ಹುಮನಾಬಾದ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ತಾಲೂಕಿನ ಮರಖಲ್, ಸೀತಾಳಗೇರಾ ವಲಯದಲ್ಲಿ ಸಂಭವಿಸಿದ ಮಳೆಹಾನಿ ಸಮೀಕ್ಷೆ ವೀಕ್ಷಿಸಿದರು.
ಡಾಕುಳಗಿ, ಹಿಲಾಲಪೂರ, ಭೂತಗಿ, ಮರಖಲ್, ಸೀತಾಳಗೇರಾ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಸ್ಥರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಜನರ ಮನೆಗಳು ಹಾನಿ ಸಂಭವಿಸಿದ ಕುಟುಂಬಗಳಿಗೆ ಸರ್ಕಾರದ ಪ್ರತಿನಿಧಿ ಗಳು ತ್ವರಿತಗತಿಯಲ್ಲಿ ಪರಿಹಾರ ಚೆಕ್ ವಿತರಿಸುತ್ತಿದ್ದಾರೆ. ಆದರೆ, ಅಧಿಕ ಪ್ರಮಾಣದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕುಟುಂಬಗಳ ಜನರ ಮನೆಗಳು ಹಾನಿ ಸಂಭವಿಸಿದ್ದು, ಇಂದಿಗೂ ಕೂಡ ಸರ್ಕಾರ ಪರಿಹಾರ ಕಲ್ಪಿಸುವ ಕಾರ್ಯ ಮಾಡಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಈ ಕುರಿತು ಸಚಿವರೊಂದಿಗೆ ಮಾತನಾಡುವುದಾಗಿತಿಳಿಸಿದರು. ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಸಂಭವಿಸಿದೆ. ರೈತರು ಕಂಗಾಲಾಗಿದ್ದಾರೆ. ಮುಖ್ಯಮಂತ್ರಿಗಳು ಕಾಟಾಚಾರಕ್ಕೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ, ಇಂದಿಗೂ ಕೂಡ ರೈತರಿಗೆ ನಯಾಪೈಸೆ ಪರಿಹಾರ ಬಂದಿಲ್ಲ. ರೈತರ ಉಳಿಯಬೇಕಾದರೆ ಕೂಡಲೇ ಸರ್ಕಾರ ರೈತರಿಗೆ ಸ್ಪಂದಿಸುವಂತಾಗಬೇಕು. ಸರ್ಕಾರದ ಗಮನ ಸೆಳೆದುಮೊದಲು ಬೆಳೆಹಾನಿ ಪರಿಹಾರ ಕೊಡಿಸಿ ಎಂದು ರೈತರು ವಿಪಕ್ಷ ನಾಯಕರಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧಡೆ ಸಂಭವಿಸಿದ ಮಳೆಹಾನಿ ಕುರಿತು ಶಾಸಕ ರಾಜಶೇಖರ ಪಾಟೀಲ ವಿವರಿಸಿದರು. ಕಾರಂಜಾ ಜಲಾಶಯಕ್ಕೆ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಇಂದಿಗೂ ಪರಿಹಾರ ಕಲ್ಪಿಸುವಲ್ಲಿ ಸರ್ಕಾರಗಳು ಮುಂದಾಗಿಲ್ಲ. ಕಳೆದ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಯಾವ ಸರ್ಕಾರಗಳು ಕೂಡ ನಮ್ಮ ಧ್ವನಿಗೆ ಬೆಂಬಲ ನೀಡಿಲ್ಲ. ಜಲಾಶಯಕ್ಕೆ ಭೂಮಿನೀಡಿ ರೈತರು ಕಂಗಾಲು ಆಗಿದ್ದಾರೆ. ಕುಟುಂಬ ನಿರ್ವಹಣೆಕಷ್ಟವಾಗಿದೆ ಎಂದು ಕಾರಂಜಾ ಮುಳುಗಡೆ ಸಂತ್ರಸ್ತರಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೊಚಕನಳ್ಳಿ ಮನವಿ ಸಲ್ಲಿಸಿದರು.
ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ಡಾ|ಚಂದ್ರಶೇಖರ ಪಾಟೀಲ, ರಹೀಮ್ ಖಾನ್, ವಿಜಯಸಿಂಗ್, ಜಿಪಂ ಮಾಜಿ ಸದಸ್ಯ ವೀರಣ್ಣಾ ಪಾಟೀಲ, ಮಲ್ಲಿಕಾರ್ಜುನ ಮಾಶೆಟ್ಟಿ, ಮಹಾಂತಯ್ನಾ ತೀರ್ಥಾ ಸೇರಿದಂತೆ ಅನೇಕರು ಇದ್ದರು.