ಕಲಬುರಗಿ: ಜಿಲ್ಲೆಯಲ್ಲಿ ಬುಧವಾರದಿಂದ ಮಳೆ ಪ್ರಮಾಣ ತಗ್ಗಿದ್ದು, ಎಲ್ಲೆಡೆ ಪರಿಹಾರ ಕಾರ್ಯ ಆರಂಭವಾಗಿದೆ. ಮಂಗಳವಾರ ರಾತ್ರಿ ಸುರಿದ ಭೀಕರ ಮಳೆಗೆ ಸಿಲುಕಿದ್ದ ಜನರನ್ನು ಎನ್ ಡಿಆರ್ ಎಫ್, ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಬುಧವಾರ ರಾತ್ರಿಯವರೆಗೆ ರಕ್ಷಿಸುವ ಕಾರ್ಯ ಮಾಡಿದರು. ಇತ್ತ, ಗುರುವಾರ ಬೆಳಿಗ್ಗೆಯಿಂದ ಸ್ವಚ್ಚತಾ ಸಿಬ್ಬಂದಿ ರಸ್ತೆಗಳಿಗೆ ಹರಿದು ಬಂದ ಕಸ ಮತ್ತು ಮುಳ್ಳುಕಂಟಿಗಳ ತೆರವು ಕಾರ್ಯದಲ್ಲಿ ತೊಡಗಿದ್ದಾರೆ.
ಮಳೆಯ ಪ್ರವಾಹದಿಂದ ಮಳೆಗಳಿಗೆ ನೀರು ನುಗ್ಗಿ ಅತಂತ್ರರಾಗಿದ್ದ ಒಟ್ಟು ಇಲ್ಲಿಯವರೆಗೆ 77 ಜನರನ್ನು ರಕ್ಷಣಾ ತಂಡಗಳು ರಕ್ಷಿಸಿವೆ. ಚಿತ್ತಾಪೂರ ತಾಲೂಕಿನ ಮಾಲಗತ್ತಿಯಲ್ಲಿ ಮೂವರು, ಶಹಾಬಾದ ಪಟ್ಟಣದ ಜೆ.ಪಿ.ಕಾಲೋನಿ ಪ್ರದೇಶದ ಐವರು ಮತ್ತು ಹಳೆ ಶಹಾಬಾದ ಪ್ರದೇಶದ ಆರು ಜನರು ಹಾಗೂ ತಾಲೂಕಿನ ಭಂಕೂರ ಗ್ರಾಮದಲ್ಲಿ ಓರ್ವರನ್ನು ರಕ್ಷಿಸಲಾಗಿದೆ.
ಸೇಡಂ ತಾಲೂಕಿನಲ್ಲಿ ಸಟಪನಹಳ್ಳಿ ಗ್ರಾಮದಲ್ಲಿ ಇಬ್ಭರು ಮತ್ತು ಮಳಖೇಡ್ ಗ್ರಾಮದಲ್ಲಿ 26 ಜನರು ಹಾಗೂ ಚಿಂಚೋಳಿ ತಾಲೂಕಿನ ಗಾರಂಪಳ್ಳಿಯಲ್ಲಿ 13, ಚಿಂಚೋಳಿ ಪಟ್ಟಣದಲ್ಲಿ ನಾಲ್ವರು ಐನೊಳ್ಳಿಯಲ್ಲಿ ಮೂವರು ಮತ್ತು ಜಟ್ಟೂರು ಗ್ರಾಮದಲ್ಲಿ 14 ಜನರನ್ನು ರಕ್ಷಿಸಲಾಗಿದೆ.
ಬುಧವಾರ ರಾತ್ರಿ 8 ಗಂಟೆ ವರೆಗಿನ ಅಂದಾಜಿನ ಪ್ರಕಾರ ಜಿಲ್ಲೆಯ 4,819 ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಬಟ್ಟೆ-ಪಾತ್ರೆಗಳು ಹಾನಿಗೊಳಗಾಗಿವೆ. 1,058 ಮನೆಗಳಿಗೂ ಭೀಕರ ಮಳೆ ಹಾನಿ ಮಾಡಿದೆ. ಇದಲ್ಲದೇ 518 ಜಾನುವಾರಗಳ ಜೀವ ಹಾನಿ ಬಗ್ಗೆಯೂ ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸಿದೆ.
ಇದನ್ನೂ ಓದಿ:ಕಲಬುರಯಲ್ಲಿ ವ್ಯಾಪಕ ಮಳೆ: ಜಲಾಶಯಗಳಿಂದ ನೀರು ಬಿಡುಗಡೆ! ಜನರು ಎಚ್ಚರಿಕೆಯಿಂದಿರಲು ಸೂಚನೆ
48 ಕಾಳಜಿ ಕೇಂದ್ರ ಆರಂಭ: ಮಳೆ ಸಂತ್ರಸ್ತರಿಗಾಗಿ ಜಿಲ್ಲಾಡಳಿತ ಕಾಳಜಿ ಕೇಂದ್ರಗಳನ್ನು ಆರಂಭಿಸಿದೆ. ಕಲಬುರಗಿ, ಕಮಲಾಪೂರ ಹಾಗೂ ಅಫಜಲಪುರ ತಾಲೂಕಿನಲ್ಲಿ ತಲಾ ಮೂರು, ಆಳಂದ ತಾಲೂಕಿನಲ್ಲಿ ನಾಲ್ಕು, ಜೇವರ್ಗಿ ತಾಲೂಕಿನಲ್ಲಿ ಒಂದು, ಚಿತ್ತಾಪುರ ಮತ್ತು ಸೇಡಂ ತಾಲೂಕಿನಲ್ಲಿ ತಲಾ ಐದು, ಶಹಾಬಾದ ತಾಲೂಕಿನಲ್ಲಿ ನಾಲ್ಕು, ಕಾಳಗಿ ತಾಲೂಕಿನಲ್ಲಿ ಎಂಟು ಹಾಗೂ ಚಿಂಚೋಳಿ ತಾಲೂಕಿನಲ್ಲಿ 12 ಸೇರಿದಂತೆ ಒಟ್ಟಾರೆ 48 ಕಾಳಜಿ ಕೇಂದ್ರ ತೆರೆದು 7,603 ಜನರಿಗೆ ಆಶ್ರಯ ನೀಡಲಾಗಿದೆ.
ಈಗ ಮಹಾ ನೀರಿನ ಭೀತಿ: ಈಗಾಗಲೇ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಜನರ ತತ್ತರಿಸಿ ಹೋಗಿದ್ದಾರೆ. ಇದರ ಬೆನ್ನಲ್ಲೇ ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಭೀಮಾ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಮಹಾ ನೀರಿನ ಭೀತಿ ಎದುರಾಗಿದೆ.
ಭೀಮಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 1,08,000 ಕ್ಯೂಸೆಕ್ ಮತ್ತು ವೀರ್ ಜಲಾಶಯದಿಂದ 15,000 ಕ್ಯೂಸೆಕ್ ಸೇರಿದಂತೆ 1,23,000 ಕ್ಯೂಸೆಕ್ ನೀರು ಭೀಮಾ ನದಿಗೆ ಬುಧವಾರ ಸಾಯಂಕಾಲ ಹರಿಬಿಡಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಲಬುರಗಿ ವೃತ್ತದ ಅಧೀಕ್ಷಕ ಅಭಿಯಂತ ಜಗನ್ನಾಥ ಹಲಿಂಗೆ ತಿಳಿಸಿದ್ದಾರೆ.
ಈ ನೀರು ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜಿಗೆ ಬರಲಿದೆ. ಭೀಮಾ ಜಲಾನಯನ ಪ್ರದೇಶದಲ್ಕಿ ಹೀಗೆ ಮಳೆ ಮುಂದುವರೆದಿದ್ದಲ್ಲಿ ಮುಂದಿನ 48 ಗಂಟೆಯಲ್ಲಿ ಸುಮಾರು 2.5 ಲಕ್ಷ ಕ್ಯೂಸೆಕ್ ನೀರು ಸೊನ್ನ ಬ್ಯಾರೇಜ್ ಗೆ ಬರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.