Advertisement

ಮಳೆ ಹಾನಿ: ನೈಜ ವರದಿಗೆ ಶಾಸಕ ನಡಹಳ್ಳಿ ಸೂಚನೆ

07:17 PM Nov 01, 2020 | Suhan S |

ಮುದ್ದೇಬಿಹಾಳ: ಅಧಿಕಾರಿಗಳು ಮಳೆ ಹಾನಿ ಕುರಿತು ಪರಿಶೀಲನೆ ನಡೆಸುವಾಗ ಮಾನವೀಯತೆಯ ದೃಷ್ಟಿಕೋನ ಹೊಂದಿರಬೇಕು. ಹಾನಿಯ ನೈಜ ವರದಿ ತಯಾರಿಸಿ ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಇಲ್ಲಿನ ತಮ್ಮ ದಾಸೋಹ ನಿಲಯದ ಗೃಹ ಕಚೇರಿಯಲ್ಲಿ ಮಳೆ ಹಾನಿ ಕುರಿತು ತಾಲೂಕು ಮಟ್ಟದ ಅಧಿಕಾರಿಗಳು, ನೋಡಲ್‌ ಅಧಿಕಾರಿಗಳು, ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಗಡಿ ಭಾಗದಲ್ಲಿರುವ ನಾರಾಯಣಪುರ ಜಲಾಶಯದ ಕೃಷ್ಣಾ ನದಿ ಹಿನ್ನೀರು ಈ ತಾಲೂಕಿನ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ಹಾನಿಗೊಳಿಸಿದೆ. ಜಮೀನುಗಳಲ್ಲಿ ಮಳೆ ನೀರು ನಿಂತು ಹಾನಿಯಾಗಿದೆ. ಈ ಬಗ್ಗೆ ವಿಶೇಷ ವರದಿ ತಯಾರಿಸಬೇಕು ಎಂದು ಸಲಹೆ ನೀಡಿದರು.

ಹಾನಿ ವರದಿ ತಯಾರಿಸುವಲ್ಲಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ನೀವು ತಯಾರಿಸುವ ನೈಜ ವರದಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತಂದು ಹೆಚ್ಚಿನ ಪರಿಹಾರವನ್ನು ಸಂತ್ರಸ್ತರಿಗೆ ಕೊಡಲು ಸಾಧ್ಯವಾಗುತ್ತದೆ ಎಂದರು.

ಈ ಮೊದಲಿನ ಸಭೆಗಳಲ್ಲಿ ಸೂಚಿಸಿದಂತೆ ಮನೆಗಳ ಹಾನಿ, ಬೆಳೆ ಹಾನಿ ಬಗ್ಗೆ ಸಿದ್ಧಪಡಿಸಿದ್ದ ವರದಿ ಮತ್ತು ಅಂಕಿ ಸಂಖ್ಯೆ ಪಡೆದುಕೊಂಡ ಶಾಸಕರು, ಸರಿಯಾದ ಮಾಹಿತಿ ಕಲೆಹಾಕುವಲ್ಲಿವಿಫಲರಾದವರನ್ನು ತರಾಟೆಗೆ ತೆಗೆದುಕೊಂಡು ಇನ್ನೊಂದು ಕಾಲಾವಕಾಶದ ಎಚ್ಚರಿಕೆ ನೀಡಿದರು. ಹುಲ್ಲೂರ ಭಾಗದಲ್ಲಿನ ಮನೆಹಾನಿ, ಬೆಳೆಹಾನಿ ಶೀಘ್ರ ತಯಾರಿಸುವಂತೆ ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ತಿಳಿಸಲು ತಹಶೀಲ್ದಾರ್‌ ಜಿ.ಎಸ್‌. ಮಳಗಿ ಅವರಿಗೆ ಸೂಚಿಸಿದರು.

ಮನೆಹಾನಿಯನ್ನು ಎ,ಬಿ,ಸಿ,ಡಿ ಕೆಟಗರಿವೈಸ್‌ ತಯಾರಿಸುವ ಕುರಿತು ಕೇಳಿದಾಗ ಪಿಡಿಒಗಳು ಗೊಂದಲಕ್ಕೊಳಗಾದರು. ಇದನ್ನು ಮನಗಂಡ ಶಾಸಕರು ತಾವೇ ಕೆಟಗರಿವೈಸ್‌ ಮನೆಹಾನಿ ತಯಾರಿಸುವ ಕುರಿತು ತಿಳಿಹೇಳಿ ಗೊಂದಲ ಅಂತ್ಯ ಗೊಳಿಸಿದರು. ಹಾನಿಯ ನಿಖರ ವರದಿಯನ್ನು ನೀವೇ ನಿರ್ಧರಿಸಿ ಅನ್ಯಾಯ ಆಗದಂತೆ, ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡು ವರದಿ ತಯಾರಿಸಲು ಕಿವಿಮಾತು ಹೇಳಿದರು.

Advertisement

ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಈ ಬಗ್ಗೆ ತೋಟಗಾರಿಕೆ ಅಧಿಕಾರಿಗಳ ತಂಡ ಪರಿಶೀಲಿಸಿ ನೈಜ ವರದಿ ತಯಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶ ಸೇರಿ ಅಂದಾಜು 1500 ಮನೆಗಳಿಗೆ ಹಾನಿ ಆಗಿದೆ, ಮುದ್ದೇಬಿಹಾಳ ತಾಲೂಕಲ್ಲಿ 28840 ಹೆಕ್ಟೇರ್‌, ತಾಳಿಕೋಟೆ ತಾಲೂಕಲ್ಲಿ 19576 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಆಗಿರುವ ಮಾಹಿತಿಯನ್ನು ಅಧಿಕಾರಿಗಳು ಶಾಸಕರಿಗೆ ಸಲ್ಲಿಸಿದರು.

ಮುದ್ದೇಬಿಹಾಳ ತಹಶೀಲ್ದಾರ್‌ ಜಿ.ಎಸ್‌. ಮಳಗಿ, ತಾಳಿಕೋಟೆ ತಹಶೀಲ್ದಾರ್‌ ಅನಿಲಕುಮಾರ ಢವಳಗಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಮೀನುಗಾರಿಕೆ ಅಧಿಕಾರಿ ಬಿ.ಎಸ್‌.ಲಮಾಣಿ, ನೋಡಲ್‌ ಅಧಿಕಾರಿಗಳು, ಪಿಡಿಒಗಳು ಇದ್ದರು.

ಗ್ರಾಪಂಗೆ ಭೇಟಿ ನೀಡಿ :

ನೋಡಲ್‌ ಅಧಿಕಾರಿಗಳು ಪ್ರತಿಯೊಂದು ಗ್ರಾಪಂಗೆ ಭೇಟಿ ನೀಡಿ ಹಾನಿಯ ಸ್ಥಳ ಪರಿಶೀಲನೆ ನಡೆಸಬೇಕು. ಹೋಬಳಿಗೊಂದು ಗ್ರಾಪಂ ಅನ್ನು ರ್‍ಯಾಂಡಮ್‌ ಆಗಿ ಆಯ್ಕೆ ಮಾಡಿಕೊಂಡು ಸಮೀಕ್ಷೆಯ ನೈಜತೆ ಖಚಿತಪಡಿಸಿಕೊಳ್ಳಬೇಕು. ಸಮೀಕ್ಷಾ ತಂಡ ನೀಡಿದ ವರದಿ ಸರಿಯಾಗಿರದಿದ್ದರೆ ವರದಿ ತಯಾರಿಸಿದವರ ಮೇಲೆ ಕ್ರಮಕ್ಕೆ ಶಿಫಾರಸು ಮಾಡಬೇಕು ಎಂದು ಶಾಸಕ ನಡಹಳ್ಳಿ ಸೂಚಿಸಿದ್ದಾರೆ.

ಸರ್ಕಾರದ ವಸತಿ ಯೋಜನೆ ಅಡಿ ಪ್ರತಿ ಗ್ರಾಪಂ ವ್ಯಾಪ್ತಿಯ ವಸತಿಹೀನರಿಗೆ ಮನೆ ಹಂಚಿಕೆ ಮಾಡಬೇಕಿದೆ. ಇದಕ್ಕಾಗಿ ಅರ್ಹರ ಮಾಹಿತಿ ಕೊಡಬೇಕು. ಪ್ರತಿ ಗ್ರಾಪಂಗೆ 20-30 ಫಲಾನುಭವಿ ಆಯ್ಕೆಗೊಳ್ಳುವಂತಿರಬೇಕು. ಗ್ರಾಮೀಣ ಪ್ರದೇಶಕ್ಕೆ 1500, ಪಟ್ಟಣ ಪ್ರದೇಶಕ್ಕೆ 500 ಮನೆ ಹಂಚಿಕೆ ಗುರಿ ಇದೆ. ಇದರಲ್ಲಿ ಲೋಪ ಕಂಡುಬರಬಾರದು. ಎ.ಎಸ್‌. ಪಾಟೀಲ ನಡಹಳ್ಳಿ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next