Advertisement

ಕರಾವಳಿಯಾದ್ಯಂತ ತಂಪೆರೆದ ಮುಂಜಾನೆ ಮಳೆ

12:50 AM Mar 03, 2020 | mahesh |

ಮಂಗಳೂರು/ ಉಡುಪಿ/ಕಾಸರಗೋಡು: ಕರಾವಳಿ ಜಿಲ್ಲೆಯಾದ್ಯಂತ ಸೋಮವಾರ ನಸುಕಿನ ವೇಳೆ ವರ್ಷಧಾರೆಯಾಗಿದೆ. ಅನಿರೀಕ್ಷಿತ ವಾಗಿ ಸುರಿದ ಮಳೆಯಿಂದಾಗಿ ಬಿಸಿಲಿನಿಂದ ಬಸವಳಿದ ಇಳೆ ತಂಪಾಯಿತು. ಮಂಗಳೂರಿನಲ್ಲಿ ನಸುಕಿನ ವೇಳೆಗೆ ಮಳೆ ಹನಿದಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ರಾತ್ರಿ 3 ಗಂಟೆಯಿಂದ ಮುಂಜಾನೆಯವರೆಗೆ ನಿರಂತರ ವಾಗಿ ಉತ್ತಮ ಮಳೆಯಾಗಿದೆ. ಸುಳ್ಯ, ಪುತ್ತೂರಿನಲ್ಲಿಯೂ ಉತ್ತಮ ವರ್ಷಧಾರೆಯಾಗಿದೆ. ಬಂಟ್ವಾಳ ತಾಲೂಕಿನ ಬಹುತೇಕ ಕಡೆ ಮಳೆ ಬಂದಿದೆ.

Advertisement

ಅಡಿಕೆ, ಕಾಳುಮೆಣಸು ಬೆಳೆಗಾರರು ಅಕಾಲಿಕ ಮಳೆಯಿಂದ ತೊಂದರೆಗೊಳಗಾದರು. ಬೆಳಗ್ಗೆ ವಾಕಿಂಗ್‌ ಮಾಡುವವರು, ಕಚೇರಿ, ಶಾಲೆಗಳಿಗೆ ತೆರಳುವವರು ಮುಂಜಾನೆಯ ಮಳೆಯಿಂದಾಗಿ ಪರದಾಡುವಂತಾಯಿತು. ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಪುತ್ತೂರು, ಮಂಗಳೂರು, ಉಡುಪಿ, ಕಾರ್ಕಳ, ಕುಂದಾಪುರ ತಾಲೂಕಿನಾದ್ಯಂತ ಮಳೆ ಸುರಿದಿದೆ. ಹೆಬ್ರಿಯಲ್ಲಿ ಒಂದು ವಿದ್ಯುತ್‌ ಕಂಬಕ್ಕೆ ಹಾನಿಯಾಗಿದೆ.

ಸಂಚಾರ ಸಂಕಷ್ಟ
ಚೆರ್ಕಳ – ಕಲ್ಲಡ್ಕ ಹೆದ್ದಾರಿಯನ್ನು ಬದಿಯಡ್ಕದಿಂದ ನೆಕ್ರಾಜೆ ವರೆಗೆ ಡಾಮರು ಕಾಮಗಾರಿಗಾಗಿ ಅಗೆದಿದ್ದು ಮಳೆಯಿಂದಾಗಿ ಸಂಪೂರ್ಣ ಕೆಸರು ಮಯವಾಯಿತು ಕೆಲವು ಕಡೆಗಳಲ್ಲಿ ಬಸ್‌ಗಳು ಸಂಚರಿಸುವುದಕ್ಕೂ ಸಾಧ್ಯವಾಗಲಿಲ್ಲ. ವಿದ್ಯಾರ್ಥಿಗಳು, ಪ್ರಯಾಣಿಕರು ಕೆಸರಿನ ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗದೆ ಪರದಾಡಿದರು.

ಬಿ.ಸಿ.ರೋಡ್‌ – ಪುಂಜಾಲಕಟ್ಟೆ ನಡುವೆ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಅಕಾಲಿಕ ಮಳೆಯ ಪರಿಣಾಮ ಹೆದ್ದಾರಿ ಕಾಮಗಾರಿಗೂ ಅಡ್ಡಿಯುಂಟಾಗಿದೆ. ಬಿ.ಸಿ. ರೋಡ್‌ನಿಂದ ಜಕ್ರಿಬೆಟ್ಟುವರೆಗೆ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಅಗೆದು ಹಾಕಲಾಗಿದ್ದು, ನೀರು ಹರಿದು ಹೋಗುವ ತೋಡು, ಚರಂಡಿಗಳು ಮುಚ್ಚಿರುವುದರಿಂದ ನೀರು ರಸ್ತೆ ಮಧ್ಯದಲ್ಲೇ ಶೇಖರಣೆ ಗೊಳ್ಳುತ್ತಿರುವುದು ಕಂಡುಬಂತು.

ಪೂರ್ವ ಮುಂಗಾರು
ಸಾಮಾನ್ಯವಾಗಿ ಪೂರ್ವ ಮುಂಗಾರು ಆಗಮಿಸುವುದು ತಡವಾಗುತ್ತದೆ. ಈ ಬಾರಿ ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಯುಂಟಾದ ಕಾರಣ ಮಳೆಯಾಗಿದ್ದು, ಇದು ಪೂರ್ವ ಮುಂಗಾರು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಮುಂದಿನ ಎರಡು ದಿನಗಳ ಕಾಲ ಕರಾವಳಿಯಾದ್ಯಂತ ಹಗುರ  ದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾ ಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ವಿಜ್ಞಾನಿ ಸುನಿಲ್‌ ಗವಾಸ್ಕರ್‌ ತಿಳಿಸಿದ್ದಾರೆ.

Advertisement

ಎರ್ಮಾಳು ಕಲ್ಸಂಕ: ಮೊದಲ ಮಳೆಗೇ ಮುಳುಗಿದ ಹೆದ್ದಾರಿ!
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಎರ್ಮಾಳು ಕಲ್ಸಂಕದಲ್ಲಿ ಮಳೆ ನೀರು ತುಂಬಿದ ಕಾರಣ ವಾಹನಗಳು ಸಂಚರಿಸಲು ಪರದಾಡಿದ ಘಟನೆ ಸೋಮವಾರ ಮುಂಜಾನೆ ಸಂಭವಿಸಿತು.

ಚತುಃಷ್ಪಥ ಕಾಮಗಾರಿಯಲ್ಲಿ ಒಂದು ಪಾರ್ಶ್ವದ ಎರ್ಮಾಳು ಕಲ್ಸಂಕ ಕಾಮಗಾರಿಯನ್ನು ಅರೆಬರೆಯಾಗಿ ಮುಗಿಸಿರುವ ನವಯುಗ ನಿರ್ಮಾಣ ಕಂಪೆನಿಯು ಹೆದ್ದಾರಿಯ ಎರಡೂ ಬದಿಗಳಲ್ಲೂ ಲೋಡುಗಟ್ಟಲೆ ಕೆಂಪು ಮಣ್ಣನ್ನು ತಂದು ರಾಶಿ ಹಾಕಿದೆ. ಸೋಮವಾರ ಮುಂಜಾನೆ 3 ಗಂಟೆಯಿಂದ ಅನಿರೀಕ್ಷಿತವಾಗಿ ಸುರಿದ ನಿರಂತರ ಮಳೆಯ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಯಲ್ಲೇ ತುಂಬಿತು. ಇದರಿಂದಾಗಿ ದ್ವಿಚಕ್ರ ವಾಹನ ಸವಾರರಂತೂ ಬಹಳ ಸಂಕಷ್ಟ ಅನುಭವಿಸಿದರು.

ಕೊನೆಗೆ ಏಕಮುಖ ಸಂಚಾರದ ರಸ್ತೆಯಲ್ಲೇ ಎರಡೂ ಪಾರ್ಶ್ವದ ಎಲ್ಲ ವಾಹನಗಳು ಸಂಚರಿಸಬೇಕಾದ ಅನಿವಾರ್ಯ ಸ್ಥಿತಿ ಸೃಷ್ಟಿಯಾದ್ದರಿಂದ ಹೆದ್ದಾರಿಯಲ್ಲಿ ವಾಹನಗಳು ನಿಧಾನವಾಗಿ ಮುಂದುವರಿದವು.

ಬೆಳಕುಹರಿದ ಬಳಿಕ ನವಯುಗ ನಿರ್ಮಾಣ ಕಂಪೆನಿಯ ವಕ್ತಾರರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಬಳಿಕ ಜೆಸಿಬಿ ಮೂಲಕ ಮಣ್ಣಿನ ರಾಶಿಯನ್ನು ಬದಿಗೆ ಸರಿಸಿ ನೀರನ್ನೆಲ್ಲ ತೆರವುಗೊಳಿಸಿ 9.15ರ ಸುಮಾರಿಗೆ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next