Advertisement
ಮುಂಬಯಿಯಿಂದ ಆಗಮಿಸುವ ಇಂಡಿಗೋ ವಿಮಾನ ಬುಧವಾರ ರದ್ದುಗೊಂಡಿದ್ದು, ಮಧ್ಯಾಹ್ನ ಬರಬೇಕಿದ್ದ ಏರ್‌ಇಂಡಿಯಾ ವಿಮಾನ ಸಂಜೆ ವೇಳೆಗೆ ಮಂಗಳೂರಿಗೆ ಆಗಮಿಸಿದೆ. ಸಂಜೆಯ ಇಂಡಿಗೋ ವಿಮಾನ ಕೂಡ ತಡವಾಗಿ ಆಗಮಿಸಿದೆ.
ಉಡುಪಿ: ಮುಂಬಯಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ತೆರಳಿದ್ದ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಪಾದರು ಮಂಗಳೂರು ವಿಮಾನ ರದ್ದಾದ ಕಾರಣ ಮುಂಬಯಿಯಿಂದ ಬೆಂಗಳೂರಿಗೆ ತೆರಳಿದ್ದು ಬುಧವಾರ ರಾತ್ರಿ ರೈಲಿನಲ್ಲಿ ಉಡುಪಿ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ. ಮಂಗಳವಾರ ಸಾಂತಾಕ್ರೂಜ್‌ಗೆಂದು ರೈಲಿನಲ್ಲಿ ತೆರಳಿದ್ದಾಗ ಭಾರೀ ಮಳೆಯ ಪರಿಣಾಮ ಬೊರಿವಿಲಿಯಲ್ಲಿಯೇ ರೈಲು ನಿಲುಗಡೆಯಾಯಿತು. ಅನಂತರ ಟ್ಯಾಕ್ಸಿಯಲ್ಲಿ ಡೊಂಬಿವಿಲಿ ವರೆಗೆ ತೆರಳಲು ಮುಂದಾದಾಗ ಕೆಲವು ಟ್ಯಾಕ್ಸಿ ಯವರು ನಿರಾಕರಿಸಿದರು. ಗುಲ್ಬರ್ಗ ಮೂಲದ ಟ್ಯಾಕ್ಸಿ ಚಾಲಕ ಶರ್ಪುದ್ದೀನ್ ಮಲೀಕ್ ಶ್ರೀಗಳನ್ನು ಡೊಂಬಿವಿಲಿ ವರೆಗೆ ಕರೆದೊಯ್ದರು. ಅನಂತರ ಮಠದ ವಾಹನದ ಮೂಲಕ ಶ್ರೀಗಳು ಮಠಕ್ಕೆ ತೆರಳಿದರು. ಬುಧವಾರ ಬೆಳಗ್ಗೆ 9.15ಕ್ಕೆ ಮಂಗಳೂರಿಗೆ ನಿಗದಿಯಾಗಿದ್ದ ವಿಮಾನ ರದ್ದಾಯಿತು. 1.15ಕ್ಕೆ ಬೆಂಗಳೂರು ಕಡೆಗೆ ಹೋಗುವ ವಿಮಾನ ನಿಗದಿಯಾಯಿತು. ಅದು ಕೂಡ ವಿಳಂಬವಾಗಿ 3 ಗಂಟೆಗೆ ಹಾರಾಟ ನಡೆಸಿತು. ಶ್ರೀಗಳು ಸಂಜೆ ಬೆಂಗಳೂರು ತಲುಪಿದರು.
Related Articles
Advertisement