Advertisement

ಮಳೆ ವಿಕೋಪ ಸ್ಥಳೀಯವಾಗಿ ಸಿದ್ಧತೆ ಅಗತ್ಯ

06:00 AM May 31, 2018 | |

ಮಂಗಳವಾರ ಸುರಿದ ಭಾರೀ ಮಳೆಗೆ ಕರಾವಳಿಯ ಎರಡು ಜಿಲ್ಲೆಗಳು ತತ್ತರಿಸಿವೆ. ಅದರಲ್ಲೂ ಮಂಗಳೂರು ನಗರದಲ್ಲಿ ಅಕ್ಷರಶ ಜಲಪ್ರಳಯವೇ ಸಂಭವಿಸಿದೆ. ಹಲವಾರು ದಶಕಗಳ ಬಳಿಕ ಮಂಗಳೂರು ಈ ಮಾದರಿಯ ಸಮಸ್ಯೆಗೆ ಈಡಾಗಿದ್ದು ಇದೇ ಮೊದಲು. ಮಧ್ಯಾಹ್ನದ ಹೊತ್ತಿಗೆ ಮಂಗಳೂರಿನ ತಗ್ಗು ಪ್ರದೇಶಗಳೆಲ್ಲ ಮುಳುಗಿದ್ದವು. ಮನೆ, ಅಂಗಡಿಗಳಿಗೆ ನೀರು ನುಗ್ಗಿ ಜನರು ಕಂಗಾಲಾಗಿದ್ದರು. ವ್ಯಾಪಕವಾದ ನಾಶ-ನಷ್ಟ ಸಂಭವಿಸಿದ್ದು ಜನರು ಮಳೆಗಾಲ ಎದುರಿಸಲು ಏನೇನೂ ತಯಾರಿ ಮಾಡಿಕೊಂಡಿರದ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. 

Advertisement

ಹಾಗೆಂದು ಇಂತಹ ಭಾರೀ ಮಳೆ ಮಂಗಳೂರಿಗೆ ಇದೇ ಮೊದಲೇನಲ್ಲ. ಆದರೆ ಇಷ್ಟು ವರ್ಷ ಇಲ್ಲದ ಪ್ರಳಯದ ಸಮಸ್ಯೆ ಮೊದಲ ಮಳೆಗೆ ಉಂಟಾದದ್ದು ಹೇಗೆ ಎನ್ನುವುದು ಪರಿಶೀಲನೆಗೆ ಅರ್ಹವಾದ ಪ್ರಶ್ನೆ. ಈ ಸಲ ಮಂಗಳೂರಿನಲ್ಲಿ ರಸ್ತೆ ನಿರ್ಮಾಣ, ಅಗಲೀಕರಣ, ಡಾಂಬರೀಕರಣ, ಕಾಂಕ್ರೀಟೀಕರಣ ಎಂದು ಸಾಕಷ್ಟು ಕಾಮಗಾರಿಗಳು ನಡೆಸಲಾಗಿದೆ. ಇದ ರಿಂದಾಗಿ ಮಳೆ ನೀರು ಹರಿದು ಹೋಗುವ ಚರಂಡಿಗಳಿಗೆ ಅಲ್ಲಲ್ಲಿ ತಡೆಯಾಗಿದೆ. ಕೆಲವೆಡೆ ಚರಂಡಿಯನ್ನು ಮುಚ್ಚಿ ರಸ್ತೆಯನ್ನು ಅಗಲಗೊಳಿ ಸಲಾಗಿದೆ. ಎರಡೂ ಬದಿ ಚರಂಡಿ ಇದ್ದ ಕಡೆ ಒಂದು ಕಡೆ ಮುಚ್ಚಲಾಗಿದೆ. ಇದರ ಜತೆಗೆ ಕಟ್ಟಡಗಳು ಕೂಡಾ ಬಹುಪಾಲು ಚರಂಡಿಯನ್ನು ಅತಿಕ್ರಮಿಸಿದ್ದು, ಹೀಗಾಗಿ ನೀರೆಲ್ಲ ರಸ್ತೆಯಲ್ಲಿ ಹರಿದು ಹೋಗಿದೆ. 

ಇದು ಮಂಗಳೂರು ನಗರವೊಂದರ ಸಮಸ್ಯೆಯಲ್ಲ. ಬೆಂಗಳೂರು, ಮುಂಬಯಿ, ಚೆನ್ನೈ, ಕೋಲ್ಕತ್ತ, ಗುರುಗ್ರಾಮ ಹೀಗೆ ಪ್ರತಿ ಮಳೆಗಾಲದಲ್ಲಿ ನಮ್ಮ ಮಹಾನಗರಗಳು ಮುಳುಗುವ ಸುದ್ದಿ ಈಗ ಸಾಮಾನ್ಯವಾಗುತ್ತಿದೆ. ಕಳೆದ ವರ್ಷ ಬೆಂಗಳೂರು ಮತ್ತು ಮುಂಬಯಿ ನಗರಗಳು ಮಳೆಗಾಲದಲ್ಲಿ ಪಟ್ಟಪಾಡು ಅಷ್ಟಿಷ್ಟಲ್ಲ. ಇದಕ್ಕೂ ಹಿಂದೆ ಚೆನ್ನೈ ಹೆಚ್ಚು ಕಡಿಮೆ ಒಂದು ವಾರ ಮುಳುಗಿತ್ತು. ಇತ್ತೀಚೆಗೆ ನಿರ್ಮಾಣವಾಗಿರುವ ಗುರುಗ್ರಾಮ ಕೂಡಾ ಮಳೆಗಾಲದಲ್ಲಿ ಮುಳುಗುತ್ತದೆ ಎಂದಾದರೆ ನಮ್ಮ ನಗರ ನಿರ್ಮಾಣ ಎಷ್ಟು ಅವ್ಯವಸ್ಥಿತವಾಗಿದೆ ಎನ್ನುವುದು ಅರ್ಥವಾಗುತ್ತದೆ. 

ಯಾವುದೇ ನಗರಕ್ಕೆ ವ್ಯವಸ್ಥಿತವಾದ ಒಳಚರಂಡಿ ತೀರಾ ಆಗತ್ಯ. ಇದು ಮೂಲಸೌಕರ್ಯದೊಳಗೆ ಬರುತ್ತದೆ. ಆದರೆ ನಮ್ಮ ನಗರ ನಿರ್ಮಾತೃಗಳು ರೂಪಿಸುವ ನಗರ ಯೋಜನೆಗಳಲ್ಲಿರುವ ಲೋಪಗಳಿಂದಾಗಿ ಮಹಾನಗರಗಳು ಮಾತ್ರವಲ್ಲದೆ ದ್ವಿತೀಯ ಮತ್ತು ತೃತೀಯ ಶ್ರೇಣಿಯ ನಗರಗಳು ಕೂಡಾ ಈಗ ಮುಳುಗಡೆಯ ಅಪಾಯವನ್ನು ಎದುರಿಸುತ್ತಿವೆ. 

ಇಂಥ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗಲೆಲ್ಲ ನಮ್ಮ ಆಡಳಿತ ವ್ಯವಸ್ಥೆ ಪ್ರತಿಸ್ಪಂದಿಸುವ ರೀತಿ ಮಾತ್ರ ನಿರಾಶಾದಾಯಕ. ಚಂಡಮಾರುತ, ಮಳೆಯಂತಹ ವಿಕೋಪಗಳನ್ನು ತಡೆಯುವುದು ಅಸಾಧ್ಯ ನಿಜ. ಆದರೆ ಇಂತಹ ಪರಿಸ್ಥಿತಿಯಲ್ಲಿ ಜನರಿಗಾಗುವ ಸಮಸ್ಯೆಗಳನ್ನು ಆದಷ್ಟು ಕಡಿಮೆ ಗೊಳಿಸಲು ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದು. ಅದರಲ್ಲೂ ಸ್ಮಾರ್ಟ್‌ ಸಿಟಿಯಾಗಲು ಹೊರಟಿರುವ ಮಂಗಳೂರಿನಂಥ ನಗರಕ್ಕೆ ಇಂಥದ್ದೊಂದು ವ್ಯವಸ್ಥೆಯಿರುವುದು ಅನಿವಾರ್ಯ. ಆದರೆ ನಿನ್ನೆಯ ಮಳೆಗೆ ನಗರಾಡಳಿತ ಪ್ರತಿಸ್ಪಂದಿಸಿದ ರೀತಿ ಮಾತ್ರ ತೀರಾ ಆಘಾತ ಕಾರಿಯಾದದ್ದು. ಜಿಲ್ಲಾಡಳಿತದ ಕಂಟ್ರೋಲ್‌ ರೂಂ, ಕಾರ್ಪೋರೇಟರ್‌ಗಳು, ಆಗ್ನಿಶಾಮಕ ಪಡೆ, ಪೊಲೀಸರು ಹೀಗೆ ಎಲ್ಲರೂ ಕೈಕಟ್ಟಿ ಕುಳಿತಿದ್ದರು. ಯಾರಲ್ಲೂ ಸಮಸ್ಯೆಗೆ ಪರಿಹಾರ ಇರಲಿಲ್ಲ. ಮಣ್ಣಿನಡಿ ಸಿಲುಕಿದ್ದ ಮಹಿಳೆಯೊಬ್ಬರನ್ನು ಸ್ಥಳೀಯ ಯುವಕರೇ ಪಾರು ಮಾಡಬೇಕಾಯಿತು. ಇಲ್ಲಿಗೆ ರಕ್ಷಣಾ ಕಾರ್ಯಕರ್ತರು ಬಂದದ್ದು ಮೂರು ತಾಸಿನ ಬಳಿಕ. 

Advertisement

ಮಳೆಗಾಲಕ್ಕೆ ತಯಾರಿ ಎಂಬ ವಾರ್ಷಿಕ ಪ್ರಹಸನ ಎಷ್ಟು ಟೊಳ್ಳು ಎನ್ನುವುದು ಒಂದೇ ಒಂದು ಮಳೆಯಲ್ಲಿ ಬಯಲಾಗಿದೆ. ಕಳೆದ ಕೆಲವು ವರ್ಷಗಳಿಂದ ನಗರದ ಅಲ್ಲಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತಾ ಇದೆ. ಈ ಸಲ ಇಡೀ ನಗರದಲ್ಲಿಯೇ ಕೃತಕ ನೆರೆ ಸೃಷ್ಟಿಯಾಯಿತು. ಆರಂಭದಲ್ಲೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ ಸಮಸ್ಯೆ ಇಷ್ಟು ಬಿಗಡಾಯಿಸಲು ಅವಕಾಶ ಸಿಗುತ್ತಿರಲಿಲ್ಲ. ಆದರೆ ನಮ್ಮನ್ನಾಳುವವರಿಗೆ ಕೆಟ್ಟ ಮೇಲೆಯೂ ಬುದ್ಧಿ ಬರುವುದಿಲ್ಲವಲ್ಲ. ಜನಸಾಮಾನ್ಯರೂ ಪ್ರತಿ ವರ್ಷ ಮಳೆಗಾಲಕ್ಕಾಗಿ ಒಂದಷ್ಟು ಸಿದ್ಧತೆ ಮಾಡಿಕೊಳ್ಳುತ್ತಾರೆ. ಇದೇ ರೀತಿ ಆಡಳಿತ ವ್ಯವಸ್ಥೆಯೂ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲು ಒಂದು ನಿರ್ದಿಷ್ಟವಾದ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳುವುದು ಅಗತ್ಯ. ಅವಘಡ ಸಂಭವಿಸಿದ ಒಂದು ತಾಸಿನೊಳಗಾದರೂ ರಕ್ಷಣಾ ಕಾರ್ಯ ಕೈಗೊಳ್ಳಲು ಸಾಧ್ಯವಾಗುವಂತಹ ತಂಡಗಳನ್ನು ರಚಿಸಿಕೊಳ್ಳಬೇಕು. ಎಲ್ಲ ಸ್ಥಳೀಯಾಡಳಿತಗಳು ಮಳೆಗಾಲದ ವಿಕೋಪಗಳನ್ನು ಎದುರಿಸಲು ತಮ್ಮ ಮಟ್ಟದಲ್ಲಿ ಸಿದ್ಧತೆಗಳನ್ನು ಮಾಡಿಕೊಂಡರೆ ದುರಂತಗಳ ಪರಿಣಾಮಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next