Advertisement

Rain: ಸುಳ್ಯ, ಪುತ್ತೂರಿನಲ್ಲಿ ಉತ್ತಮ ಮಳೆ; ಇತರೆಡೆ ತುಸು ಕಡಿಮೆ

12:43 AM Aug 03, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ- ಪುತ್ತೂರು ತಾಲೂಕಿನಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದ್ದು, ಉಳಿದಂತೆ ಇತರೆಡೆಗಳಲ್ಲಿ ಮಳೆಯ ತುಸು ಪ್ರಮಾಣ ಕಡಿಮೆಯಾಗಿದೆ. ಸುಳ್ಯ ಪುತ್ತೂರಿನಲ್ಲಿ ಮುಂಜಾನೆಯಿಂದಲೇ ನಿರಂತರ ಮಳೆ ಸುರಿದಿದೆ ಹಲವೆಡೆ ಭೂ ಕುಸಿತಗಳು ಸಂಭವಿಸಿವೆ.

Advertisement

ಮಂಗಳೂರಿನಲ್ಲಿ ಕಡಿಮೆ
ಮಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಬೆಳಗ್ಗೆ ಧಾರಾಕಾರ ಮಳೆಯಾಗಿದ್ದು, ಹೊತ್ತೇ ರುತ್ತಿದ್ದಂತೆ ಮಳೆ ತೀವ್ರತೆ ಕಡಿಮೆ ಯಾಗಿತ್ತು. ಮಳೆಯಬ್ಬರಕ್ಕೆ ಉಕ್ಕೇರಿದ್ದ ಘಲ್ಗುಣಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ನೆರೆ ಬಾಧಿತ ಪ್ರದೇಶದಲ್ಲಿಯೂ ನೀರು ಇಳಿದಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಕಣ್ಣೂರಿನ ಬಡಿಲದಲ್ಲಿ ಮಮ್ತಾಜ್‌ ಅವರ ಮನೆ ಸಂಪೂರ್ಣ ಕುಸಿದಿದೆ.

ಆರೆಂಜ್‌ ಅಲರ್ಟ್‌
ಕರಾವಳಿಗೆ ಶನಿವಾರ ಮತ್ತು ರವಿವಾರ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಮಳೆ ವಾತಾವರಣ ಯಥಾಸ್ಥಿತಿ ಇರುವ ಸಾಧ್ಯತೆ ಇದೆ. ಸದ್ಯದ ಪ್ರಕಾರ ಸೋಮವಾರದಿಂದ ಎಲ್ಲೋ ಅಲರ್ಟ್‌ ಇದೆ. ದ.ಕ. ಮತ್ತು ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

118.9 ಮಿ.ಮೀ. ಮಳೆ
ಶುಕ್ರವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ದ.ಕ ಜಿಲ್ಲೆಯಲ್ಲಿ ಸರಾಸರಿ 118.9 ಮಿ.ಮೀ. ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 89.3 ಮಿ.ಮೀ., ಬಂಟ್ವಾಳ 125 ಮಿ.ಮೀ., ಮಂಗಳೂರು 97.6., ಪುತ್ತೂರು 146.6, ಸುಳ್ಯ 138.4, ಮೂಡುಬಿದಿರೆ 124.6, ಕಡಬ 144.4, ಮೂಲ್ಕಿ 94.5 ಹಾಗೂ ಉಳ್ಳಾಲದಲ್ಲಿ 123.7 ಮಿ.ಮೀ. ಮಳೆಯಾಗಿದೆ.

ಮಳೆ ಹಾನಿ
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 2 ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಒಟ್ಟು ಕೂಳೂರು ಮತ್ತು ಸುಬ್ರಹ್ಮಣ್ಯದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಹಲವು ಮಂದಿಗೆ ಆಶ್ರಯ ನೀಡಲಾಗಿದೆ. 96 ವಿದ್ಯುತ್‌ ಕಂಬಗಳು, 4.80 ಕಿ.ಮೀ.ನಷ್ಟು ವಿದ್ಯುತ್‌ ತಂತಿಗೆ ಹಾನಿಯಾಗಿದೆ. 6 ಕಿ.ಮೀ.ನಷ್ಟು ಮುಖ್ಯ ಜಿಲ್ಲಾ ರಸ್ತೆ, 6.97 ಕಿ.ಮೀ. ನಷ್ಟು ರಾಜ್ಯ ಹೆದ್ದಾರಿಗೆ ಹಾನಿಯಾಗಿದೆ. ಪಂಚಾಯತ್‌ರಾಜ್‌ ವಿಭಾಗಕ್ಕೆ ಸಂಬಂಧಿಸಿ 11 ಮೋರಿಗಳು, 43 ಕಿ.ಮೀ. ರಸ್ತೆಗಳು ಹಾನಿಗೀಡಾಗಿವೆ ಎಂದು ಜಿಲ್ಲಾಡಳಿತದ ವರದಿ ತಿಳಿಸಿದೆ.

Advertisement

ಶಿರ್ತಾಡಿಯಲ್ಲಿ ಮನೆಗೆ ಹಾನಿ
ಮೂಡುಬಿದಿರೆ: ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುರುವಾರ ರಾತ್ರಿ 2 ಗಂಟೆ ಸುಮಾರಿಗೆ ಶಿರ್ತಾಡಿ ಗ್ರಾಮದ ದಡ್ಡಲ್‌ಪಲ್ಕೆ ವಿಕ್ರಮ್‌ ಆಚಾರ್ಯ ಅವರ ಮನೆಯ ಹಿಂಭಾಗ, ದೇವರ ಕೋಣೆ ಕುಸಿದು ಬಿದ್ದು ಅಪಾರ ನಷ್ಟವುಂಟಾಗಿದೆ. ವಿಕ್ರಮ ಆಚಾರ್ಯ, ತಾಯಿ, ಪತ್ನಿ ಮತ್ತು ಮಕ್ಕಳೊಂದಿಗೆ ಮಲಗಿದ್ದಾಗ ಈ ಘಟನೆ ನಡೆದಿದ್ದು ಮನೆಯೊಳಗಿದ್ದವರಿಗೆ ಯಾವುದೇ ಅಪಾಯವಾಗಿಲ್ಲ.

ಕೂಳೂರು ಸೇತುವೆ ದಾಟಲು ಅರ್ಧ ತಾಸು!
ಪಣಂಬೂರು: ರಸ್ತೆ ಹೊಂಡ ಕಾರಣದಿಂದ ಕೂಳೂರು ಸೇತುವೆ ಭಾಗದಲ್ಲಿ ವಾಹನಗಳು ತೀವ್ರ ಪರದಾಡುವಂತಾಗಿದ್ದು, ಶುಕ್ರವಾರ ಭಾರೀ ಉದ್ದದ ವಾಹನಗಳ ಸಾಲು ಕಂಡು ಬಂದಿದೆ. ಶುಕ್ರವಾರ ಒಂದು ಕಿ.ಮೀ. ವಾಹನ ಸಾಲು ಕಂಡು ಬಂದ ಹಿನ್ನೆಲೆಯಲ್ಲಿ ಎರಡೂ ಸೇತುವೆಯಲ್ಲಿ ಮಂಗಳೂರು ಕಡೆ ಸಾಗಲು ಸಂಚಾರ ಪೊಲೀಸರು ಅವಕಾಶ ನೀಡಿದರು. ಈ ಭಾಗದಲ್ಲಿ ರಸ್ತೆ ತೀರಾ ಹದಗೆಟ್ಟಿದ್ದು, ವಾಹನಗಳು ತೆವಳಿಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ಆದಷ್ಟು ಬೇಗ ಇಲ್ಲಿನ ರಸ್ತೆಯನ್ನು ಸುಸ್ಥಿತಿಗೆ ತರಬೇಕು ಎಂದು ವಾಹನ ಸವಾರರು ಆಗ್ರಹಿಸುತ್ತಿದ್ದಾರೆ.

ಉಡುಪಿಯಲ್ಲಿ ಉತ್ತಮ ಮಳೆ
ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಉತ್ತಮ ಮಳೆ ಸುರಿದಿದೆ. ಕಾರ್ಕಳದಲ್ಲಿ 99.6, ಕುಂದಾಪುರ 120.3, ಉಡುಪಿ 117.1, ಬೈಂದೂರು 127.2, ಬ್ರಹ್ಮಾವರ 117.5, ಕಾಪು 115.9, ಹೆಬ್ರಿ 118.3 ಮಿ.ಮೀ.ಮಳೆಯಾಗಿದೆ. ಬೆಳಗ್ಗಿನಿಂದಲೇ ಉತ್ತಮವಾಗಿ ಮಳೆ ಸುರಿಯುತ್ತಿತ್ತು. ಮಧ್ಯಾಹ್ನದ ಬಳಿಕ ಮಳೆ ಬಿಡುವು ನೀಡಿತಾದರೂ ಸಂಜೆಯ ವೇಳೆಗೆ ಮತ್ತೆ ಮಳೆ ಸುರಿಯಿತು.

Advertisement

Udayavani is now on Telegram. Click here to join our channel and stay updated with the latest news.

Next