Advertisement

ಕೋವಿಡ್ ಮಧ್ಯೆ ರೈತರಲ್ಲಿ ಮಂದಹಾಸ ಮೂಡಿಸಿದ ಮಳೆ

04:27 PM Jul 09, 2020 | mahesh |

ಬೆಳಗಾವಿ: ಕೋವಿಡ್ ವೈರಸ್‌ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೃಷಿ ಚಟುವಟಿಕೆಗಳು ಎಂದಿನಂತೆ ನಡೆದಿವೆ. ಸಾಮಾಜಿಕ ಅಂತರದ ಜಾಗೃತಿಯ ಮಧ್ಯೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೂನ್‌ ಮತ್ತು ಜುಲೈದಲ್ಲಿ ಬಿದ್ದಿರುವ ಮುಂಗಾರು ಮಳೆ ಪ್ರಮಾಣ ರೈತ ಸಮುದಾಯದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಕೋವಿಡ್ ವೈರಸ್‌ ಹಾವಳಿ ಗ್ರಾಮಾಂತರ ಪ್ರದೇಶಗಳಿಗೆ ಹರಡುತ್ತಿದ್ದರೂ ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಬದಲಾಗಿ ಬಿತ್ತನೆ ಕಾರ್ಯ ಬಿರುಸಾಗಿ ನಡೆದಿದೆ.

Advertisement

ಜೂನ್‌ ತಿಂಗಳಲ್ಲಿ ವಾಡಿಕೆಗಿಂತ ಶೇ 25 ರಷ್ಟು ಹೆಚ್ಚಿನ ಮಳೆಯಾಗಿದ್ದರೆ ಜುಲೈ ಮೊದಲ ವಾರದಲ್ಲಿ ಬೀಳುತ್ತಿರುವ ಮಳೆ ಕೃಷಿ ಕಾರ್ಯಗಳಿಗೆ ಮತ್ತಷ್ಟು ಚುರುಕು ನೀಡಿದೆ. ವಾಡಿಕೆಯಂತೆ ಜೂನ್‌ದಲ್ಲಿ 180.9 ಸೆಂ. ಮೀ ಮಳೆಯಾಗಬೇಕಿತ್ತು. ಆದರೆ 228.4 ಸೆಂಮೀಟರ್‌ ಮಳೆಯಾಗಿದೆ. ಇದು ರೈತ ಸಮುದಾಯದಲ್ಲಿ ಹೊಸ ಹುಮ್ಮಸ್ಸು ನೀಡಿದೆ. ಈ ಬಾರಿ ಉತ್ತಮ ಬೆಳೆ ನಿರೀಕ್ಷೆಯಲ್ಲಿರುವ ಜಿಲ್ಲೆಯಲ್ಲಿ ಇದುವರೆಗೆ ಶೇ. 70 ರಷ್ಟು ಬಿತ್ತನೆಯಾಗಿರುವುದೇ ಇದಕ್ಕೆ ಸಾಕ್ಷಿ.

ಸೋಯಾಬಿನ್‌ ಬಿತ್ತನೆ ಸಮಯದಲ್ಲಿ ಬೀಜದ ಬಗ್ಗೆ ಸಾಕಷ್ಟು ಗೊಂದಲಗಳು ಕಂಡುಬಂದರೂ ನಂತರ ಅಂತಹ ಯಾವುದೇ ಬೆಳವಣಿಗೆಗಳು ಜಿಲ್ಲೆಯಲ್ಲಿ ನಡೆಯಲಿಲ್ಲ. ಆರಂಭದಲ್ಲಿ ಬಿತ್ತನೆ ಮಾಡಿದ ಪ್ರದೇಶಗಳಲ್ಲಿ ಸ್ವಲ್ಪ ಸಮಸ್ಯೆ ಕಂಡುಬಂದಿತ್ತು. ಇದರಿಂದ ರೈತರಿಗೆ ಹಾನಿಯಾಗಿದೆ. ಇದರ ಬಗ್ಗೆ ಸಮೀಕ್ಷೆ
ನಡೆದಿದ್ದು ಸರಕಾರದ ಮಾರ್ಗಸೂಚಿಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಹೇಳಿಕೆ. ತರಕಾರಿ ಹಾಗೂ ಭತ್ತದ ಬೆಳೆಗೆ ಹೆಸರಾದ ಬೆಳಗಾವಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಭತ್ತದ ನಾಟಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ.

ಬೆಳಗಾವಿ ತಾಲೂಕಿನ ಬೆಳಗುಂದಿ, ರಕ್ಕಸಕೊಪ್ಪ,  ಕಡೋಲಿ, ಬೆನಕನಹಳ್ಳಿ, ಮಾರೀಹಾಳ, ಮುಚ್ಚಂಡಿ, ತಾರೀಹಾಳ ಮೊದಲಾದ ಕಡೆ ರೈತರು ಹೊಲಗಳಲ್ಲಿ ಯಾವುದೇ ಆತಂಕವಿಲ್ಲದೇ ಕೆಲಸ ಮಾಡುವ ದೃಶ್ಯಗಳು ಕಂಡುಬಂದವು. ಜಿಲ್ಲಾ ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಇದುವರೆಗೆ ಶೇ. 70 ರಷ್ಟು ಬಿತ್ತನೆಯಾಗಿದೆ. ಒಟ್ಟು 6.88 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು ಇದುವರೆಗೆ 4.85 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ
ಪೂರ್ಣಗೊಂಡಿದೆ. ಇದರಲ್ಲಿ ಬಹುಪಾಲು ಕಬ್ಬು ಬೆಳೆ ಆವರಿಸಿಕೊಂಡಿದ್ದು ಒಟ್ಟು 2.16 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬಿತ್ತನೆಯಾಗಿದೆ. ಜಿಲ್ಲೆಯ ಪ್ರಮುಖ ಬೆಳೆಯಾದ ಗೋವಿನಜೋಳ ಸಹ ಅಧಿಕ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಇದುವರೆಗೆ 63316 ಹೆ. ಪ್ರದೇಶದಲ್ಲಿ ಗೋವಿನಜೋಳ, 43789 ಹೆ.ಪ್ರದೇಶದಲ್ಲಿ
ಭತ್ತ, 72360 ಹೆ. ಪ್ರದೇಶದಲ್ಲಿ ಸೋಯಾ ಅವರೆ, 26967 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ.

ಸಮೃದ್ಧ ಕೃಷಿ ಭೂಮಿ ಹಾಗೂ ಅರಣ್ಯ ಪ್ರದೇಶವನ್ನು ಹೊಂದಿರುವ ಖಾನಾಪುರ ತಾಲೂಕಿನಲ್ಲಿ ಈಗಾಗಲೇ ಪ್ರತಿಶತ 94 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಅತೀ ಕಡಿಮೆ ಬಿತ್ತನೆ ರಾಯಬಾಗ ತಾಲೂಕಿನಲ್ಲಿ ಅಂದರೆ ಶೇ. 43,15 ರಷ್ಟು ಬಿತ್ತನೆಯಾಗಿದೆ. ಖಾನಾಪುರ ತಾಲೂಕಿನಲ್ಲಿ 19000 ಹೆಕ್ಟೇರ್‌
ನೀರಾವರಿ ಮತ್ತು 29140 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶವಿದ್ದು ಅದರಲ್ಲಿ ಒಟ್ಟು 45645 ಹೆ. ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಹುಕ್ಕೇರಿ ತಾಲೂಕಿನಲ್ಲಿ
ಶೇ 89, ಅಥಣಿಯಲ್ಲಿ ಶೇ 62, ಬೈ ಲಹೊಂಗಲ-ಶೇ 82.60, ಬೆಳಗಾವಿ-62.90, ಚಿಕ್ಕೋಡಿ-63.97, ಗೋಕಾಕ-72.60, ರಾಮದುರ್ಗ-77.04 ಹಾಗೂ ಸವದತ್ತಿ ತಾಲೂಕಿನಲ್ಲಿ ಇದುವರೆಗೆ ಶೇ 62.40 ರಷ್ಟು ಬಿತ್ತನೆ ಕಾರ್ಯಪೂರ್ಣಗೊಂಡಿದೆ.

Advertisement

ಜಿಲ್ಲೆಯಲ್ಲಿ ಎಲ್ಲಿಯೂ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಅಭಾವ ಕಂಡುಬಂದಿಲ್ಲ. ಜಿಲ್ಲೆಯಲ್ಲಿ 56557 ಕ್ವಿಂಟಲ್‌ ಬೀಜಗಳ ಬೇಡಿಕೆ ಇದ್ದು ಅದರಲ್ಲಿ ಈಗಾಗಲೇ 52273 ಕ್ವಿಂಟಲ್‌ ಬೀಜಗಳನ್ನು ಸರಬರಾಜು ಮಾಡಲಾಗಿದೆ. 6737 ಕ್ವಿಂಟಲ್‌ ಬೀಜಗಳ ಸಂಗ್ರಹ ಇದೆ. ಅದೇ ರೀತಿ ಮುಂಗಾರು ಹಂಗಾಮಿಗೆ 254850
ಮೆಟ್ರಿಕ್‌ ಟನ್‌ ಗೊಬ್ಬರದ ಬೇಡಿಕೆ ಇದ್ದು ಇದುವರೆಗೆ 127427 ಮೆಟ್ರಿಕ್‌ ಟನ್‌ ಹಂಚಿಕೆ ಮಾಡಲಾಗಿದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಹೇಳಿಕೆ.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಬಿತ್ತನೆ ಕಾರ್ಯ ನಿರೀಕ್ಷೆಯಂತೆ ನಡೆದಿದೆ. ಎಲ್ಲಿಯೂ ಬೀಜದ ಅಥವಾ ರಸಗೊಬ್ಬರದ ಅಭಾವ ಕಂಡುಬಂದಿಲ್ಲ. ಇದರ ಜೊತೆಗೆ ರೈತರಿಗೂ ಸಹ ಕೊರೊನಾ ಆತಂಕದ ಕಾರಣ ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಚಟುವಟಿಕೆಗಳನ್ನು ನಡೆಸುವಂತೆ ತಿಳುವಳಿಕೆ
ಮೂಡಿಸಲಾಗಿದೆ.
ಜಿಲಾನಿ ಮೊಕಾಸಿ ಜಂಟಿ ನಿರ್ದೇಶಕರು, ಕೃಷಿ ಇಲಾಖೆ

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next