜಂತೋಡಿ ಸಮೀಪದ ಬಿಜು ವಗàìಸ್ ಅವರು ಬೆಳೆದ ಪಪ್ಪಾಯ ಕೃಷಿ ಸಂಪೂರ್ಣ ನೆಲಕಚ್ಚಿದೆ. 150ಕ್ಕಿಂತ ಅಧಿಕ ಪಪ್ಪಾಯಿ ಗಿಡಗಳು ತುಂಡರಿಸಿ ಬಿದ್ದೆವೆ. ಕಳೆದ ಎರಡು ತಿಂಗಳ ಹಿಂದೆ ಮಳೆಗೆ 200ಕ್ಕೂ ಅಧಿಕ ಬಾಳೆ ಕೃಷಿ ಹಾನಿಯಾಗಿತ್ತು. ಹಲವಾರು ತೋಟಗಳಲ್ಲಿ ಅಡಿಕೆ, ರಬ್ಬರ್ ಮರಗಳು ಮುರಿದುಬಿದ್ದಿವೆ. ಮನೆ, ಕೊಟ್ಟಿಗೆಗಳ ಶೀಟುಗಳು ಹಾರಿಹೋಗಿವೆ. ವಿದ್ಯುತ್ ಕಂಬಕ್ಕೆ ಹಾನಿ, ಮೆಸ್ಕಾಂಗೆ ನಷ್ಟ
ಬೆಳ್ತಂಗಡಿ ಹಾಗೂ ಉಜಿರೆ ಮೆಸ್ಕಾಂ ಉಪ ವಿಭಾಗದ ನಡ, ಕಾಜೂರು, ಕಡಿರುದ್ಯಾವರ, ಧರ್ಮಸ್ಥಳ ಮೊದಲಾದ ಭಾಗಗಳಲ್ಲಿ 12ರಷ್ಟು ಅಧಿಕ ವಿದ್ಯುತ್ ಕಂಬಗಳು ಮುರಿದುಬಿದ್ದು ಮೆಸ್ಕಾಂಗೆ ಎರಡು ಲಕ್ಷ ರೂ.ಗಿಂತ ಅಧಿಕ ನಷ್ಟ ಸಂಭವಿಸಿದೆ. ಕಾನರ್ಪ ತೂಗು ಸೇತುವೆ ಸಮೀಪ ವಿದ್ಯುತ್‌ಲೈನ್ ಮೇಲೆ ಅಡಿಕೆ ಮರ ಬಿದ್ದು ಬೆಂಕಿ ಹೊತ್ತಿಕೊಂಡಿತು. ನಡ, ಕಡಿರುದ್ಯಾವರ ಮೊದಲಾದ ಗ್ರಾಮಗಳ ರಸ್ತೆಗಳಲ್ಲಿ ಮರ ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಯಿತು. ಸುಳ್ಯ: ಹೆದ್ದಾರಿಗೆ ಬಿತ್ತು ಮರ
ಸುಳ್ಯ: ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ನಗರದ ಪರಿವಾರಕಾನದಲ್ಲಿ ಬೃಹತ್ ಮರವೊಂದು ಹೆದ್ದಾರಿಗೆ ಉರುಳಿ ಬಿದ್ದ ಘಟನೆ ರವಿವಾರ ಸಂಭವಿಸಿದ್ದು ಕೆಲವು ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಘಟನೆಯಲ್ಲಿ ಎರಡು ವಿದ್ಯುತ್ ಕಂಬಗಳು ಮುರಿದಿದೆ. ಮೆಸ್ಕಾಂ ವತಿಯಿಂದ ವಿದ್ಯುತ್ ಲೈನ್ ತೆರವು ಹಾಗೂ ದುರಸ್ತಿ ನಡೆಸಲಾಯಿತು. ನಾಲ್ಕು ದಿನ ಮಳೆ ಸಾಧ್ಯತೆ
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, “ಎಲ್ಲೋ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.