Advertisement

ಮಳೆಕೊಯ್ಲು ಅಳವಡಿಕೆ: ಸುತ್ತಲಿನ 100 ಮನೆಗಳಿಗೆ ನೀರಿನ ಪ್ರಯೋಜನ

09:12 PM Aug 13, 2019 | Team Udayavani |

ಕುಲಶೇಖರ ಕೊರ್ಡೆಲ್‌ ಹಾಲ್‌ನಲ್ಲಿ ವಿಭಿನ್ನ ರೀತಿಯಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿ ಚರ್ಚ್‌ ಸಮಿತಿ ಮಾದರಿಯಾಗಿದೆ. ಹಾಲ್‌ನಲ್ಲಿ ಸಮಾರಂಭಗಳು ನಡೆದಾಗ ಅವರಿಗೆ ಉತ್ತಮ ನೀರು ಕಲ್ಪಿಸುವ ಆಶಯದೊಂದಿಗೆ ಎರಡು ಬಾವಿ ಹಾಗೂ ಎರಡು ಬೋರ್‌ವೆಲ್‌ಗೆ ಮಳೆಕೊಯ್ಲು ಅಳವಡಿಸಲಾಗಿದೆ.

Advertisement

ಹಾಲ್‌ ಆವರಣದಲ್ಲಿ ಕಳೆದೊಂದು ತಿಂಗಳಲ್ಲಿ ಸುಮಾರು ಏಳೆಂಟು ಲಕ್ಷ ರೂ. ಖರ್ಚು ಮಾಡಿ ಎರಡು ಬಾವಿ ಕೊರೆಯಲಾಗಿದೆ. “ಉದಯವಾಣಿ’ ಮಳೆಕೊಯ್ಲು ಅಭಿಯಾನ ನೋಡಿದ ಬಳಿಕ, ಹೊಸದಾಗಿ ಕೊರೆದ ಬಾವಿಗಳಲ್ಲಿ ಮುಂದೆ ನೀರಿನ ಸಮಸ್ಯೆ ಆಗದೇ ಇರಲೆಂದು ಮಳೆಕೊಯ್ಲು ಅಳವಡಿಸುವ ಚಿಂತನೆಯೊಂದಿಗೆ ಚರ್ಚ್‌ ಸಂಬಂಧಪಟ್ಟವರು ಕಾರ್ಯೋನ್ಮುಖರಾದರು. ಅಂತೆಯೇ ಎರಡು ಬಾವಿ, ಸನಿಹದಲ್ಲೇ ಇರುವ ಇನ್ನೊಂದು ಬೋರ್‌ವೆಲ್‌ಗೆ ಮಳೆಕೊಯ್ಲು ಅಳವಡಿಸಲಾಗಿದೆ. ಇಡೀ ಹಾಲ್‌ನ ಛಾವಣಿ ನೀರನ್ನು ಹಿಡಿದಿಟ್ಟು ಶುದ್ಧಗೊಳಿಸಿ ಬಾವಿ, ಬೋರ್‌ವೆಲ್‌ಗೆ ಬಿಡಲಾಗುತ್ತಿದೆ.

ವಿಶೇಷವೆಂದರೆ, ಹಾಲ್‌ನ ಪ್ರವೇಶದ್ವಾರದ ಬಳಿ ಇರುವ ಇನ್ನೊಂದು ಬೋರ್‌ವೆಲ್‌ಗ‌ೂ ಮಳೆಕೊಯ್ಲು ಮಾದರಿಯಲ್ಲಿ ನೀರು ಇಂಗುವಂತೆ ವ್ಯವಸ್ಥೆ ಮಾಡಲಾಗಿದೆ. ವ್ಯರ್ಥವಾಗಿ ಹೊರಗೆ ಹರಿದು ಹೋಗುವ ನೀರನ್ನು ವೃತ್ತಾಕಾರದ ಜಾಗದಲ್ಲಿ ಬೀಳುವಂತೆ ಮಾಡಿ ಅದನ್ನು ಬೋರ್‌ವೆಲ್‌ಗೆ ಇಂಗಿಸುವ ಕೆಲಸವಾಗಿದೆ. “ಚರ್ಚ್‌ ಧರ್ಮಗುರು ವಂ| ವಿಕ್ಟರ್‌ ಮಚಾದೋ ಅವರ ಮನೆಯ ಬಾವಿಗೂ ಮಳೆಕೊಯ್ಲು ಅಳವಡಿಸಲಾಗಿದೆ. ಈ ಎಲ್ಲ ಮಳೆ ನೀರಿಂಗಿಸುವ ವ್ಯವಸ್ಥೆಯಿಂದಾಗಿ ಸನಿಹದಲ್ಲಿರುವ ಸೈಂಟ್‌ ಜೋಸೆಫ್‌ ಶಾಲೆ ಸಹಿತ ಸನಿಹದ ಸುಮಾರು 100 ಮನೆಗಳಿಗೆ ನೀರಿನ ಪ್ರಯೋಜನ ಮಳೆಗಾಲದಲ್ಲಿ ಸಿಗಬಹುದು’ ಎನ್ನುತ್ತಾರೆ ಚರ್ಚ್‌ ಹಣಕಾಸು ಸಮಿತಿಯ ಸದಸ್ಯ ಬೆನೆಟ್‌ ಡಿ’ಸಿಲ್ವ.

ವಂ| ವಿಕ್ಟರ್‌ ಮಚಾದೋ ಅವರ ಮುಂದಾಳತ್ವದಲ್ಲಿ ಮಳೆಕೊಯ್ಲು ಅಳವಡಿಕೆ ಕಾರ್ಯ ನಡೆದಿದೆ. ಚರ್ಚ್‌ ವ್ಯಾಪ್ತಿಯ ಜನರು ಚರ್ಚ್‌ಗೆ ಆಗಮಿಸುವ ವೇಳೆ ಮಳೆಕೊಯ್ಲು ವ್ಯವಸ್ಥೆಯನ್ನು ನೋಡಿ, ತಮ್ಮ ಮನೆಗಳಲ್ಲೂ ಅಳವಡಿಸಲು ಪ್ರೇರಣೆ ಪಡೆಯುತ್ತಾರೆ. ಆಸಕ್ತರಿಗೆ ಮಾಹಿತಿ ನೀಡುವ ಕೆಲಸವನ್ನೂ ಮಾಡಲಿದ್ದೇವೆ ಎನ್ನುತ್ತಾರೆ ಅವರು.

ಮಾಹಿತಿ ಪಡೆದು ಮಳೆಕೊಯ್ಲು ಅಳವಡಿಕೆ
ಮೂಡುಬಿದಿರೆ ಆಲಂಗಾರು ನಿವಾಸಿ ಗಿಲ್ಬರ್ಟ್‌ ಮಿರಾಂದ ಅವರು ವಾರದ ಹಿಂದಷ್ಟೇ ತಮ್ಮ ಮನೆಯ ಬೋರ್‌ವೆಲ್‌ಗೆ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ. ಮನೆಯ ಛಾವಣಿ ನೀರನ್ನು ಪೈಪ್‌ ಮುಖಾಂತರ ತಂದು ಬೋರ್‌ವೆಲ್‌ಗೆ ಬೀಳುವಂತೆ ನೋಡಿಕೊಂಡಿದ್ದಾರೆ. ನೆಟ್‌ ಅಳವಡಿಸಿರುವುದರಿಂದ ಶುದ್ಧ ನೀರು ಬೋರ್‌ವೆಲ್‌ಗೆ ಬೀಳುತ್ತದೆ. “ಮಳೆಕೊಯ್ಲು ಅಳವಡಿಸುವ ಬಗ್ಗೆ ಮಾಹಿತಿ ಕೊರತೆ ಇತ್ತು. ಬಳಿಕ “ಉದಯವಾಣಿ’ ಅಭಿಯಾನದಲ್ಲಿ ಮಳೆಕೊಯ್ಲು ಮಾಹಿತಿ ಓದಿದ ಬಳಿಕ ಅದನ್ನು ಅಳವಡಿಸುವ ಕ್ರಮ ತಿಳಿದುಕೊಂಡು ಅಳವಡಿಸಿದ್ದೇನೆ’ ಎನ್ನುತ್ತಾರೆ ಗಿಲ್ಬರ್ಟ್‌.

Advertisement

 ಪ್ರಯೋಜನ ಪಡೆಯಬೇಕು
ಇಂದಿನ ಡಿಜಿಟಲ್‌, ವಾಟ್ಸಪ್‌ ಯುಗದಲ್ಲಿ ಉದಯವಾಣಿ ಸುದಿನವು ಮನೆ ಮನೆಗೆ ಮಳೆಕೊಯ್ಲು ಅಭಿಯಾನದ ಮುಖೇನ ನೀರಿನ ಉಳಿ ತಾಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು.
 - ಸೂರಜ್‌ ಸಾಲ್ಯಾನ್‌, ಕಾವೂರು

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳ ಲ್ಲಿ ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

Advertisement

Udayavani is now on Telegram. Click here to join our channel and stay updated with the latest news.

Next