Advertisement

ಮನೆ, ವಾಣಿಜ್ಯ ಮಳಿಗೆಗೆ ಮಳೆ ಕೊಯ್ಲು ಕಡ್ಡಾಯ

11:15 AM Jul 27, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ನಾಗರಿಕರಿಗೆ ನೀವು ಹೊಸದಾಗಿ ಮನೆ ಅಥವಾ ವಾಣಿಜ್ಯ ಮಳಿಗೆ ಅಥವಾ ಇನ್ನಿತರೆ ಯಾವುದೇ ಹೊಸ ಕಟ್ಟಡ ಕಟ್ಟುವ ಆಲೋಚನೆಯಲ್ಲಿದ್ದೀರಾ? ಅಥವಾ ಈಗಾಗಲೇ ಹೊಸದಾಗಿ ಮನೆ ಕಟ್ಟಿದ್ದರೆ ಅದಕ್ಕೆ ನೀವು ತಕ್ಷಣ ಮಳೆ ಕೊಯ್ಲು ಯೋಜನೆ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ಹೊಸದಾಗಿ ಕುಡಿಯುವ ನೀರು ಹಾಗೂ ವಿದ್ಯುತ್‌ ಸಂಪರ್ಕ ಜಪ್ಪಯ್ಯ ಅಂದ್ರು ಇನ್ಮೇಲೆ ಸಿಗಲ್ಲ.

Advertisement

ಹೌದು, ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ, ಬೆಳೆೆಯಿಂದ ಎದುರಾಗುತ್ತಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಅಂತರ್ಜಲ ವೃದ್ಧಿಗೊಳಿಸುವ ದಿಸೆಯಲ್ಲಿ ಪಾಳುಬಿದ್ದ ಕಲ್ಯಾಣಿಗಳ ಪುನಶ್ಚೇತನ, ಬಹುಪಯೋಗಿ ಚೆಕ್‌ಡ್ಯಾಂಗಳ ನಿರ್ಮಾಣದ ಮೂಲಕ ಜಿಲ್ಲಾಡಳಿತ ಯಶಸ್ಸು ಕಂಡಿದೆ.

ಇದೀಗ ಮಳೆ ನೀರನ್ನು ಸದ್ಬಳಕೆ ಮಾಡಿಕೊಂಡು ಭೂಮಿಗೆ ಇಂಗಿಸಲು ಮಹತ್ವಕಾಂಕ್ಷಿ ಮಳೆ ಕೊಯ್ಲು ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವ ದಿಸೆಯಲ್ಲಿ ಹೆಜ್ಜೆ ಇಟ್ಟಿದ್ದು, ಇನ್ಮೇಲೆ ಮನೆ ಅಥವಾ ವಾಣಿಜ್ಯ ಮಳಿಗೆಗಳಿಗೆ ಮಳೆ ಕೊಯ್ಲು ಯೋಜನೆ ಅನುಷ್ಠಾನಗೊಳಿಸದೇ ಇರುವುದು ಕಂಡು ಬಂದರೆ ನೀರು, ವಿದ್ಯುತ್‌ ಸಂಪರ್ಕ ನೀಡದಿರಲು ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ.

ಪಾತಾಳಕ್ಕೆ ಕುಸಿದ ಅಂತರ್ಜಲ: ರಾಜ್ಯ ಸರ್ಕಾರ 2012 ರಂದು ಹೊರಡಿಸಿರುವ ಅಧಿಸೂಚಿತ ಪ್ರದೇಶಗಳ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕನ್ನು ಹೊರತುಪಡಿಸಿ ಉಳಿದ 05 ತಾಲೂಕುಗಳಾದ ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಗುಡಿಬಂಡೆ, ಗೌರಿಬಿದನೂರು ತಾಲೂಕುಗಳನ್ನು ಅಂತರ್ಜಲ ಅತೀ ಬಳಕೆ ಪ್ರದೇಶಗಳೆಂದು ಘೋಷಿಸಲಾಗಿದೆ.

ಆಂದೋಲನಾ: ಈಗಾಗಲೇ ಜಿಲ್ಲೆಯ ಅಂತರ್ಜಲ ಮಟ್ಟ 1500, 2000 ಅಡಿಗಳ ಪಾತಳಕ್ಕೆ ಕುಸಿದು ಹನಿ ಹನಿಗೂ ಪರದಾಡುವಂತಾಗಿದೆ. ಜಿಲ್ಲೆಯ ಇತರೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಬರುವ ಅನುದಾನ ಬರೀ ಕುಡಿಯುವ ನೀರಿಗೆ ಕೋಟಿ ಕೋಟಿ ಅನುದಾನ ಖರ್ಚು ಮಾಡುವಂತಾಗಿದೆ.

Advertisement

ಹೀಗಾಗಿ ಜಿಲ್ಲೆಯಲ್ಲಿ ವಾರ್ಷಿಕವಾಗಿ 750 ಮಿ.ಮೀ ಮಳೆ ಆಗುತ್ತಿದೆ. ಆದರೆ ಮಳೆ ನೀರು ಸದ್ಬಳಕೆ ವಿಚಾರದಲ್ಲಿ ಹಿಂದೆ ಬಿದ್ದಿರುವುದನ್ನು ಮನಗಂಡಿರುವ ಜಿಲ್ಲಾಡಳಿತ ಇದೀಗ ಮಳೆ ಕೊಯ್ಲು ಯೋಜನೆಯನ್ನು ಬರದ ಜಿಲ್ಲೆಯಲ್ಲಿ ಒಂದು ರೀತಿ ಆಂದೋಲವಾಗಿ ರೂಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ರೂಪುರೇಷೆಗಳನ್ನು ಸಿದ್ಧಪಡಿಸಿದೆ.

ಇದಕ್ಕೆ ಈ ಹಿಂದೆ ಸರ್ಕಾರವೇ ಘೋಷಿಸಿ ಆದೇಶಿರುವ ಹಲವು ಆದೇಶಗಳನ್ನು ಮುಂದಿಟ್ಟು ಕೊಂಡು ಮಳೆ ಕೊಯ್ಲು ಯೋಜನೆ ಕಡ್ಡಾಯಕ್ಕೆ ಮುಂದಾಗಿದೆ.

ಮಳೆ ಕೊಯ್ಲು ಇದ್ದರೆ ಪರವಾನಿಗೆ: ಜಿಲ್ಲಾಡಳಿತದ ಆದೇಶದ ಪ್ರಕಾರ 100 ಚದರ ಮೀ.ಅಥವಾ ಅದಕ್ಕೂ ಹೆಚ್ಚು ವಿಸ್ತಾರವಿರುವ ಎಲ್ಲಾ ವಾಸ ಸ್ಥಳ, ವಾಣಿಜ್ಯ ಕಟ್ಟಡಗಳಿಗೆ ಕಡ್ಡಾಯವಾಗಿ ಮಳೆ ನೀರು ಕೊಯ್ಲಿನ ಸೂಕ್ತ ರಚನೆಗಳನ್ನು ನಿರ್ಮಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಜಿಲ್ಲಾ ಅಂತರ್ಜಲ ಪ್ರಾಧಿಕಾರ ಸಮಿತಿ ಸಭೆ ಆದೇಶಿಸಿದೆ.

ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಕಟ್ಟಡದ ನೀಲನಕಾಶೆಯಲ್ಲಿ ಚಾವಣಿಯಲ್ಲಿ ಬೀಳುವ ಮಳೆ ನೀರನ್ನು ಮಳೆ ಕೊಯ್ಲು ಮೂಲಕ ಬಳಸಿಕೊಳ್ಳುವ ಬಗ್ಗೆ ಬೇಕಾದ ನಿರ್ಮಾಣಗಳನ್ನು ಒಳಗೊಂಡಿರ ತಕ್ಕದ್ದು ಎಂಬ ಷರತ್ತಿನ ಮೇಲೆ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಲು ನಿರ್ಧರಿಸಿದೆ.

ಒಂದು ವೇಳೆ ಸದರಿ ಕಟ್ಟಡಗಳಿಗೆ ಮಳೆ ಕೊಯ್ಲು ಅಳವಡಿಸದ ಬಗ್ಗೆ ಕಂಡು ಬಂದರೆ ಅಂತಹ ಕಟ್ಟಡಗಳಿಗೆ ನೀರು ಮತ್ತು ವಿದ್ಯುತ್‌ ಸಂಪರ್ಕವನ್ನು ಖುದ್ದು ಪರಿಶೀಲಿಸಿ ವರದಿ ಮಾಡಿದ ನಂತರ ಕಾಯಂಗೊಳಿಸಲು ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿ ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ಸರ್ಕಾರಿ ಕಟ್ಟಡಗಳಿಗೂ ಕಡ್ಡಾಯ: ಈಗಾಗಲೇ ಜಿಲ್ಲಾದ್ಯಂತ ಮಳೆ ಕೊಯ್ಲು ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ಜಿಲ್ಲಾಡಳಿತ, ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳ ಕಟ್ಟಡಗಳಿಗೂ ಮಳೆ ಕೊಯ್ಲು ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಿಲ್ಲಾಡಳಿತ, ಜಿಲ್ಲಾಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಗ್ರಂಥಾಲಯ, ರಂಗ ಮಂದಿ ಸೇರಿದಂತೆ ದೊಡ್ಡ ದೊಡ್ಡ ಕಟ್ಟಡಗಳಿಗೂ ಮಳೆ ಕೊಯ್ಲು ಯೋಜನೆ ಅಳವಡಿಸಿಲ್ಲ. ಇದೀಗ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮಳೆ ಕೊಯ್ಲು ಯೋಜನೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

 

● ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next