Advertisement

ರೈತರಿಗೆ ಸಂಕಷ್ಟ ತಂದ ಅಕಾಲಿಕ ಮಳೆ : ನೀರು ತುಂಬಿ ಹರಿದ ದೊಡ್ಡ ಹಳ್ಳ

05:29 PM Jan 08, 2021 | Team Udayavani |

ಸಿರುಗುಪ್ಪ: ತಾಲೂಕಿನಲ್ಲಿ ಬುಧವಾರ ಕೆಲವು ಕಡೆ ಭಾರಿ ಮಳೆಯಾಗಿರುವ ವರದಿಯಾಗಿತ್ತು. ಅದರಂತೆ ಗುರುವಾರ ತಾಲೂಕಿನಾದ್ಯಂತ ಜಿಟಿ ಜಿಟಿ ಮತ್ತು ಜೋರಾದ ಮಳೆ ಆಗಾಗ ಸುರಿಯುತ್ತಿರುವುದು ಸಾಮಾನ್ಯವಾಗಿದ್ದು, ಮೆಣಸಿನಕಾಯಿ
ಮತ್ತು ಹತ್ತಿ ಬೆಳೆಗಾರರು ಪರದಾಡುವಂತಾಗಿದೆ.

Advertisement

ತಾಲೂಕಿನ ಕರೂರು ಹೋಬಳಿ ವ್ಯಾಪ್ತಿಯಲ್ಲಿ ಒಂದುವರೆ ಗಂಟೆಗೂ ಹೆಚ್ಚು ಕಾಲ ಮಳೆ ಅಬ್ಬರಿಸಿದ್ದು, ಹಾಗಲೂರು ಹೊಸಳ್ಳಿ, ಕರೂರು, ದರೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜೋರಾಗಿ ಭಾರಿ ಮಳೆ ಸುರಿದಿದೆ. ತಾಲೂಕಿನ ಹತ್ತಿ ಮತ್ತು ಮೆಣಸಿನಕಾಯಿ ಕೊಯ್ಲು ನಡೆಯುತ್ತಿದ್ದು, ಅಕಾಲಿಕ ಮಳೆಯಿಂದ ರೈತರಿಗೆ ನಷ್ಟವಾಗುತ್ತಿದೆ. ಮೆಣಸಿನಕಾಯಿ ಒಣಗಿಸಲು ಬೆಳೆಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೊಯ್ಲು ಮಾಡದೇ ಉಳಿದಿರುವ ಮೆಣಸಿನಕಾಯಿ ನೆಲದ ಪಾಲಾಗುತ್ತಿವೆ.

ಹತ್ತಿಯು ಕಪ್ಪು ಬಣ್ಣಕ್ಕೆ ತಿರುಗುವ ಆತಂಕ ರೈತರನ್ನು ಕಾಡುತ್ತಿದೆ. ಕೊಯ್ಲು ಮಾಡಿದ ಮೆಣಸಿನಕಾಯಿಯನ್ನು ಬಯಲಲ್ಲಿ ಒಣ ಹಾಕಿದ್ದಾರೆ, ಬಿಸಿಲು ಸಮರ್ಪಕವಾಗಿದ್ದರೆ ಮೆಣಸಿನಕಾಯಿ ಒಣಗುತ್ತದೆ. ಇಲ್ಲದಿದ್ದರೆ ಒಣ ಮೆಣಸಿನಕಾಯಿಯ ಬಣ್ಣ ಕೆಟ್ಟು ಹೋದರೆ ಮಾರುಕಟ್ಟೆಯಲ್ಲಿ ಮೆಣಸಿನಕಾಯಿಯ ಧರ ಕಡಿಮೆಯಾಗುತ್ತದೆ ಎನ್ನುವ ಚಿಂತೆ ರೈತರನ್ನು ಕಾಡುತ್ತಿದೆ.

ಇದನ್ನೂ ಓದಿ:ಹುಡುಕಾಟದಲ್ಲೇ ಬಡವಾದ ಯೋಜನೆ! 2015ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆ

ಈಗಾಗಲೇ ಕಡಲೆ ಬೆಳೆ ಹೂ ಬಿಟ್ಟಿದ್ದು, ಕಾಯಿಕಟ್ಟುವ ಹಂತದಲ್ಲಿದೆ. ಈಗ ಮಳೆಯಾದರೆ ಹೂ ಉದುರಿ ಹೋಗುತ್ತದೆ. ಅಲ್ಲದೆ ವ್ಯಾಪಕವಾಗಿ ಬೆಳೆದಿರುವ ಜೋಳವು ಮಳೆಯಿಂದಾಗಿ ಸರಿಯಾಗಿ ತೆನೆ ಕಟ್ಟುವುದಿಲ್ಲ, ಬೆಳೆ ಕುಂಠಿತವಾಗುತ್ತದೆ. ಅಕಾಲಿಕ ಮಳೆಯಿಂದಾಗಿ ಬೆಳೆಗಳಲ್ಲಿ ಹುಳುಗಳ ಕಾಟ ಹೆಚ್ಚಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಚಳಿ ಮತ್ತು ಮಳೆ ಎರಡೂ ಇದ್ದುದರಿಂದ ಜನರು ಮೈ ಮುದುರಿಕೊಂಡು ಮನೆಯಿಂದ ಹೊರ ಬರದೆ ಉಳಿದುಕೊಂಡಿದ್ದರು. ದಿನವಿಡಿ ಶೀತಗಾಳಿಯು ಮುಂದುವರೆದಿತ್ತು. ಕಳೆದೆರಡು ದಿನಗಳಿಂದ ಸೂರ್ಯನ ದರ್ಶನ ವಾಗಿಲ್ಲ. ಬೆಳಗಿನಿಂದ ರಾತ್ರಿವರೆಗೆ ಮೋಡ ಮುಸುಕಿದ ವಾತಾವರಣ ಮುಂದುವರಿದಿದೆ.

Advertisement

ಮಳೆಯಿಂದ ದೊಡ್ಡ ಹಳ್ಳಕ್ಕೆ ಜಲಕಳೆ

ಸಿರುಗುಪ್ಪ: ತಾಲೂಕಿನಲ್ಲಿ ಹರಿಯುವ ದೊಡ್ಡ ಹಳ್ಳದಲ್ಲಿ ಅಕಾಲಿಕ ಮಳೆಯಿಂದ ಜಲಕಳೆ ಬಂದಿದೆ. ಕಳೆದ ಒಂದು ತಿಂಗಳಿಂದ ದೊಡ್ಡ ಹಳ್ಳದಲ್ಲಿ ನೀರಿನ ಹರಿವು ಬತ್ತಿ ಹೋಗಿದ್ದು, ಹಳ್ಳದ ದಂಡೆಯ ರೈತರು ಏತನೀರಾವರಿ ಮೂಲಕ ಹಳ್ಳದ ನೀರನ್ನು ಬಳಸಿಕೊಂಡು ಕೃಷಿ ಮಾಡಲು ಅನಾನುಕೂಲವಾಗಿದೆ.

ಎಚ್‌.ಹೊಸಳ್ಳಿ, ಹಾಗಲೂರು, ಕರೂರು, ದರೂರು, ಗೋಸಬಾಳು, ಬೂದುಗುಪ್ಪ ಮುಂತಾದ ಗ್ರಾಮಗಳ ರೈತರ
ಜೀವನಾಡಿಯಾದ ದೊಡ್ಡ ಹಳ್ಳದ ನೀರನ್ನು ಬಳಸಿ ಸುಮಾರು 3 ಸಾವಿರದಿಂದ 4 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, ಹತ್ತಿ, ಮೆಣಸಿನಕಾಯಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ.

ಭತ್ತ ನಾಟಿಮಾಡುವ ರೈತರು ತಮ್ಮ ಗದ್ದೆಗಳಿಗೆ ಹಳ್ಳದಿಂದ ಸತತವಾಗಿ ನೀರು ಹರಿಸಿಕೊಂಡ ಕಾರಣ ನದಿಯಲ್ಲಿ ನೀರಿನ ಹರಿವು ಸಂಪೂರ್ಣವಾಗಿ ಕಡಿಮೆಯಾಗಿದ್ದು, ಬಸಿನೀರಿನಲ್ಲಿಯೇ ಗದ್ದೆಯಲ್ಲಿ ಭತ್ತ ನಾಟಿಮಾಡಲು ರೈತರು ಹರಸಾಹಸ ಪಡುತ್ತಿದ್ದರು.
ಆದರೆ ಬುಧವಾರ ಸುರಿದ ಭಾರಿ ಮಳೆಯ ಪರಿಣಾಮ ಹಳ್ಳವು ತುಂಬಿ ಹರಿಯುತ್ತಿದ್ದು, ಭತ್ತ ನಾಟಿಮಾಡುವ ರೈತರಿಗೆ ನೀರು
ಹರಿಸಿಕೊಳ್ಳಲು ಅನುಕೂಲವಾಗಿದೆ.

ಕರೂರಲ್ಲಿ ಅತಿ ಹೆಚ್ಚು ಮಳೆ

ಸಿರುಗುಪ್ಪ: ತಾಲೂಕಿನ ವಿವಿಧ ಕಡೆಗಳಲ್ಲಿ ಮಳೆಯಾಗಿದ್ದು, ಕರೂರಲ್ಲಿ ಅತಿಹೆಚ್ಚು 40.4ಮಿ. ಮೀ., ಸಿರುಗುಪ್ಪದಲ್ಲಿ
ಅತಿಕಡಿಮೆ 2.4ಮಿ. ಮೀ. ಮಳೆಯಾಗಿದೆ. ಸಿರುಗುಪ್ಪ.2.4, ತೆಕ್ಕಲಕೋಟೆ 6.2, ಸಿರಿಗೇರಿ 9.2, ಎಂ.ಸೂಗೂರು 5.2, ಹಚ್ಚೊಳ್ಳಿ 3.0, ಕರೂರು 40.4, ಕೆ.ಬೆಳಗಲ್ಲು 3.6 ಮಿ.ಮೀ. ಮಳೆಯಾಗಿದೆ ಎಂದು ತಾಲೂಕು ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next