ಕಾರಟಗಿ: ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತದ ವಕ್ರದೃಷ್ಟಿ ಭತ್ತದ ಬೆಳೆಯ ಮೇಲೆ ಬಿದ್ದಿದೆ. ಹಲವು ದಿನಗಳಿಂದ ಮೋಡ ಕವಿದ ವಾತಾವರಣ, ನಂತರ ಕೆಲ ದಿನಗಳಿಂದ ಜಿಟಿಜಿಟಿ ಮಳೆ ಹೊಡೆತಕ್ಕೆ ತಾಲೂಕು ವ್ಯಾಪ್ತಿಯ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಮಕಾಡೆ ಮಲಗಿದೆ.
ಕಟಾವು ಹಂತದಲ್ಲಿದ್ದ ಭತ್ತ ನೆಲಕ್ಕೆ ಬಿದ್ದಿರುವುದು ರೈತರನ್ನು ಆತಂಕಕೀಡು ಮಾಡಿದೆ. ಭತ್ತ ನಾಟಿ ಮಾಡಿದಾಗಿನಿಂದ ಬೆಳೆಯ ಕಟಾವಿನವರೆಗೂ ಒಂದೊಂದು ಹಂತದಲ್ಲಿ ಸುರಿದ ಮಳೆಗೆ ಭತ್ತ ಸಣ್ಣಪುಟ್ಟ ರೋಗಕ್ಕೆ ತುತ್ತಾಗಿದೆ. ಆದರೂ ಶಕ್ತಿ ಮೀರಿ ಬೆಳೆ ಉಳಿಸಿಕೊಂಡಿದ್ದ ರೈತನಿಗೆ ಈಗ ಏನು ಮಾಡಬೇಕೋ ಎನ್ನುವುದು ತೋಚುತ್ತಿಲ್ಲ. ಬೆಳೆ ನೆಲಕ್ಕೆ ಬಿದ್ದಿರುವಾಗ ಕಟಾವು ಯಂತ್ರದಿಂದ ಕೊಯ್ಲು ಮಾಡಿಸುವುದೇ ಸವಾಲಿನ ಕೆಲಸವಾಗಿದ್ದು, ನೆಲಕ್ಕೊರಗುವ ಮುಂಚೆಯೇ ತಾಸಿಗೆ 2500 ರೂ. ಕೊಟ್ಟರು ಬಾರದಿದ್ದ ಕಟಾವು ಯಂತ್ರಗಳು ಈಗ ನಿಗ ದಿ ಪಡಿಸಿದ ಬೆಲೆಗಿಂತ ಹೆಚ್ಚು ಬೆಲೆ ಕೇಳುತ್ತಿದ್ದಾರೆ.
ನೆಲಕ್ಕೆ ಬಿದ್ದ ಭತ್ತ ಕಟಾವು ಮಾಡಲು ಎಕರೆಗೆ 2 ಗಂಟೆ ಹಿಡಿಯುತ್ತೇ ದುಬಾರಿ ಬೆಲೆ ತೆರುವುದು ಮಾತ್ರ ತಪ್ಪಿದ್ದಲ್ಲ ಎನ್ನುತ್ತಾರೆ ರೈತರು. ಹವಾಮಾನ ವೈಪರೀತ್ಯದ ಪರಿಣಾಮ ಒಂದೆಡೆ ಮೋಡ ಕವಿದ ವಾತಾವರಣ ಇನ್ನೊಂದೆಡೆ ಜಿಟಿಜಿಟಿ ಮಳೆ. ಭತ್ತ ಕಟಾವು ಸಮಯದಲ್ಲಿ ಮಾರುಕಟ್ಟೆಯಲ್ಲಿ ಹೀಗಾದರೆ ಭತ್ತಕ್ಕೆ ಬೆಲೆ ಸಿಗುವುದಿಲ್ಲ. ಜಿಟಿಜಿಟಿ ಮಳೆ ಶುರುವಾದರೆ ಮಾರುಕಟ್ಟೆಗಳಲ್ಲಿ ಭತ್ತವನ್ನು ಕೇಳುವವರೇ ಇಲ್ಲದಂತಾಗುತ್ತದೆ. ಹವಾಮಾನ ವೈಪರೀತ್ಯ ಪರಿಣಾಮ ಭತ್ತ ಕಟಾವು ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ.
ಈ ಬಾರಿ ಭತ್ತ ಬೆಳೆ ಚೆನ್ನಾಗಿದೆ. ಇನ್ನು 10-15 ದಿನಗಳಲ್ಲಿ ಭತ್ತ ಕಟಾವು ಆರಂಭಿಸಬೇಕಿತ್ತು. ಆದರೆ ಮೋಡ ಕವಿದ ವಾತಾವರಣ, ಜಿಟಿಜಿಟಿ ಮಳೆಯಿಂದ ಬೆಳೆ ನೆಲಕ್ಕುರಿಳಿದೆ. ಕಳೆದ ವರ್ಷ ಬೆಳೆ ಹಾನಿ ಅನುಭವಿಸಿದ ರೈತರಿಗೆ ಇದುವರೆಗೂ ಸರಕಾರ ಪರಿಹಾರ ನೀಡಲು ಮುಂದಾಗಿಲ್ಲ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ನಾರಾಯಣ ಈಡಿಗೇರ ಆರೋಪಿಸಿದರು. ಕ್ರಿಮಿನಾಶಕ, ರಸಗೊಬ್ಬರ, ಬೀಜ ಇವೆಲ್ಲವುಗಳು ದುಬಾರಿ ಬೆಲೆಗೆ ಖರೀದಿಸಬೇಕು. ಪ್ರತಿ ಎಕರೆಗೆ 35ರಿಂದ 40 ಸಾವಿರ ವ್ಯಯಿಸಬೇಕು. ಭತ್ತ ಕೈ ಸೇರುವವರೆಗೂ ಆಗುವ ತಾಪತ್ರೇಯಗಳನ್ನು ಅನುಭವಿಸಿ ಕೊನೆಯಲ್ಲಿ ಭತ್ತ ಕಟಾವು ಹಂತಕ್ಕೆ ಬಂದಾಗ ವರುಣನ ಅವಕೃಪೆಗೆ ತುತ್ತಾಗಿ ರೈತರ ಬದುಕು ಹಾಳಾಗಿದೆ.
ಪ್ರತಿವರ್ಷ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಬಂದಿದ್ದೇವೆ. ಮಳೆ, ಮೋಡ ಕವಿದರೆ ಸಾಕು ಭತ್ತಕ್ಕೆ ಬೆಲೆಯೇ ಸಿಗುವುದಿಲ್ಲ. ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಸಂಬಂ ಧಿಸಿದ ಜನಪ್ರತಿನಿ ಧಿಗಳು, ಅಧಿಕಾರಿಗಳು ಕೂಡಲೇ ಕೈಗೊಳ್ಳಲಿ. ಸರ್ಕಾರ ಸಂಕಷ್ಟಕ್ಕೆ ತುತ್ತಾಗಿರುವ ರೈತರಿಗೆ ಬೆಳೆ ಪರಿಹಾರ ನೀಡುವುದರ ಮೂಲಕ ರೈತರ ಬೆನ್ನಿಗೆ ನಿಲ್ಲಬೇಕು ಎಂದು ರೈತರಾದ ಪರಶುರಾಮ ಉಪ್ಪಾರ, ಸಣ್ಣರಾಮಣ್ಣ ಹೇಳಿದರು.
-ದಿಗಂಬರ ಎನ್. ಕುರ್ಡೆಕರ