Advertisement

Rain ದಕ್ಷಿಣ ಕನ್ನಡ: ನಾಲ್ಕು ದಿನ ಎಲ್ಲೋ ಅಲರ್ಟ್‌

12:16 AM Jul 04, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಜಿಲ್ಲಾದ್ಯಂತ ಬುಧವಾರ ಸಾಧಾರಣ ಮಳೆಯಾಗಿದೆ. ಉಳಿದಂತೆ ಮೋಡದಿಂದ ಕೂಡಿದ ವಾತಾವರಣ ಇತ್ತು. ಮಂಗಳೂರಿನಲ್ಲಿ ಸಂಜೆ ವೇಳೆ ಉತ್ತಮ ಮಳೆಯಾಗಿದೆ.

Advertisement

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಜು.4ರಿಂದ 7ರ ವರೆಗೆ “ಎಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಈ ವೇಳೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ 29.9 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.9 ಡಿ.ಸೆ. ಏರಿಕೆ ಮತ್ತು 24.6 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.6 ಡಿ.ಸೆ. ಏರಿಕೆ ಕಂಡಿತ್ತು.

ಉಡುಪಿಯ ಹಲವೆಡೆ ಧಾರಾಕಾರ ಮಳೆ
ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಹಾಗೂ ಬುಧವಾರ ಹಲವೆಡೆ ಧಾರಾಕಾರ ಮಳೆಯಾಗಿದ್ದು, 27 ಮನೆಗಳಿಗೆ ಹಾನಿಯಾಗಿದೆ. ಕುಂದಾಪುರ ತಾಲೂಕಿನ ಬೀಜಾಡಿ, ಕೂರ್ಗಿ, ಕೆದೂರು, ಉಡುಪಿ ತಾಲೂಕಿನ ಕಡೆಕಾರು, ಶಿವಳ್ಳಿ, ಪುತ್ತೂರು, ಬ್ರಹ್ಮಾವರದಲ್ಲಿ ಹೊಸೂರು, ಯಡ್ತಾಡಿ, ಕರ್ಜೆ ಭಾಗದಲ್ಲಿ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಕುಂದಾಪುರದ ಕುಳಂಜೆ ಗ್ರಾಮದಲ್ಲಿ ಅಡಕೆ, ಜಾನುವಾರು ತೋಟಗಳಿಗೆ ಹಾನಿ ಸಂಭವಿಸಿದೆ.

ಬುಧವಾರ ಇಡೀ ದಿನ ಮಣಿಪಾಲ, ಉಡುಪಿ, ಮಲ್ಪೆ, ಬ್ರಹ್ಮಾವರ, ಕಾಪು ಸುತ್ತಮುತ್ತಲಿನ ಪರಿಸರದಲ್ಲಿ ಬಿಸಿಲು-ಮೋಡ ಕವಿದ ವಾತಾವರಣದ ನಡುವೆ ಬಿಟ್ಟುಬಿಟ್ಟು ಮಳೆ ಸುರಿದಿದೆ. ಗಾಳಿ ಮಳೆಯಿಂದಾಗಿ ಹಲವೆಡೆ ವಿದ್ಯುತ್‌ ಕಂಬಗಳಿಗೆ ಹಾನಿ ಸಂಭವಿಸಿದ್ದು, ಗಂಟೆಗಟ್ಟಲೆ ವಿದ್ಯುತ್‌ ವ್ಯತ್ಯಯವಾಗಿತ್ತು.

ಜಿಲ್ಲೆಯಲ್ಲಿ 60 ವಿದ್ಯುತ್‌ ಕಂಬ, 5 ವಿದ್ಯುತ್‌ ಪರಿವರ್ತಕಗಳಿಗೆ ಹಾನಿ ಸಂಭವಿಸಿದೆ. ಕಾರ್ಕಳ 20.1, ಕುಂದಾಪುರ 50.0, ಉಡುಪಿ 26.4, ಬೈಂದೂರು 34.3, ಬ್ರಹ್ಮಾವರ 30.4, ಕಾಪು 14.8, ಹೆಬ್ರಿ 42.4 ಮಿ. ಮೀ. ಮಳೆಯಾಗಿದ್ದು, 34. 0 ಮಿ. ಮೀ. ಸರಾಸರಿ ಮಳೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next