Advertisement

ಉಚಿತ ಮಳೆಕೊಯ್ಲು ಕಾಯಕದಲ್ಲಿರುವ ಪ್ರತಿಷ್ಠಾನ

12:07 AM Aug 12, 2019 | sudhir |

ಉಡುಪಿ: ‘ಉದಯವಾಣಿ’ ಮಳೆಕೊಯ್ಲು ಅಭಿಯಾನ ಎಲ್ಲೆಡೆ ಯಶಸ್ವಿಯಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ತೆರೆಮರೆಯಲ್ಲಿ ಈ ಕಾರ್ಯದಲ್ಲಿ ನಿರತರಾಗಿದ್ದ ‘ಡಾ| ನಾನಾ ಸಾಹೇಬ್‌ ಧರ್ಮಾಧಿಕಾರಿ ಪ್ರತಿಷ್ಠಾನ’ವು ಉಚಿತವಾಗಿ ಮಳೆಕೊಯ್ಲು ವಿಧಾನವನ್ನು ಅಳವಡಿಸುವ ಮೂಲಕ ಎಲ್ಲೆಡೆ ಗಮನಸೆಳೆಯುತ್ತಿದೆ.

Advertisement

ದೇಶಾದ್ಯಂತ ಈ ಪ್ರತಿಷ್ಠಾನ ಸಕ್ರಿಯವಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಈ ಪ್ರತಿಷ್ಠಾನ ಕಾರ್ಯಾರಂಭ ಮಾಡಿತ್ತು. ಆಸಕ್ತ ಎಲ್ಲ ವಯೋಮಾನದವರನ್ನೊಳಗೊಂಡ ತಂಡ ಈ ಕೆಲಸ ಕಾರ್ಯದಲ್ಲಿ ನಿರತವಾಗಿದೆ. ಈ ಪ್ರತಿಷ್ಠಾನ ಜಿಲ್ಲೆಯಲ್ಲಿ ಆರಂಭವಾಗುವುದಕ್ಕೂ ಮುನ್ನ ಬೇರೆ ಜಿಲ್ಲೆಯಲ್ಲಿದ್ದ ಸದಸ್ಯರು ಈ ಬಗ್ಗೆ ಆಸಕ್ತರಿಗೆ ತರಬೇತಿ ನೀಡಿದ್ದರು. ಜಿಲ್ಲೆಯ ಆಸಕ್ತರೂ ಅದರ ಪ್ರಯೋಜನ ಪಡೆದು ಮಳೆಕೊಯ್ಲು ಬಗ್ಗೆ ಆಸಕ್ತರಿರುವವರಿಗೆ ಉಚಿತವಾಗಿ ಮಾಡಿಕೊಡುತ್ತಿದ್ದಾರೆ. ಬೇಕಿರುವ ಸಾಮಗ್ರಿಗಳನ್ನು ಮಳೆಕೊಯ್ಲು ಅಳವಡಿಸುವವರೇ ತಂದು ಕೊಡಬೇಕು.

ಎಷ್ಟು ಸಾಮಗ್ರಿ ಯಾವ ಪೈಪ್‌ ಎಂಬ ಬಗೆಗಿನ ಮಾಹಿತಿಯನ್ನು ಪ್ರತಿಷ್ಠಾನದ ಸದಸ್ಯರು ಮೊದಲೇ ಸಂಬಂಧಪಟ್ಟವರಿಗೆ ತಿಳಿಸಿರುತ್ತಾರೆ. ಅದರಂತೆ ಪ್ರತಿಷ್ಠಾನದ ಸದಸ್ಯರು ತಮ್ಮ ಬಿಡುವಿನ ವೇಳೆಯಲ್ಲಿ ಬಂದು ಈ ಕೆಲಸ ಮಾಡುತ್ತಾರೆ. ಜಿಲ್ಲೆಯಲ್ಲಿ ಸುಮಾರು 60ರಷ್ಟು ಮಂದಿ ಸದಸ್ಯರು ಈ ತಂಡದಲ್ಲಿ ಸಕ್ರಿಯವಾಗಿದ್ದು, ಈ ವರ್ಷ ಸುಮಾರು 60 ಕಡೆಗಳಲ್ಲಿ ಉಚಿತವಾಗಿ ಮಳೆಕೊಯ್ಲು ಮಾಡುವ ಮೂಲಕ ಮನೆಮಾತಾಗಿದ್ದಾರೆ.

ಅಧಿಕ ಮಳೆಕೊಯ್ಲು

ಇವಿಷ್ಟೇ ಅಲ್ಲದೆ ಸ್ವಚ್ಛತೆ ಅಭಿಯಾನ, ಸರಕಾರಿ ಜಾಗಗಳಲ್ಲಿ ಗಿಡ ನೆಡುವುದರ ಜತೆಗೆ ಅದರ ಪಾಲನೆ, ಪೋಷಣೆಯ ಜವಾಬ್ದಾರಿ ಯನ್ನೂ ತಂಡದ ಸದಸ್ಯರೇ ನಿರ್ವಹಿಸುತ್ತಾರೆ. ಈ ಪ್ರತಿಷ್ಠಾನವು ಎಲ್ಲ ರಾಜ್ಯಗಳಲ್ಲೂ

Advertisement

ಕಾರ್ಯನಿರ್ವಹಿಸುತ್ತಿದ್ದು ಅಪಾರ ಮೆಚ್ಚುಗೆ ಪಡೆದಿದೆ. 2018ರಲ್ಲೂ ಜಿಲ್ಲೆಯ ಸುಮಾರು 30 ಕಡೆಗಳಲ್ಲಿ ಮಳೆಕೊಯ್ಲು ಮಾಡಲಾಗಿತ್ತು. ಈ ವರ್ಷ ಮಳೆಕೊಯ್ಲು ಮಾಡುವವರ ಸಂಖ್ಯೆ ಅಧಿಕವಾಗಿರುವುದು ಸಂತೋಷದ ವಿಚಾರ ಎನ್ನುತ್ತಾರೆ ಈ ತಂಡದ ಸದಸ್ಯರು.

ಹಲವೆಡೆ ಕಾರ್ಯಕ್ರಮ

ಈಗಾಗಲೇ ಹಲವಾರು ಮನೆಗಳು, ಚರ್ಚ್‌, ಭಜನಾ ಮಂದಿರ, ಖಾಸಗಿ, ಸರಕಾರಿ ಶಾಲೆಗಳು, ಗ್ರಾ.ಪಂ.ಗಳು ವಾಣಿಜ್ಯ ಕಟ್ಟಡಗಳಲ್ಲಿ ಬೋರ್ವೆಲ್ ರೀಚಾರ್ಜ್‌, ಜಲಮರುಪೂರಣಗಳಂತಹ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next