Advertisement
ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅವರು ಮಳೆಕೊಯ್ಲು ಕುರಿತು ಮಾಹಿತಿ ನೀಡಿ, ಮಳೆಕೊಯ್ಲು ಅಳವಡಿಕೆಯ ಆವಶ್ಯಕತೆ, ನೀರಿನ ಅಭಾವದಿಂದಾಗಿ ತಲೆದೋರುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿದರು. ಪ್ರಾಂಶುಪಾಲೆ ಮಾಲಿನಿ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ವಾಸವಾಗಿರುವ ಉಡುಪಿ ಮೂಲದ ಗುರುಪ್ರಸಾದ್ ಭಕ್ತ ಅವರು ಉಡುಪಿಯಲ್ಲಿರುವ ತಮ್ಮ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಮಳೆಕೊಯ್ಲು ವ್ಯವಸ್ಥೆ ಮಾಡಿದ್ದು, ಬಾವಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿರುವುದನ್ನು ಗಮನಿಸಿದ್ದಾರೆ. ಕಳೆದ 2-3 ವರ್ಷಗಳಿಂದ ಬೇಸಗೆಯಲ್ಲಿ ನೀರಿಗೆ ತೀವ್ರ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಳ್ಳಲು ಮುಂದಾಗಿದ್ದರೂ, ಮಾಹಿತಿ ಕೊರತೆಯಿಂದ ಸಾಧ್ಯವಾಗಿರಲಿಲ್ಲ. ಬಳಿಕ ‘ಉದಯವಾಣಿ’ಯಲ್ಲಿ ಮಳೆಕೊಯ್ಲು ಅಭಿಯಾನ ನೋಡಿ, ಉಡುಪಿ ಎಂಜಿಎಂ ಕಾಲೇಜು ಹಿಂಬದಿಯಲ್ಲಿರುವ ತಮ್ಮ ಮನೆಯ ಬಾವಿಗೆ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮನೆಯ ಟೆರೇಸಿನ ನೀರನ್ನು ಬಾವಿಗೆ ಬೀಳುವಂತೆ ಮಾಡಿ ಫಿಲ್ಟರ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ನೀರು ವ್ಯಯವಾಗದೆ, ಎಲ್ಲ ನೀರು ಬಾವಿಗೆ ಸೇರುವಂತೆ ನೋಡಿಕೊಳ್ಳಲಾಗಿದೆ. ಒಟ್ಟು ಯೋಜನೆಗೆ 30,500 ರೂ. ಖರ್ಚಾಗಿದೆ.
ಉದಯವಾಣಿಯಿಂದ ಜಲಜಾಗೃತಿ
ಬರಿದಾಗುತ್ತಿರುವ ಜಲಮೂಲ ಮತ್ತು ಜಲಸಂರಕ್ಷಣೆಯ ಬಗ್ಗೆ ಓದುಗರಲ್ಲಿ ಜನಜಾಗೃತಿ ಮೂಡಿಸಿ, ಜಲ ಮರುಪೂರಣ, ಮಳೆಕೊಯ್ಲು, ಇಂಗುಗುಂಡಿ ಅಳವಡಿಸಲು ಎಚ್ಚರಿಕೆಯ ಘಂಟೆ ಬಾರಿಸುವುದರ ಜತೆಗೆ ಸ್ವತಃ ಅಭಿಯಾನ ಕೈಗೊಂಡಿರುವ ‘ಉದಯವಾಣಿ’ಯ ಕಾರ್ಯ ಸ್ತುತರ್ಹ. ಈ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು ಕೂಡ ಶಾಸನ ಸಭೆಗಳಲ್ಲಿ, ಗ್ರಾಮ ಸಭೆಗಳಲ್ಲಿ ವಿಷಯ ಪ್ರಸ್ತಾಪಿಸಿ, ಅರಿವು ಮೂಡಿಸಿ ಸಮಯಾವಕಾಶ ಮಾಡಿಕೊಂಡು ಸ್ವತಃ ಅಭಿಯಾನದಲ್ಲಿ ಪಾಲ್ಗೊಂಡಲ್ಲಿ ರಾಷ್ಟ್ರವ್ಯಾಪಿ ಯಶಸ್ವಿ ಯಾಗುವುದರಲ್ಲಿ ಸಂದೇಹವೇ ಇಲ್ಲ.
– ಎಂ. ರಾಘವೇಂದ್ರ ಭಂಡಾರ್ಕರ್, ಮೂಡುಬಿದಿರೆ