Advertisement

ಪತ್ರಿಕೆ ಪ್ರೇರಣೆಯಿಂದ ಹಂಚಿನ ಮನೆಗೆ ಮಳೆಕೊಯ್ಲು ಅಳವಡಿಕೆ

11:20 PM Sep 10, 2019 | mahesh |

ಮಾಡಿಗೆ ಮಳೆಕೊಯ್ಲು

Advertisement

ಬೇಸಗೆಯಲ್ಲಿ ಕಾಡುತ್ತಿದ್ದ ನೀರಿನ ಸಮಸ್ಯೆಯಿಂದ ಬೇಸತ್ತು ಪತ್ರಿಕೆಯ ಮಳೆಕೊಯ್ಲು ಅಭಿಯಾನದಿಂದ ಪ್ರೇರಣೆಗೊಂಡು ಬಂದರ್‌ ಬಜಿಲಕೇರಿ ನಿವಾಸಿ ನಾಗೇಶ್‌ ಬಜಿಲಕೇರಿ ತಮ್ಮ ಹಂಚಿನ ಮನೆಗೆ ಮಳೆಕೊಯ್ಲು ಅಳವಡಿಸಿದ್ದಾರೆ.

ಮನೆಯ ಮಾಡಿನ ಬದಿಗಳಿಗೆ ಹಾಕಿರುವ ದಂಬೆಯಲ್ಲಿ ಸಂಗ್ರಹವಾಗಿರುವ ಮಳೆ ನೀರನ್ನು ಪೈಪ್‌ ಮೂಲಕ ಬಾವಿಗೆ ಬಿಡಲಾಗಿದೆ. ನಾಗೇಶ್‌ ಅವರು ಹೇಳುವಂತೆ, ಪ್ರತಿ ಬೇಸಗೆಯಲ್ಲಿ ನೀರಿನ ಅಭಾವ ಹೆಚ್ಚಾಗಿ ಕಾಡುತ್ತಿತ್ತು. ಮೇ ಅಂತ್ಯದಲ್ಲಿ ದಿನಬಿಟ್ಟು ಬರುವ ಪಾಲಿಕೆ ನೀರಿಗಾಗಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಸಂದರ್ಭ ಪತ್ರಿಕೆಯಲ್ಲಿ ಆರಂಭವಾಗಿದ್ದ ಮಳೆಕೊಯ್ಲು ಅಭಿಯಾನವನ್ನು ಓದಿ ಮನೆಯಲ್ಲಿ ಮಳೆಕೊಯ್ಲು ಮಾಡಲು ಯೋಚಿಸಿದೆವು. ಸೂಕ್ತ ಮಾರ್ಗದರ್ಶನದೊಂದಿಗೆ ಮನೆಯ ಮಾಡಿಗೆ ಮಳೆಕೊಯ್ಲು ಅಳವಡಿಸಿದೆವು. ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಮುಂದಿನ ಬೇಸಗೆಯಲ್ಲಿ ನೀರಿನ ಅಭಾವ ಕಾಡುವುದಿಲ್ಲ ಎಂಬ ನಂಬಿಕೆ ಇದೆ. ಇದಕ್ಕಾಗಿ ನಮಗಾಗಿ 6,000 ರೂ. ಖರ್ಚಾಗಿದೆ ಎಂದರು.

ನೀರಿನ ಮಟ್ಟ ಹೆಚ್ಚಳ
ಬೇಸಗೆ ಕಾಲದಲ್ಲಿ ದಿನಕ್ಕೆ ಸಾವಿರಾರು ರೂ. ಟ್ಯಾಂಕರ್‌ಗಳಿಗೆ ಖರ್ಚು ಮಾಡಿ ಬೇಸತ್ತ ನಗರದ ಫಳ್ನೀರ್‌ ಉಷಾಕಿರಣ್‌ ಅಪಾರ್ಟ್‌ಮೆಂಟ್ ನ ನಿವಾಸಿಗಳು ಅಪಾರ್ಟ್‌ಮೆಂಟ್‌ಗೆ ಮಳೆಕೊಯ್ಲು ಅಳವಡಿಸಿದ್ದಾರೆ.

ಅಪಾರ್ಟ್‌ಮೆಂಟ್‌ನಲ್ಲಿ ಮೂರು ಬ್ಲಾಕ್‌ಗಳಿದ್ದು, ಅದರಲ್ಲಿ ಒಂದು ಬ್ಲಾಕ್‌ನ 21 ನಿವಾಸಿಗಳು ಅವರ ಬ್ಲಾಕ್‌ನ ಟೆರೇಸ್‌ಗೆ ಬೀಳುವ ಮಳೆ ನೀರನ್ನು ಫಿಲ್ಟರ್‌ ಮಾಡಿ ಬಾವಿಗೆ ಬಿಟ್ಟಿದ್ದಾರೆ. ಇದಕ್ಕಾಗಿ ಅವರು 40,000 ರೂ. ವ್ಯಯಿಸಿದ್ದಾರೆ.

Advertisement

ಈ ಬಗ್ಗೆ ಮಾಹಿತಿ ನೀಡಿದ ಸುರೇಂದ್ರ ಶೆಣೈ ಅವರು, ಕಳೆದ ಬೇಸಗೆಯ ಮೂರು ತಿಂಗಳು ನಿರಂತರವಾಗಿ ದಿನಕ್ಕೆ 5,500 ರೂ. ಖರ್ಚು ಮಾಡಿ ಟ್ಯಾಂಕರ್‌ ನೀರು ತರಿಸಿಕೊಳ್ಳುತ್ತಿದ್ದೇವೆ. ಇದರಿಂದ ಬೇಸತ್ತು ಮಳೆಕೊಯ್ಲು ಅಳವಡಿಸಲು ನಿರ್ಧರಿಸಿದೆವು. ಮುಂದಿನ ಹಂತದಲ್ಲಿ ಬಾಕಿ ಇರುವ ಎರಡು ಬ್ಲಾಕ್‌ಗಳು ಮಳೆಕೊಯ್ಲು ಅಳವಡಿಸುವ ಸಾಧ್ಯತೆ ಇದೆ. ಎಲ್ಲ ಮನೆ, ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆಕೊಯ್ಲು ಅಳವಡಿಸಿದರೆ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಅವರು ಹೇಳುತ್ತಾರೆ.

ಮಳೆಕೊಯ್ಲು ಅರಿವು

ದ್ರವ ರೂಪದ ಚಿನ್ನವಾದ ನೀರನ್ನು ಯಾವ ರೀತಿ ಬಳಸಿ, ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಉದಯವಾಣಿ ಸುದಿನ ಮಳೆಕೊಯ್ಲು ಅಭಿಯಾನ ತಿಳಿಸಿದೆ. ಮಳೆಕೊಯ್ಲು ಮಹತ್ವ ಅರಿವಾಗಿದೆ.

– ರಮ್ಯಾನಿತ್ಯಾನಂದ ಶೆಟ್ಟಿ, ಗುಬ್ಬಚ್ಚಿಗೂಡು ಅಭಿಯಾನದ ಸಂಚಾಲಕಿ

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳಲ್ಲಿ ಅಳವಡಿಸುತ್ತಿದ್ದಾರೆ. ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

Advertisement

Udayavani is now on Telegram. Click here to join our channel and stay updated with the latest news.

Next