Advertisement

ಬಾವಿಗಳಲ್ಲಿ ನಳನಳಿಸುತ್ತಿರುವ ನೀರಿನ ಇನ್ನಷ್ಟು ಯಶೋಗಾಥೆ

10:15 PM Aug 21, 2019 | mahesh |

ಬಿಜೈ ಕಾಪಿಕಾಡ್‌ ಶ್ರೀ ಗುರು ವೈದ್ಯನಾಥ ಶ್ರೀದೇವಿ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಒಂದು ತಿಂಗಳ ಹಿಂದೆ ಮಳೆಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ. ದೈವಸ್ಥಾನದ ತೀರ್ಥ ಬಾವಿಯ ಸಮೀಪ ಸುಮಾರು 3 ಅಡಿ ಹೊಂಡ ಮಾಡಿ ಅದಕ್ಕೆ ಮರಳು, ಜಲ್ಲಿ ಹಾಕಿ ದೈವಸ್ಥಾನದ ಮೇಲ್ಛಾವಣಿಯ, ಸುತ್ತಮುತ್ತಲಿನ ನೀರು ನೇರವಾಗಿ ಈ ಹೊಂಡಕ್ಕೆ ಹರಿಯುವಂತೆ ಮಾಡಿ ಬಾವಿಗೆ ಹರಿಯುವಂತೆ ನೋಡಿಕೊಳ್ಳಲಾಗಿದೆ. ಕಳೆದ ವರ್ಷದವರೆಗೆ ಪ್ರತಿ ಮಳೆಗಾಲದಲ್ಲಿಯೂ ಸ್ವಲ್ಪ ನೀರಷ್ಟೇ ಬಾವಿಯಲ್ಲಿ ತುಂಬುತ್ತಿತ್ತು. ಆದರೆ ಈ ಬಾರಿ ಆರು ಅಡಿಯಷ್ಟು ನೀರು ಒಂದೇ ತಿಂಗಳಲ್ಲಿ ತುಂಬಿದೆ ಎನ್ನುತ್ತಾರೆ ಆಡಳಿತ ಮಂಡಳಿ ಜತೆ ಕಾರ್ಯದರ್ಶಿ ರವಿ ಕಾಪಿಕಾಡ್‌.

Advertisement

ಕಳೆದ ಬೇಸಗೆಯಲ್ಲಿ ಎಲ್ಲ ಕಡೆ ನೀರಿನ ಹಾಹಾಕಾರ ಉಂಟಾಗಿದ್ದರಿಂದ ಭವಿಷ್ಯದಲ್ಲಿ ನೀರಿನ ಸಮಸ್ಯೆ ತಲೆದೋರದಿರಲಿ ಎಂಬ ಕಾರಣಕ್ಕಾಗಿ ದೈವಸ್ಥಾನದಲ್ಲಿ ನೀರಿಂಗಿಸುವ ಕಾರ್ಯ ನಡೆದಿದೆ. ಆಡಳಿತ ಮಂಡಳಿ ಅಧ್ಯಕ್ಷ ಎಂ. ಶಶಿಧರ ಹೆಗ್ಡೆ ಅವರ ನೇತೃತ್ವದಲ್ಲಿ ಎಲ್ಲ ಸದಸ್ಯರ ಸಹಕಾರದೊಂದಿಗೆ ಮಳೆಕೊಯ್ಲು ಅಳವಡಿಕೆ ಮಾಡಲಾಗಿದೆ. ಈ ಕೆಲಸಕ್ಕೆ ‘ಉದಯವಾಣಿ’ಯ ಮನೆಮನೆಗೆ ಮಳೆಕೊಯ್ಲು ಅಭಿಯಾನವೇ ಪ್ರೇರಣೆ ಎನ್ನುತ್ತಾರೆ ದೈವಸ್ಥಾನದ ಆಡಳಿತ ಮಂಡಳಿ ಸದಸ್ಯರು.

ಶೇ. 80ರಷ್ಟು ನೀರು ತುಂಬಿದೆ
ಮಳೆಕೊಯ್ಲು ವ್ಯವಸ್ಥೆ ಮಾಡಿದ ಒಂದೇ ವಾರದಲ್ಲಿ ಬಾವಿಯಲ್ಲಿ ಶೇ. 80ರಷ್ಟು ನೀರು ತುಂಬಿದ ಯಶೋಗಾಥೆ ಇದು. ಪುತ್ತೂರು ಕೆಯ್ಯೂರು ಗ್ರಾಮದ ದೇರ್ಲ ಅಜಿತ್‌ ರೈ ಅವರ ಮನೆಯ ಬಾವಿಯಲ್ಲಿ ಈ ಯಥೇಚ್ಛ ನೀರು.

ಅಜಿತ್‌ ರೈ ಅವರು ಕಳೆದ ವಾರವಷ್ಟೇ ತಮ್ಮ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಸಿಕೊಂಡಿದ್ದರು. ಪ್ರತಿ ಮಳೆಗಾಲದಲ್ಲಿ ಶೇ. 35ರಷ್ಟು ನೀರು ಬಾವಿಯಲ್ಲಿ ತುಂಬಿರುತ್ತಿದ್ದರೆ, ಈ ಬಾರಿ ಮಳೆಕೊಯ್ಲು ಅಳವಡಿಸಿದ ಬಳಿಕ ಶೇ. 80ರಷ್ಟು ಅಂದರೆ ಬಾವಿಯ ಮುಕ್ಕಾಲುಕ್ಕೂ ಹೆಚ್ಚು ಬಾಗ ನೀರು ಆವರಿಸಿದೆ. ‘ಮನೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇರಲಿಲ್ಲ. ಆದರೆ ಬೇಸಗೆಯಲ್ಲಿ ಕೃಷಿಗೆ ನೀರು ಕಡಿಮೆಯಾಗುತ್ತಿತ್ತು. ಇದೀಗ ಒಂದೇ ವಾರದಲ್ಲಿ ಇಷ್ಟೊಂದು ನೀರು ಮೇಲೆ ಬಂದಿರುವುದು ನೋಡಿ ಖುಷಿಯಾಗುತ್ತದೆ. ಮಳೆಕೊಯ್ಲು ವ್ಯವಸ್ಥೆ ತಿಳಿಸಿಕೊಟ್ಟ ‘ಉದಯವಾಣಿ’ಗೆ ಧನ್ಯವಾದಗಳು’ ಎನ್ನುತ್ತಾರೆ ಅಜಿತ್‌ ರೈ.

ನೀರಿನ ಸಮಸ್ಯೆ ಉಂಟಾಗದಿರಲು ಮಳೆಕೊಯ್ಲು
ಕಾವೂರು ಗಾಂಧಿನಗರ ಶಂಕರನಗರ ಲೇಔಟ್ ನಿವಾಸಿ ಚಂದ್ರಹಾಸ್‌ ಅವರ ಮನೆಯಲ್ಲಿ ಎರಡು ವಾರದ ಹಿಂದೆ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ. ಛಾವಣಿ ನೀರನ್ನು ಪೈಪ್‌ ಮುಖಾಂತರ ನೇರವಾಗಿ ಬಾವಿಗೆ ಬೀಳುವಂತೆ ಸರಳ ವಿಧಾನದ ಮೂಲಕ ಮಳೆಕೊಯ್ಲು ವ್ಯವಸ್ಥೆಯನ್ನು ಮಾಡಿದ್ದಾರೆ. ಮನೆಯಲ್ಲಿ ಈವರೆಗೆ ನೀರಿನ ಸಮಸ್ಯೆ ಉಂಟಾಗಿಲ್ಲ. ಆದರೆ ಭವಿಷ್ಯದಲ್ಲಿ ಸಮಸ್ಯೆಯಾಗದಿರಲಿ ಎಂಬ ಕಾರಣಕ್ಕೆ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದೇವೆ. ‘ಉದಯವಾಣಿ’ ಅಭಿಯಾನವೇ ನಮಗೆ ಪ್ರೇರಣೆ’ ಎಂದು ಚಂದ್ರಹಾಸ್‌ ತಿಳಿಸಿದ್ದಾರೆ.

ಕ್ರಾಂತಿ ಮಾಡಿದ ಅಭಿಯಾನ

‘ಉದಯವಾಣಿ’ ಪತ್ರಿಕೆಯ ನೀರಿಂಗಿಸುವಿಕೆ ಅಭಿಯಾನ ಪಟ್ಟಣದ ಜನರಲ್ಲಿ ಅರಿವು ಮೂಡಿಸುವ ಮೂಲಕ ಒಂದು ಕ್ರಾಂತಿಯನ್ನು ಮಾಡಿದೆ. ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಬೋರ್‌ವೆಲ್, ಬಾವಿಗಳಿಗೆ ನೀರಿಂಗಿಸಲು ಪರಿಣತರ ಆವಶ್ಯಕತೆ ಇದೆ. ಪಶ್ಚಿಮ ಘಟ್ಟಗಳ ಹಳ್ಳಿಗಳಲ್ಲಿ ಇದು ಪರಿಣಾಮಕಾರಿಯಾಗಿ ಅನುಷ್ಟಾನಗೊಂಡರೆ ಮಾತ್ರ ಕರಾವಳಿ ಜಿಲ್ಲೆಯ ಬಾವಿಗಳಲ್ಲಿ ಹಾಗೂ ಅಂತರ್ಜಲದಲ್ಲಿ ನೀರು ಹೆಚ್ಚು ಮಾಡಲು ಸಾಧ್ಯ.
– ರೋಶನ್‌ ಮಾಡ್ತಾ, ರೈತ ಮೂಡುಬಿದಿರೆ
Advertisement
Advertisement

Udayavani is now on Telegram. Click here to join our channel and stay updated with the latest news.

Next