Advertisement

ಮಳೆ ಕೊಯ್ಲು : ಮನೆ ಮನೆಯಲ್ಲೂ ಮೂಡುತ್ತಿದೆ ಜಾಗೃತಿ

01:00 AM Jul 02, 2019 | mahesh |

ಮಹಾನಗರ: ನಗರ ಮಾತ್ರವಲ್ಲದೆ, ನಗರದ ಹೊರ ವಲಯಗಳಲ್ಲಿಯೂ ಜನರು ಜಲಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ. ಮಳೆಕೊಯ್ಲು ವ್ಯವಸ್ಥೆ ಅಳವಡಿಸಿ ಭವಿಷ್ಯದಲ್ಲಿ ನೀರಿನ ಭವಣೆ ತಪ್ಪಿಸಲು ಈಗಿಂದಲೂ ಸನ್ನದ್ಧರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

Advertisement

‘ಮನೆಮನೆಗೆ ಮಳೆಕೊಯ್ಲು’ ಉದಯವಾಣಿ ಅಭಿಯಾನದ ಬಳಿಕದಿನದಿಂದ ದಿನಕ್ಕೆ ಮಳೆಕೊಯ್ಲು ಅಳವಡಿಸುವವರ ಸಂಖ್ಯೆ ಜಾಸ್ತಿಯಾಗುತ್ತಿರುವುದು ಈ ನಿಟ್ಟಿನಲ್ಲಿ ಗಮನಾರ್ಹ.

ಕೊಳವೆ ಬಾವಿಗೆ ಮಳೆ ನೀರು
ಹಲವು ವರ್ಷಗಳಿಂದ ನೀರಿನ ಸಮಸ್ಯೆ ಎದುರಾಗುತ್ತಿರುವುದರಿಂದ ಮಳೆಕೊಯ್ಲು ಅಳವಡಿಸುವ ಬಗ್ಗೆ ಯೋಚಿಸಿದೆವು. ಅದರಂತೆ ತಿಳಿದವರಿಂದ ಮಾಹಿತಿ ಕಲೆ ಹಾಕಿ ಮಳೆಕೊಯ್ಲು ಅಳವಡಿಸಿದೆವು. ಈಗ ನೀರಿನ ಸಮಸ್ಯೆ ಅಷ್ಟಾಗಿ ಕಾಣಿಸಿಕೊಂಡಿಲ್ಲ ಎನ್ನುತ್ತಾರೆ ಸೂರಿಂಜೆಯ ದಾಮೋದರ ಅಂಚನ್‌.

ಮನೆ 8 ಸೆಂಟ್ಸ್‌ ಜಾಗದಲ್ಲಿದ್ದು, ಮನೆಯ ಟೆರೇಸ್‌ಗೆ ಪೈಪ್‌ ಅಳವಡಿಸಿ ಅಲ್ಲಿಂದ ನೀರನ್ನು ನೇರವಾಗಿ ಬೋರ್‌ವೆಲ್ಗೆ ಬಿಟ್ಟಿದ್ದೇವೆ. ಹಿಂದೆ ಬೋರ್‌ವೆಲ್ನಲ್ಲಿ ಇದ್ದ ನೀರಿನ ಮಟ್ಟಕ್ಕಿಂತ ಮಳೆಕೊಯ್ಲು ಅಳವಡಿಸಿದ ಬಳಿಕ ನೀರಿನ ಮಟ್ಟ ಹೆಚ್ಚಾಗಿದೆ. ಮಳೆಕೊಯ್ಲು ಅಳವಡಿಕೆಯಿಂದ ನೀರಿನ ಸಮಸ್ಯೆ ಬಹಳ ಕಡಿಮೆಯಾಗಿದೆ. ಎಲ್ಲ ಮನೆಗಳಲ್ಲೂ ಮಳೆಕೊಯ್ಲು ಅಳವಡಿಕೆ ಮಾಡಿದರೆ ಉತ್ತಮ ಎನ್ನುತ್ತಾರೆ ಅವರು.

ಹಳೆ ಬಾವಿಗೆ ಮಳೆಕೊಯ್ಲು

Advertisement

ಕಿನ್ನಿಗೋಳಿಯ ಸಚ್ಚಿದಾನಂದ ಭಟ್ ಅವರು ನಾಲ್ಕು ದಿನಗಳ ಹಿಂದಷ್ಟೇ ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ.

ಸಚ್ಚಿದಾನಂದ ಅವರ ಮನೆಯಲ್ಲಿ 40 ವರ್ಷಗಳ ಹಳೆಯ ಬಾವಿ ಇದ್ದು, ಕಳೆದ ವರ್ಷದವರೆಗೂ ನೀರಿನ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಕಳೆದ ಬೇಸಗೆಯಲ್ಲಿ ಬಾವಿಯಲ್ಲಿ ನೀರು ಬತ್ತಿ ನೀರಿಗೆ ತೀವ್ರ ತೊಂದರೆ ಎದುರಿಸಬೇಕಾಯಿತು. ಹೀಗಾಗಿ ಮಳೆಕೊಯ್ಲು ಮೂಲಕ ನೀರು ಪಡೆಯಲು ಮುಂದಾದರು. ಛಾವಣಿ ನೀರನ್ನು ಟ್ಯಾಂಕ್‌ಗೆ ಬಿಟ್ಟು ಶುದ್ಧೀಕರಣ ಮಾಡಿ, ಶುದ್ಧೀಕೃತ ನೀರನ್ನು ಬಾವಿಗೆ ಬಿಡುತ್ತಿದ್ದಾರೆ.

‘ಉದಯವಾಣಿ’ ಪತ್ರಿಕೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಬಗ್ಗೆ ಬರುವ ಮಾಹಿತಿಗಳನ್ನು ತಪ್ಪದೇ ಓದುತ್ತಿದ್ದೆ. ಆ ಮಾಹಿತಿಯನುಸಾರ ನಾಲ್ಕು ದಿನಗಳ ಹಿಂದೆ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡಿದ್ದೇನೆ ಎನ್ನುತ್ತಾರೆ ಅವರು.

ಉದಯವಾಣಿಯಿಂದ ಪ್ರೇರಣೆ
ಅತ್ತಾವರ ಮೇಲಿನಮೊಗರು ಸುಧಾಕರ ಕೊಟ್ಟಾರಿ ಅವರು ‘ಉದಯವಾಣಿ’ಯಲ್ಲಿ ಪ್ರಕಟವಾದ ಮಳೆಕೊಯ್ಲು ಅಳವಡಿಕೆ ಮಾಹಿತಿಯನ್ನು ಪಡೆದುಕೊಂಡು ಎರಡು ವಾರಗಳ ಹಿಂದೆ ತಮ್ಮ ಮನೆಯಲ್ಲಿಯೂ ಅಳವಡಿಸಿಕೊಂಡಿದ್ದಾರೆ. ಮನೆಯ ಛಾವಣಿ ನೀರನ್ನು ಪೈಪ್‌ ಮುಖಾಂತರ ಬಾವಿಗೆ ಬೀಳುವಂತೆ ನೋಡಿಕೊಂಡಿದ್ದಾರೆ. ನೀರು ಬಾವಿಗೆ ಬೀಳುವ ಮುನ್ನ ಕಸಕಡ್ಡಿ ಬೇರ್ಪಡಿಸಲು ಪೈಪ್‌ನ ಕೆಳಭಾಗದಲ್ಲಿ ನೆಟ್ ಹಾಕಿದ್ದಾರೆ. ಈ ಬೇಸಗೆಯಲ್ಲಿ ಮೇ ತಿಂಗಳಲ್ಲಿ ನೀರಿನ ಅಭಾವ ಬಂದಿತ್ತು. ಹೀಗಾಗಿ ಮಳೆಕೊಯ್ಲು ಅಳವಡಿಸಿಕೊಂಡಿದ್ದೇನೆ ಎನ್ನುತ್ತಾರೆ ಅವರು.ಜಲ ಸಾಕ್ಷರತೆ ಬಗ್ಗೆ ನಗರ ಪಾಲಿಕೆಯೊಂದಿಗೆ ದೊಡ್ಡ ಮಟ್ಟದಲ್ಲಿ ಕೈ ಜೋಡಿಸಬೇಕಾಗಿದೆ. ಪ್ರತಿ ಗ್ರಾಮದಲ್ಲಿ ಹರಿಯುವ ಎರಡು- ಮೂರು ಕಿ.ಮೀ. ಉದ್ದದ ಚರಂಡಿಯ ತಳಭಾಗಕ್ಕೆ ಕಾಂಕ್ರೀಟ್ ಹಾಕದೆ ಬಾವಿಗಳಿಗೆ, ಗಿಡ ಮರಗಳಿಗೆ ನೀರು ಇಂಗುವಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next