ಮಣಿಪಾಲ: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ತಡರಾತ್ರಿ ಆರಂಭವಾದ ಮಳೆ ಸೋಮವಾರ ಬೆಳಿಗ್ಗೆಯೂ ಮುಂದುವರಿದಿದ್ದು, ಅಚ್ಚರಿಯ ಅಕಾಲಿಕ ಮಳೆಯಿಂದಾಗಿ ಸಂತಸಗೊಂಡರೂ ಜನರು ಪರದಾಡುವಂತಾಗಿದೆ.
ಉಡುಪಿ, ಕಾರ್ಕಳ, ಕುಂದಾಪುರ, ಮಂಗಳೂರು, ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಉತ್ತಮ ಮಳೆಯಾಗಿದೆ.
ವಾರದ ಮೊದಲ ದಿನವಾದ ಕಾರಣ ಬೇಗ ಕೆಲಸಕ್ಕೆ ಹೊರಡುವವರು ಅಕಾಲಿಕ ಮಳೆಯಿಂದಾಗಿ ಪರದಾಡುವಂತಾಗಿದೆ. ಬೈಕ್ ನಲ್ಲಿ ಹೊರಡುವವರು ರೈನ್ ಕೋಟ್ ಸಿಗದೆ ಕೆಲಸಕ್ಕೆ ಹೋಗುವ ತರಾತುರಿಯಲ್ಲಿ ಪರದಾಡುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂತು.
ಮಂಗಳೂರು ಪರಿಸರದಲ್ಲಿ ಗಾಳಿ ಮಳೆಯಾಗಿದೆ. ಕೋಟೆಕಾರ್, ಬೇರಿ ಪರಿಸರದಲ್ಲಿ ಬೆಳಿಗ್ಗೆ ಐದು ಗಂಟೆಗೆ ಮಳೆ ಆರಂಭವಾಗಿದ್ದು, ಗುಡುಗು ಸಿಡಿಲು ಸಹಿತ ಮಳೆಯಾಗಿದೆ.
ಪಡುಬಿದ್ರಿ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿಯ ಸೇತುವೆ ನಿರ್ಮಾಣವಾಗುತ್ತಿರುವ ಪ್ರದೇಶದಲ್ಲಿ ಕೆಸರು ಸಹಿತ ನೀರು ನಿಂತಿದೆ. ಇದರಿಂದಾಗಿ ಬೈಕ್ ಸವಾರರು ಸಂಕಷ್ಟ ಎದುರಿಸುತ್ತಿದ್ದಾರೆ.