ಶಿವಮೊಗ್ಗ: ಮಳೆಯ ಕೊರತೆಯಿಂದ ರಾಜ್ಯದಲ್ಲಿ ಕೃಷಿ ಮೇಲೆ ಗಂಭೀರ ಪರಿಣಾಮ ಬಿದ್ದಿದೆ. ಇದರ ಜೊತೆಗೆ ಈ ಮಳೆ ಕೊರತೆ ಮೀನುಗಾರಿಕೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಕೃಷಿಯ ಜೊತೆಗೆ ಉಪಕಸುಬಾಗಿ ಮೀನುಗಾರಿಕೆಯನ್ನು ಅವಲಂಬಿಸಿರುವ ರೈತರು ಇದೀಗ ಅಲ್ಲಿಯೂ ತಲೆ ಮೇಲೆ ಕೈ ಹಚ್ಚಿ ಕುಳಿತುಕೊಳ್ಳುವಂತಾಗಿದೆ.
ಮಳೆ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾದ ಪರಿಣಾಮ ಮೀನುಗಾರಿಕೆ ಇಲಾಖೆ ಈ ಬಾರಿ ಮೀನು ಮರಿಗಳನ್ನು ಜಲಾಶಯಕ್ಕೆ ಬಿಡುತ್ತಿಲ್ಲ. ವರಾಹಿ, ತುಂಗಾ, ಅಂಜನಾಪುರ, ಅಂಬ್ಲಿಗೊಳ, ಚಕ್ರ ಮತ್ತು ಸಾವೆಹಕ್ಲು ಜಲಾಶಯಗಳಲ್ಲಿ ಮೀನುಗಾರಿಕೆ ಇಲಾಖೆಯು ಪ್ರತಿ ವರ್ಷ ಮೀನು ಬಿತ್ತನೆ ಮಾಡುತ್ತಿತ್ತು. ಆದರೆ ಈ ಬಾರಿ ಮಳೆಯ ಕೊರತೆಯಿಂದ ತುಂಗಾ ಜಲಾಶಯ ಬಿಟ್ಟರೆ ಬೇರಾವುದೇ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಲೇ ಇಲ್ಲ. ಹೀಗಾಗಿ ಇಲಾಖೆಯು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದು, ಇದುವರೆಗೆ ಮೀನಿನ ಮರಿಗಳನ್ನು ಜಲಾಶಯಕ್ಕೆ ಬಿಟ್ಟಿಲ್ಲ. ಅದೃಷ್ಟವಶಾತ್ ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬಿದ್ದು, ಜಲಾಶಯದಲ್ಲಿ ನೀರಿನ ಪ್ರಮಾಣ ಏರಿಕೆಯಾದಲ್ಲಿ ಮಾತ್ರ ಆಗ ಮೀನು ಮರಿ ಬಿತ್ತನೆ ಕಾರ್ಯ ಮಾಡಬಹುದಾಗಿದೆ.
ಉತ್ಪಾದನೆಯಲ್ಲಿಯೂ ಕೊರತೆ: ಮೀನು ಮರಿಗಳ ಲಭ್ಯತೆ ಕೂಡ ಮೀನು ಉತ್ಪಾದನಾ ಕೇಂದ್ರದ ಮೇಲೆ ಅವಲಂಬಿತವಾಗಿದೆ. ಈ ಬಾರಿ ಮೀನುಮರಿ ಉತ್ಪಾದನಾ ಕೇಂದ್ರಗಳಲ್ಲೂ ನೀರಿನ ಕೊರತೆ ಇರುವ ಕಾರಣ ಅಲ್ಲೂ ಮೀನು ಕೃಷಿ ಕುಂಠಿತಗೊಂಡಿದೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಶೇ.30 ರಿಂದ 40 ರಷ್ಟು ಮಾತ್ರ ಮೀನುಮರಿ ಉತ್ಪಾದನೆ ಆಗುತ್ತಿದೆ. ಖಾಸಗಿ ಕೊಳಗಳಲ್ಲಿ ಮೀನು ಕೃಷಿ ಮಾಡಲು ಇಲಾಖೆಯು ಉತ್ತೇಜನ ನೀಡುತ್ತಿದ್ದು, ಜಿಲ್ಲೆಯಲ್ಲಿ 200 ರಿಂದ 220 ಖಾಸಗಿ ನೋಂದಾಯಿತ ಕೊಳಗಳು ಇವೆ. ಇವೆಲ್ಲವೂ ಚಾನಲ್ ನೀರು ಹರಿಯುವ ಜಾಗದ ಆಸುಪಾಸು ಕಾರ್ಯ ನಿರ್ವಹಿಸುತ್ತಿವೆ. ಇದನ್ನು ಹೊರತುಪಡಿಸಿ ಬಾವಿ, ಕೆರೆ ಕಟ್ಟೆಗಳ ಮೇಲೆ ಅವಲಂಬಿತವಾಗಿರುವ ಕೊಳಗಳೂ ಇವೆ. ಪ್ರಸ್ತುತ ತುಂಗಾ ಅಣೆಕಟ್ಟೆನಿಂದ ಹೊರಡುವ ಚಾನಲ್‌ನ ಅಕ್ಕಪಕ್ಕದ ಖಾಸಗಿ ಕೊಳಗಳ ಪೈಕಿ ಶೇ.10 ರಷ್ಟರಲ್ಲಿ ಮಾತ್ರ ಮೀನು ಮರಿ ಬಿತ್ತನೆ ನಡೆದಿದೆ.
ಹೀಗೆ ಅಲ್ಲಿ ಉತ್ಪಾದಿಸಿದ ಮೀನು ಮರಿ ಮತ್ತು ಇಲಾಖೆ ಮೀನು ಮರಿ ಉತ್ಪದನಾ ಕೇಂದ್ರದಲ್ಲಿ ಉತ್ಪಾದಿಸಿದ ಒಟ್ಟು ಮೀನು ಮರಿಗಳನ್ನು ಜಲಾಶಯಗಳಲ್ಲಿ ಬಿತ್ತನೆ ಮಾಡುತ್ತದೆ. ಜೂನ್, ಜುಲೈನಲ್ಲಿ ಯಾವುದೇ ಕಾರಣಕ್ಕೂ ಹೊರಗಿನಿಂದ ಮೀನು ಮರಿ ಬಿತ್ತನೆ ಮಾಡುವುದಿಲ್ಲ. ಹಾಗೂ ಮೀನುಗಾರಿಕೆಗೂ ಅವಕಾಶ ನೀಡುವುದಿಲ್ಲ. ಕಾರಣ ಆ ಸಂದರ್ಭದಲ್ಲಿ ಸ್ಥಳೀಯವಾಗಿ ಮೀನು ಸಂತಾನೋತ್ಪತ್ತಿಗೆ ಅವಕಾಶ ನೀಡಲಾಗುತ್ತದೆ.
ಲಿಂಗನಮಕ್ಕಿಯಲ್ಲಿ ವರ್ಷಕ್ಕೆ 80 ಲಕ್ಷ ಮೀನು ಮರಿಯನ್ನು ಸಾಕಬಹುದು. ಆದರೆ ಸಧ್ಯದ ಸ್ಥಿತಿಯಲ್ಲಿ ಅಲ್ಲಿ ಗರಿಷ್ಠ 30 ರಿಂದ 40 ಲಕ್ಷ ಮೀನು ಮರಿ ಸಾಕಲಾಗುತ್ತಿದೆ. ಕಾಟ್ಲಾ ಮೀನಿಗೆ ಹೆಚ್ಚಿನ ಬೇಡಿಕೆಯಿದ್ದು, ಇವುಗಳನ್ನು ಜಲಾಶಯದ ಸುತ್ತಮುತ್ತಲಿನ ಕೆರೆಕಟ್ಟೆಗಳಲ್ಲಿ ಬೆಳೆಸಲಾಗುತ್ತಿದೆ. 2016 -17 ರಲ್ಲಿ 38 ಲಕ್ಷ ಮೀನುಮರಿಗಳನ್ನು ಲಿಂಗನಮಕ್ಕಿ ಜಲಾಶಯದಲ್ಲಿ ಬೆಳೆಸಲಾಗಿತ್ತು. ಈ ಮೂಲಕ 7.72 ಲಕ್ಷ ರೂ. ಆದಾಯವನ್ನು ಮೀನುಗಾರಿಕೆ ಇಲಾಖೆ ಗಳಿಸಿತ್ತು. ಕಳೆದ ಎರಡು ವರ್ಷದಿಂದ ಜಿಲ್ಲೆಯಲ್ಲಿ ಇಲಾಖೆಗೆ ನೀಡಲಾಗಿರುವ ಗುರಿ ಸಾಧನೆ ಆಗುತ್ತಿಲ್ಲ. ಇದಕ್ಕೆ ಮಳೆ ಕೊರತೆ ಹಾಗೂ ನೀರಿನ ಸಂಗ್ರಹ ಪ್ರಮಾಣ ಇಳಿಮುಖ ಕಾರಣ.
ಜಲಾಶಯಗಳಲ್ಲಿ ಮೀನುಗಾರಿಕೆ:
ಜಲಾಶಯಗಳಲ್ಲಿ ಒಂದು ವರ್ಷಕ್ಕೆ ಒಂದು ತೆಪ್ಪಕ್ಕೆ ಇಬ್ಬರು ಮೀನುಗಾರರಿಗೆ ಇಲಾಖೆ ಅವಕಾಶ ಮಾಡಿಕೊಡುತ್ತದೆ. ಅದಕ್ಕೆ ಮೀನುಗಾರರು ವಾರ್ಷಿಕ ಶುಲ್ಕ 3 ಸಾವಿರ ರೂ. ಪಾವತಿಸಬೇಕು. ಲಿಂಗನಮಕ್ಕಿ ಜಲಾಶಯದಲ್ಲಿ ಮೀನುಗಾರಿಕೆ ನಡೆಸಲು 279 ಮೀನುಗಾರರಿಗೆ ಪರವಾನಗಿ
ನೀಡಿರುವುದೂ ಸೇರಿದಂತೆ ಇಲಾಖೆಯು ಜಿಲ್ಲಾದ್ಯಂತ 350ಕ್ಕೂ ಹೆಚ್ಚು ಮೀನುಗಾರರಿಗೆ ಪರವಾನಗಿ ನೀಡಿದೆ.
ಗೋಪಾಲ್ ಯಡಗೆರೆ