ವಿಶಾಖಪಟ್ಟಣ : ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಆಂಧ್ರಪ್ರದೇಶದ ಕರಾವಳಿ ಭಾಗ, ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳದ ಆರು ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಹೆದ್ದಾರಿಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಅಸ್ಸಾಂನ ಹಲವು ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. 11 ಜಿಲ್ಲೆಗಳಲ್ಲಿ ಕನಿಷ್ಠ 1.33 ಲಕ್ಷ ಮಂದಿಯ ಜೀವನ ಅಸ್ತವ್ಯಸ್ತವಾಗಿದೆ.
2050ಕ್ಕೆ ಮುಂಬಯಿಯ ಪ್ರಮುಖ ಭಾಗಗಳು ಜಲಾವೃತ: ಮಹಾರಾಷ್ಟ್ರದ ದಕ್ಷಿಣ ಮುಂಬಯಿಯ ಹಲವು ಪ್ರಮುಖ ಸ್ಥಳಗಳು 2050ರ ವೇಳೆಗೆ ಸಮುದ್ರದ ಪಾಲಾಗಲಿವೆ ಎಂದು ಮುಂಬಯಿ ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಹಲ್ ಹೇಳಿದ್ದಾರೆ.