ಬೆಂಗಳೂರು: ಮುಂಗಾರು ಮಳೆಯ ಆರ್ಭಟದ ಪರಿಣಾಮ ಘಟ್ಟಪ್ರದೇಶ ವಿಶೇಷವಾಗಿ ಕರಾವಳಿ ಭಾಗಗಳಲ್ಲಿ ಭಾರೀ ಹಾನಿ ಸಂಭವಿಸಿದ್ದು, ಸರಕಾರ ದಕ್ಷಿಣ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಬಿಜೆಪಿ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆ ವಿಷಯ ಪ್ರಸ್ತಾವಿಸಿದ ಬಿಜೆಪಿಯ ಹರೀಶ್ ಪೂಂಜ, ಮಳೆ ಅವಾಂತರದಿಂದ ಹಲವೆಡೆ ರಸ್ತೆ ಸಂಪರ್ಕವೇ ಕಡಿತಗೊಂಡಿದೆ. ಅತ್ಯಂತ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ, ನೆರೆಹಾವಳಿಗೆ ತುತ್ತಾದ ಕೊಡಗಿಗೆ, ಉತ್ತರ ಕರ್ನಾಟಕಕ್ಕೆ ಹಲವು ಸಂದರ್ಭಗಳಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಅದೇ ರೀತಿ ಈ ಸಲ ಕರಾವಳಿಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದರು.
ಈ ಹಿಂದೆ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಅನಾಹುತ ಸಂಭವಿಸಿದಾಗ ಅಂದಿನ ಬಿಜೆಪಿ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು ಎಂದರು. ಸುನಿಲ್ ಕುಮಾರ್ ದನಿಗೂಡಿಸಿ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಅಡಿ ಅನುದಾನ ನೀಡಿದರೆ ರಸ್ತೆ ದುರಸ್ತಿ ಸಾಧ್ಯವೇ ಇಲ್ಲ. ಲೋಕೋಪ ಯೋಗಿ ಇಲಾಖೆ ಅಡಿಯಲ್ಲಿಯೇ ಅನುದಾನ ನೀಡಲು ಸರಕಾರ ಮುಂದಾಗಬೇಕು ಎಂದರು. ವಿಪಕ್ಷ ನಾಯಕ ಆರ್. ಅಶೋಕ್, ಅನಾಹುತ ಸಂದರ್ಭ ಅನುದಾನ ನೀಡುವಲ್ಲಿ ತಾರತಮ್ಯ ಮಾಡಬೇಡಿ ಎಂದು ಸರಕಾರವನ್ನು ಆಗ್ರಹಿಸಿದರು.
ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಉತ್ತರಿಸಿ, ತಾರತಮ್ಯ ಮಾಡಿಲ್ಲ. ಮಳೆಗಾಲದ ಅನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲಿ ವರೆಗೂ ತಾತ್ಕಾಲಿಕ ಕ್ರಮ ಕೈಗೊಳ್ಳುತ್ತೇವೆ ಎಂದರು.