Advertisement

ಮನೆಗೆ ತೆರಳಿ ಮಳೆಕೊಯ್ಲು ಪಾಠ ಹೇಳುತ್ತಿರುವ ಆ್ಯಗ್ನೆಸ್‌ ವಿದ್ಯಾರ್ಥಿನಿಯರು

08:35 PM Aug 12, 2019 | Team Udayavani |

ಮಹಾನಗರ: ಬೆಂದೂರ್‌ವೆಲ್‌ನ ಸಂತ ಆ್ಯಗ್ನೆಸ್‌ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸಹ ಪಠ್ಯಚಟುವಟಿಕೆಯ ಭಾಗವಾಗಿ ಪ್ರತೀ ಶನಿವಾರ ಚಟುವಟಿಕೆ ನೀಡಲಾಗುತ್ತದೆ. ಅದರಂತೆ, ವಿದ್ಯಾರ್ಥಿಗಳು ಸಾಮಾನ್ಯವಾಗಿ ಆರೋಗ್ಯ ಜಾಗೃತಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಕಳೆದ ಬೇಸಗೆಯಲ್ಲಿ ನೀರಿನ ಅಭಾವ ಸೃಷ್ಟಿಯಾದ ಹಿನ್ನೆಲೆಯಲ್ಲಿ ಅಧ್ಯಾಪಕರ ಸಲಹೆಯೊಂದಿಗೆ ಮನೆ-ಮನೆಗಳಲ್ಲಿ ಮಳೆಕೊಯ್ಲು ಅಳವಡಿಸುವಂತೆ ಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ. “ಉದಯವಾಣಿ’ಯಲ್ಲಿ ಪ್ರಕಟವಾಗುತ್ತಿರುವ ಮನೆ-ಮನೆಗೆ ಮಳೆಕೊಯ್ಲು ಅಭಿಯಾನದಿಂದ ಈ ಜಾಗೃತಿ ಕಾರ್ಯಕ್ಕೆ ಉತ್ತೇಜನ ಸಿಕ್ಕಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

Advertisement

ಕೋಟೆಕಾರಿಗೆ ಐವರ ತಂಡ
40 ಜನರ ತಂಡವು ವಿವಿಧೆಡೆ ಮಳೆಕೊಯ್ಲು ಮಾಹಿತಿ ಮತ್ತು ಜಾಗೃತಿ ನಡೆಸುತ್ತಿದ್ದಾರೆ. ಐವರು ವಿದ್ಯಾರ್ಥಿಗಳ ತಂಡ ಕೋಟೆಕಾರಿನ ಮನೆಗಳಿಗೆ ತೆರಳಿ ಮಾಹಿತಿ ಮತ್ತು ಜಾಗೃತಿ ನೀಡಿದ್ದರ ಬಗ್ಗೆ ತೃತೀಯ ಬಿಕಾಂ ವಿದ್ಯಾರ್ಥಿನಿ ಸಹನಾ ಎಚ್‌. ವೈ. ಆ ಖುಷಿಯನ್ನು ಪತ್ರಿಕೆಯೊಂದಿಗೂ ಹಂಚಿಕೊಂಡಿದ್ದಾರೆ. ಸಹನಾ ಮತ್ತು ಸ್ನೇಹಿತೆಯರು ಶನಿವಾರ ಕೋಟೆಕಾರ್‌ಗೆ ತೆರಳಿ ಮನೆಮನೆಗಳಲ್ಲಿ ಮಾಹಿತಿ ನೀಡಿದ್ದಾರೆ. ಅವರು ಹೋದ ಮೊದಲ ಮನೆಯಲ್ಲಿ ಮಳೆಕೊಯ್ಲು ಯೋಜನೆಯನ್ನು ಈಗಾಗಲೇ ಅಳವಡಿಸಿಕೊಂಡಿದ್ದರು. ಅಲ್ಲದೆ, ಆ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿದ ಅನಂತರ ನೀರಿನ ಲಭ್ಯತೆ ಹೆಚ್ಚಾಗಿರುವುದನ್ನು ಕಣ್ಣಾರೆ ನೋಡಿ ತುಂಬಾ ಖುಷಿ ಕೂಡ ಆಗಿದೆ ಎನ್ನುತ್ತಾರೆ ಸಹನಾ.

ಮೂರು ಮನೆಗಳ ಛಾವಣಿ ನೀರನ್ನು ಪೈಪ್‌ ಮೂಲಕ ಸಂಪ್‌ಗೆ ಬಿಡಲಾಗಿದೆ. ಸಂಪ್‌ 15-20 ಅಡಿ ಆಳ ಹೊಂದಿದ್ದು, 20 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಶುದ್ಧೀಕರಣಕ್ಕೆ ಗುಂಡಿಯ ಒಳಗೆ ಜಲ್ಲಿಕಲ್ಲು, ಇದ್ದಿಲು ಹಾಕ ಲಾ ಗಿದೆ. ಕುಡಿಯಲು, ದಿನದ ಆವ ಶ್ಯ ಕತೆಗೆ, ಕೃಷಿ ಸೇರಿದಂತೆ ಎಲ್ಲ ಆವಶ್ಯಕತೆಗಳಿಗೆ ಬೇಸಗೆಯಲ್ಲಿ ಇದೇ ನೀರು ಬಳಕೆಯಾಗುತ್ತದೆ ಎಂದು ಆ ಮನೆಯವರು ತಿಳಿಸಿ ದ್ದಾಗಿ ಸಹನಾ ಹೇಳುತ್ತಾರೆ.ಈ ಕಾಲೇಜು ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆಯ ಜತೆಗೆ ಈ ರೀತಿಯ ಜಲ ಸಾಕ್ಷರತೆ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿ ಸುತ್ತಿರುವುದು ನಿಜಕ್ಕೂ ಇತರೆ ಕಾಲೇಜುಗಳಿಗೂ ಮಾದರಿ-ಸ್ಫೂರ್ತಿ ನೀಡುವ ಕಾರ್ಯ ಚಟುವಟಿಕೆ. ಉದಯವಾಣಿ ಸಹಯೋಗದಲ್ಲಿ ಇತ್ತೀಚೆಗೆ ಆ್ಯಗ್ನೆಸ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮಳೆಕೊಯ್ಲು ಕುರಿತು ಮಾಹಿತಿ ಕಾರ್ಯಾಗಾರವನ್ನೂ ಏರ್ಪಡಿಸಲಾಗಿತ್ತು.

ಉರ್ವ: ರಾಜೇಶ್‌ ಮನೆಯಲ್ಲಿ ಮಳೆಕೊಯ್ಲು
ಉರ್ವ ಮಾರಿಗುಡಿ ಸಮೀಪದಲ್ಲಿರುವ ರಾಜೇಶ್‌ ಕೋಟ್ಯಾನ್‌ ಅವರ ಮನೆಯಲ್ಲಿ ಒಂದು ವಾರದ ಹಿಂದೆ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಪಕ್ಕದ ಮನೆಗಳಲ್ಲಿಯೂ ಮಳೆಕೊಯ್ಲು ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡಲು ಅವರು ಮುಂದಾಗಿದ್ದಾರೆ.

ರಾಜೇಶ್‌ ಕೋಟ್ಯಾನ್‌ ಅವರು ಉದ್ಯೋಗ ನಿರ್ವಹಿಸುತ್ತಿರುವ ಕಚೇರಿಯಲ್ಲಿಯೂ ಮಳೆಕೊಯ್ಲು ಅಳವಡಿಸಲು ಯೋಜಿಸಿರುವುದು ಶ್ಲಾಘನೀಯ ಬೆಳವಣಿಗೆ. ಮನೆಯ ಟೆರೇಸ್‌ ನೀರನ್ನು ಪೈಪ್‌ ಮುಖಾಂತರ ತಂದು ಬಾವಿಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ನಡುವೆ ನೀರು ಶುದ್ಧೀಕರಣಕ್ಕೆ ಫಿಲ್ಟರಿಂಗ್‌ ವ್ಯವಸ್ಥೆ ಮಾಡಲಾಗಿದೆ. “ಮನೆಯಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳಲು ನನಗೆ ಶೇ. 100ರಷ್ಟು ಉದಯವಾಣಿಯೇ ಪ್ರೇರಣೆ. ಸುತ್ತಮುತ್ತಲಿನ ಮನೆಮಂದಿಗೂ ಅಳವಡಿಸಿಕೊಳ್ಳುವಂತೆ ಸಲಹೆ ನೀಡುತ್ತೇನೆ. ನಮ್ಮ ಕಚೇರಿಯಲ್ಲಿಯೂ ಅಳವಡಿಸಿಕೊಳ್ಳುವ ಯೋಜನೆ ಇದೆ’ ಎನ್ನುತ್ತಾರೆ ರಾಜೇಶ್‌.

Advertisement

 ಜಲಕ್ರಾಂತಿಗೆ ಪ್ರೇರಣೆ
ಉದಯವಾಣಿ ಸುದಿನವು ಮನೆ ಮನೆಗೆ ಮಳೆಕೊಯ್ಲು ಅಭಿಯಾನದ ಮುಖೇನ ನೀರಿನ ಉಳಿತಾಯ, ನೀರಿನ ಇಂಗುವಿಕೆಯ ಬಗ್ಗೆ ಸಂದೇಶ ಸಾರುತ್ತಿದೆ. ಇದು ಜಲಕ್ರಾಂತಿಗೆ ಪ್ರೇರಣೆ.
– ಸುದರ್ಶನ, ಸುಳ್ಯ

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳ ಲ್ಲಿ ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

Advertisement

Udayavani is now on Telegram. Click here to join our channel and stay updated with the latest news.

Next