Advertisement
ಬುಧವಾರ ರಾತ್ರಿಯಿಂದೀಚೆಗೆ ಉತ್ತರಾಖಂಡದ ಹಲವೆಡೆ ಮಳೆ ಸುರಿಯುತ್ತಿದ್ದು, ಚಮೋಲಿ ಜಿಲ್ಲೆಯ ಸುನಿಲ್ ಎಂಬ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಂಜಿನ ಮಳೆಯಾಗುತ್ತಿದೆ. ಮನೆಗಳ ಗೋಡೆಗಳಲ್ಲಿ ಹೊಸ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಜತೆಗೆ ಹಳೆಯ ಬಿರುಕುಗಳು ಮತ್ತಷ್ಟು ವಿಸ್ತರಿಸಿಕೊಳ್ಳುತ್ತಿವೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
Related Articles
Advertisement
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಉನ್ನತ ಮಟ್ಟದ ಸಭೆ ನಡೆಸಿ ಜೋಶಿಮಠದ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ. ಸಭೆಯಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಭೂಪೇಂದ್ರ ಯಾದವ್, ಗಜೇಂದ್ರ ಸಿಂಗ್ ಶೇಖಾವತ್, ಆರ್.ಕೆ. ಸಿಂಗ್ ಮತ್ತು ಉತ್ತರ-ದಕ್ಷಿಣ ವಲಯದ ಅಧಿಕಾರಿಗಳು ಭಾಗವಹಿಸಿದ್ದರು.
ಯೋಧರ ಸ್ಥಳಾಂತರ:
ಜೋಶಿಮಠದಲ್ಲಿ ಭೂಸೇನೆಗೆ ಸೇರಿರುವ 25ರಿಂದ 28 ಕಟ್ಟಡಗಳಲ್ಲೂ ಬಿರುಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸೇನೆ ಅಲ್ಲಿದ್ದ ಎಲ್ಲ ಯೋಧರನ್ನೂ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಿದೆ. ಸೇನಾ ಕಟ್ಟಡಗಳಲ್ಲಿ ಬಿರುಕು ಮೂಡಿರುವುದು ನಿಜ. ತಾತ್ಕಾಲಿಕವಾಗಿ ಯೋಧರನ್ನು ಸ್ಥಳಾಂತರಿಸಿದ್ದೇವೆ. ಅಗತ್ಯಬಿದ್ದರೆ ಶಾಶ್ವತವಾಗಿ ಸೇನಾಪಡೆಯನ್ನು ಔಲಿಗೆ ಸ್ಥಳಾಂತರಿಸಲಾಗುವುದು. ಆದರೆ ಮುಂಚೂಣಿ ನೆಲೆಗಳಿಗೆ ಸಂಪರ್ಕ ಹಾಗೂ ಕಾರ್ಯನಿರ್ವಹಣ ಸನ್ನದ್ಧತೆಗೆ ಯಾವುದೇ ತೊಂದರೆ ಆಗಿಲ್ಲ. ಅಲ್ಲದೆ ಸ್ಥಳೀಯಾಡಳಿತಕ್ಕೆ ಎಲ್ಲ ರೀತಿಯಲ್ಲೂ ಸಹಾಯ ನೀಡುವುದನ್ನು ಮುಂದುವರಿಸುತ್ತೇವೆ ಎಂದು ಸೇನಾ ಮುಖ್ಯಸ್ಥ ಜ| ಮನೋಜ್ ಪಾಂಡೆ ಈ ಕುರಿತು ಮಾಹಿತಿ ನೀಡಿದ್ದಾರೆ.
45 ಕೋಟಿ ರೂ. ಪುನರ್ವಸತಿ ಪ್ಯಾಕೇಜ್:
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ಸಿಂಗ್ ಧಮಿ ಅವರು ಬುಧವಾರ ತಡರಾತ್ರಿ ಪರಿಹಾರ ಶಿಬಿರಗಳಿಗೆ ದಿಢೀರ್ ಭೇಟಿ ನೀಡಿದ್ದು, ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಶೇಷ ಪುನರ್ವಸತಿ ಪ್ಯಾಕೇಜ್‌ಗಾಗಿ ಒಟ್ಟಾರೆ 45 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಸಂತ್ರಸ್ತರಿಗೆ ಮಧ್ಯಂತರ ಪರಿಹಾರವಾಗಿ ತಲಾ 1.5 ಲಕ್ಷ ರೂ. ನೀಡಲಾಗುವುದು. ಮನೆಗಳು, ಕಟ್ಟಡಗಳ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಫೆಬ್ರವರಿಯಲ್ಲಿ ರಾಜ್ಯದ ಔಲಿಯಲ್ಲಿ ಚಳಿಗಾಲದ ಪಂದ್ಯಾವಳಿ ಆರಂಭವಾಗಲಿದೆ. ಕೆಲವೇ ತಿಂಗಳಲ್ಲಿ ಚಾರ್‌ಧಾಮ ಯಾತ್ರೆಗೂ ಚಾಲನೆ ಸಿಗಲಿದೆ. ಇಡೀ ನಗರವೇ ಕುಸಿಯುತ್ತಿದೆ ಎಂದು ಸುದ್ದಿ ಹಬ್ಬಿಸುವುದು ಸರಿಯಲ್ಲ. ಅದು ಸ್ಥಳೀಯ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.– ಪುಷ್ಕರ್ ಸಿಂಗ್ ಧಮಿ, ಉತ್ತರಾಖಂಡ ಸಿಎಂ