Advertisement

ಮಳೆ ಅಭಾವ; ಭಿತ್ತನೆಗೆ ಹಿನ್ನಡೆ

10:13 AM Jun 17, 2019 | Team Udayavani |

ಹಾವೇರಿ: ಮುಂಗಾರು ಮಳೆ ಆರಂಭದ ಜೂನ್‌ ತಿಂಗಳ ಅರ್ಧ ಕಳೆದರೂ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೆ ಬಿತ್ತನೆ ಕಾರ್ಯಕ್ಕೆ ಭಾರಿ ಹಿನ್ನಡೆಯಾಗಿದೆ.

Advertisement

ಸರಿಯಾಗಿ ಮಳೆಯಾಗಿದ್ದರೆ ಈ ದಿನಗಳಲ್ಲಿ ಶೇ. 80 ಬಿತ್ತನೆಯಾಗಬೇಕಿತ್ತು. ಮಳೆ ಇಲ್ಲದೇ ಈವರೆಗೆ ಬಿತ್ತನೆ ಕಾರ್ಯ ಶೇ. 10ಆಗದೆ ಮಳೆಗಾಗಿ ರೈತರು ಮುಗಿಲು ನೋಡುತ್ತಿದ್ದಾರೆ.

ಮೇ ತಿಂಗಳಲ್ಲಿ ಸುರಿಯಬೇಕಿದ್ದ ಮುಂಗಾರು ಪೂರ್ವದ ಮಳೆಯೂ ಈ ಬಾರಿ ಸುರಿದಿಲ್ಲ. ಜೂನ್‌ ತಿಂಗಳ ಅರ್ಧ ಕಳೆದರೂ ಸಮರ್ಪಕ ಪ್ರಮಾಣದಲ್ಲಿ ಮಳೆ ಆಗಿಲ್ಲ. ಈ ವರ್ಷ ಈವರೆಗೂ ಸರಿಯಾಗಿ ಮಳೆ ಆಗದೆ ಇರುವುದು ಅನ್ನದಾತರಲ್ಲಿ ಆತಂಕ ಹೆಚ್ಚಿಸಿದೆ.

ಜಿಲ್ಲೆಯಲ್ಲಿ ಜನವರಿಯಿಂದ ಮೇ ವರೆಗಿನ ಮುಂಗಾರು ಪೂರ್ವ ವಾಡಿಕೆ ಮಳೆ 126.67 ಮಿಮೀ ಆಗಿದೆ. ಆದರೆ, ಈ ವರ್ಷ ಕೇವಲ 55ಮಿಮೀ. ಮಾತ್ರ ಮುಂಗಾರುಪೂರ್ವ ಮಳೆಯಾಗಿದೆ. ಈ ಮಳೆ ಜಿಲ್ಲೆಯ ಎಲ್ಲ ಪ್ರದೇಶಗಳಲ್ಲಿ ಆಗದೆ ಕೆಲವೇ ಪ್ರದೇಶಗಳಲ್ಲಿ ಆಗಿದೆ. ಬಹಳಷ್ಟು ಪ್ರದೇಶಗಳಲ್ಲಿ ಸುರಿಯಲೇ ಇಲ್ಲ. ಇನ್ನು ಸುರಿದಷ್ಟು ಮಳೆ ಒಂದು ಅಥವಾ ಎರಡು ದಿನದಲ್ಲಿ ಸುರಿದಿರುವುದರಿಂದ ರೈತರಿಗೆ ಅನುಕೂಲವಾಗಲಿಲ್ಲ.

ಜೂನ್‌ ತಿಂಗಳು ಮುಂಗಾರು ವಾಡಿಕೆ ಮಳೆ 114.9ಮಿಮೀಯಿದ್ದು ಅರ್ಧ ತಿಂಗಳಲ್ಲಿ ಕೇವಲ 27.1ಮಿಮೀ ಮಾತ್ರ ಮಳೆಯಾಗಿದೆ. ಜೂನ್‌ನಲ್ಲಿ ಉತ್ತಮ ಮಳೆಯಾಗಿದ್ದರೆ ಈಗಾಗಲೇ ಕೃಷಿ ಇಲಾಖೆ ಗುರಿ ಪ್ರಕಾರ ಜಿಲ್ಲೆಯಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಆಹಾರ ಧಾನ್ಯಗಳ ಬಿತ್ತನೆ ಶೇ. 80ಅಂದರೆ ಸರಾಸರಿ ಮೂರು ಲಕ್ಷ ಹೆಕ್ಟೇರ್‌ನಷ್ಟು ಬಿತ್ತನೆ ಆಗಬೇಕಿತ್ತು. ಮಳೆ ಕೊರತೆಯಿಂದ ಜೂನ್‌ ತಿಂಗಳಿನ 15 ದಿನಗಳಲ್ಲಿ ಶೇ. 10ಕೂಡ ಬಿತ್ತನೆಯಾಗಿಲ್ಲ.

Advertisement

ಬಿತ್ತನೆ ಗುರಿ:ಕೃಷಿ ಇಲಾಖೆ ಪ್ರಸಕ್ತ ವರ್ಷ 207973 ಹೆಕ್ಟೇರ್‌ ಏಕದಳ, 7209 ಹೆಕ್ಟೇರ್‌ ದ್ವಿದಳ, 31854 ಹೆಕ್ಟೇರ್‌ ಎಣ್ಣೆಕಾಳು, 85790 ಹೆಕ್ಟೇರ್‌ ವಾಣಿಜ್ಯ ಬೆಳೆ ಸೇರಿ ಒಟ್ಟು 332826 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದೆ. ಮುಂಗಾರು ಹಂಗಾಮಿಗಾಗಿ ಜಿಲ್ಲೆಯ 19 ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಉಪಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆಗೆ ವ್ಯವಸ್ಥೆ ಮಾಡಿಕೊಂಡಿದೆ. ಮುಂಗಾರು ಹಂಗಾಮಿಗೆ ಒಟ್ಟು 4165 ಕ್ವಿಂಟಲ್ ಬಿತ್ತನೆ ಬೀಜ ಸರಬರಾಜು ಆಗಿದ್ದು, ಇದರಲ್ಲಿ ಕೇವಲ 323 ಕ್ವಿಂಟಾಲ್ ಈಗಾಗಲೇ ವಿತರಣೆಯಾಗಿದೆ. ಇದರಲ್ಲಿ 321 ಕ್ವಿಂಟಾಲ್ ಶೇಂಗಾ ಬೀಜ, ಎರಡು ಕ್ವಿಂಟಾಲ್ ಸೋಯಾ ಅವರೆ ಎರಡು ವಿಧದ ಬಿತ್ತನೆ ಬೀಜಗಳು ಮಾತ್ರ ವಿತರಣೆಯಾಗಿವೆ. ಆದರೆ, ಬಿತ್ತನೆಗಾಗಿ ರೈತರು ಮಳೆ ಬರುವುದನ್ನೇ ಕಾಯುತ್ತಿದ್ದಾರೆ.

ಗೊಬ್ಬರ ದಾಸ್ತಾನು:ಮುಂಗಾರು ಹಂಗಾಮಿಗೆ ಸರಬರಾಜು ಆಗಿರುವ ಒಟ್ಟು 32722 ಮೆಟ್ರಿಕ್‌ ಟನ್‌ ರಸಗೊಬ್ಬರದಲ್ಲಿ 400 ಮೆಟ್ರಿಕ್‌ ಟನ್‌ ವಿತರಣೆಯಾಗಿದೆ. 32322 ಮೆಟ್ರಿಕ್‌ ಟನ್‌ ಗೊಬ್ಬರ ದಾಸ್ತಾನು ಇದೆ. ಯೂರಿಯಾ 9525 ಮೆ.ಟನ್‌, ಡಿಎಪಿ 9048 ಮೆ.ಟನ್‌, ಎಂಒಪಿ 3541 ಮೆ.ಟನ್‌, ಕಾಂಪ್ಲೆಕ್ಸ್‌ 10055 ಮೆ.ಟನ್‌ ದಾಸ್ತಾನು ಇದೆ. ಪ್ರಸ್ತುತ ಯೂರಿಯಾ 168 ಮೆ.ಟನ್‌, ಡಿಎಪಿ 98 ಮೆ.ಟನ್‌., ಕಾಂಪ್ಲೆಕ್ಸ್‌ 134 ಮೆ.ಟನ್‌ ಒಟ್ಟು 400 ಮೆ.ಟನ್‌ ರಸಗೊಬ್ಬರ ವಿತರಣೆಯಾಗಿದೆ.

ಒಟ್ಟಾರೆ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬಿತ್ತನೆ ಶುರುವಾಗಿಲ್ಲ. ಮಳೆ ಸಮರ್ಪಕವಾಗಿ ಬೀಳಲು ಶುರು ಮಾಡಿದಾಗಲೇ ಬಿತ್ತನೆ ಕಾರ್ಯ ಚುರುಕು ಪಡೆದುಕೊಳ್ಳಲಿದ್ದು ರೈತರು ಮಳೆಗಾಗಿ ವರುಣ ದೇವನನ್ನು ಪ್ರಾರ್ಥಿಸುತ್ತಿದ್ದಾರೆ.

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next