Advertisement

ಜನಪದರು ಕಂಡ ಮಳೆ…

11:41 AM Jun 06, 2021 | Team Udayavani |

ಮಳೆ ಎಂದರೆ ನಿರೀಕ್ಷೆ, ಸಂಭ್ರಮ, ಸಮೃದ್ಧಿಯ ಕನಸು. ಹಸುರು ಹಾಡಿನ ಪಲ್ಲವಿ. ಮೀನಾಟ, ನೀರ ಹಕ್ಕಿಗಳ ತೇಲು ಮುಳುಗಾಟ, ರಮ್ಯ ರಮಣೀಯ ನೋಟ, ಕಮಾನು ಕಾಮನಬಿಲ್ಲು, ಕವಿ ಎದೆಯಲ್ಲಿ ಭಾವಗೀತೆಯ ಹುಟ್ಟು…. ಮಳೆ ಮಣ್ಣಿನ ಸಮ್ಮಿಲನ ಪರಿಮಳ ಚೈತನ್ಯಗಾನ.

Advertisement

ಮಳೆ ತರುವ ಮೋಡಗಳು ಕಾವ್ಯ, ಕತೆ, ಹಾಡು ಹುಟ್ಟಿಗೆ ಕಾರಣ. ಕಾವ್ಯಗಳಲ್ಲಿ ವರ್ಣನೆಗೆ ಪಾತ್ರ ಕಾಳಿದಾಸನ ಮೇಘ ಸಂದೇಶದಲ್ಲಿ ಮೋಡ ಸುದ್ದಿವಾಹಕ. ನಮ್ಮ ಜನಪದರು ಮಳೆಗಳಿಗೂ ಗಾದೆ ಕಟ್ಟಿದರು. ಈ ಗಾದೆಗಳು ಮಳೆಯ ಲಕ್ಷಣದೊಂದಿಗೆ ಬದುಕಿನ ಧ್ವನಿಯಲ್ಲಿ ಇವೆ. ಮಳೆ ಬೆಳೆಗೆ ಸಿಂಗಾರ ಅನ್ನುವ ಗಾದೆ, ಮಳೆ ಗಾದೆಗಳಿಗೆ ಮುನ್ನುಡಿಯಾಗಿದೆ. ಮಳೆಯ ಕೆಲವು ಗಾದೆಗಳೆಂದರೆ……

ಮಳೆ ಬಂದರೆ ಕೆಡಲ್ಲ, ಮನೆ ಮಗ ಉಂಡರೆ ಕೆಡಲ್ಲ

ಅಶ್ವಿ‌ನಿ ಮಳೆ ಬಿದ್ದರೆ ಅರಿಶಿನಕ್ಕೆ ಮೇಲು

ಭರಣಿ ಸುರಿದು ಧರಣಿ ಬದುಕಿತು

Advertisement

ರೋಹಿಣಿ ಬಿದ್ದರೆ ಓಣಿಯಲ್ಲಾ ಕೆಸರು

ಆರಿದ್ರಾ ಬಂದರೆ ದಾರಿದ್ರé ಹೋದೀತು

ಅಸಲಿ ಮಳೆ ಕೈತುಂಬಾ ಬಳೆ

ಬಂದರೆ ಮಘಾ ಇಲ್ಲದಿದ್ದರೆ ಧಗೆ

ಹುಬ್ಬಿ ಮಳೆ ಬಂದರೆ ಗುಬ್ಬಿ ತಲೆಯು ತೊಯ್ದು

ವಿಶಾಕಿ ಮಳೆ ಪಿಶಾಚಿ ಹಿಡಿದ ಹಾಗೆ

ಹೀಗೆ ಮಳೆಯ ಹೆಸರುಗಳನ್ನು ಬಳಸಿಕೊಂಡು ಮಳೆಯ ಲಕ್ಷಣಗಳನ್ನು ಆಧರಿಸಿ ಹತ್ತು ಹಲವಾರು ಗಾದೆಗಳನ್ನು ರಚಿಸಿ ಇಂದಿನ ಪೀಳಿಗೆಗೆ ತೋರಿಸಿರುವ ಜನಪದರ ವಿದ್ವತ್ತಿಗೆ ಒಂದು ಸಲಾಂ.

ಬಾಲ್ಯದಲ್ಲಿ ಮಳೆಯಲ್ಲಿ ತೋಯ್ಯುತ್ತಲೆ ಅಮ್ಮನಿಂದ ಪೆಟ್ಟು ತಿನ್ನುವುದರಲ್ಲಿ ಖುಷಿ ಇತ್ತು. ಮಳೆಯಲ್ಲಿ ಆಟ ಆಡುವುದರಲ್ಲಿ ಸಂಭ್ರಮವಿತ್ತು. ಮನೆಯಲ್ಲಿದ್ದರೂ ಕಣ್ತಪ್ಪಿಸಿ ಒಮ್ಮೆ ಅಂಗಳಕ್ಕೆ ಹಾರಿ ಬಿಡುವಲ್ಲಿ ಮಜವಿತ್ತು. ಆದರೆ ಈಗ ಹೊರಗೆ ಧಾರೆಯಾಗಿ ಮಳೆ ಸುರಿದರೂ ಆಫೀಸ್‌ನೊಳಗೆ ಕುಳಿತವರಿಗೆ ಪುಟ್ಟ ಹನಿಯ ಅನುಭವವೂ ಆಗಿರುವುದಿಲ್ಲ. ಒಂದು ಕಾಲದಲ್ಲಿ ಮೊದಲ ಮಳೆಗೆ ನೆನದರೆ ಒಳ್ಳೆಯದು ಎನ್ನುತ್ತಿದ್ದರು. ಆದರೆ ಈಗ ಮೊದಲ ಮಳೆಗೆ ನೆನೆದರೆ ಶೀತ ಜ್ವರ ಬರುತ್ತದೆ ಎನ್ನುತ್ತಾರೆ. ಶೀತ ಜ್ವರಗಳು ಬರುತ್ತವೋ ಇಲ್ಲವೋ ಗೊತ್ತಿಲ್ಲ ಆದರೆ ನೇನೆಯುವುದರಲ್ಲಿಯ ಸುಖವಂತು ಕಳೆದುಕೊಳ್ಳುತ್ತಿದ್ದೇವೆ.

ವರಕವಿ ಬೇಂದ್ರೆಯವರು ಹೇಳಿದಂತೆ

ಮಳೆ ಬರುವ ಕಾಲಕ್ಕೆ

ಒಳಗ್ಯಾಕೆ ಕುಂತೇವು

ಇಳೆಯೊಡನೆ ಜಳಕವಾಡೋಣು

ನಾವು ಮೋಡಗಳ ನೋಡೋಣು

ಮಳೆ ಎಂದ ಕೂಡಲೇ ನೆನಪುಗಳೇಕೆ ಬಾಲ್ಯದತ್ತಲೆ ಜಾರಬೇಕು ಮಳೆಯಲ್ಲಿ ನೆನೆಯುವ ಸುಖ ಬಾಲ್ಯಕ್ಕೆ ಅಷ್ಟೆ ಸೀಮಿತವೇ?

ಪ್ರಕೃತಿಯ ಈ ಪರಮ ರೋಚಕತೆಯನ್ನು ಅನುಭವಿಸಲು ವಯಸ್ಸಿನ ಹಂಗೇಕೆ…. ಮುಂಗಾರಿನ ಅಭಿಷೇಕದಿಂದ ಮಿದುವಾದ ನೆಲದಲ್ಲಿ  ಹೆಜ್ಜೆ ಹಾಕೋಣ.

 

-ಈರಣ್ಣ ಚಿಟ್ಟಿ  ಗೋಕಾಕ

Advertisement

Udayavani is now on Telegram. Click here to join our channel and stay updated with the latest news.

Next