ಹುಬ್ಬಳ್ಳಿ: ಇಲ್ಲಿನ ಮಹಾತ್ಮಾ ಗಾಂಧಿ ಉದ್ಯಾನವನ (ಇಂದಿರಾ ಗ್ಲಾಸ್ ಹೌಸ್)ದಲ್ಲಿ ಆಗಸ್ಟ್ ತಿಂಗಳಾಂತ್ಯದೊಳಗೆ ಮತ್ತೆ ಪುಟಾಣಿ ರೈಲಿನ ಸದ್ದು ಕೇಳಿ ಬರಲಿದೆ.
ಪುಣೆಯ ಸಿಸಿ ಇಂಜನಿಯರ್ ಕಂಪನಿಯವರು ನಿರ್ಮಿಸಿದ ಈ ಬುಲೆಟ್ ಮಾದರಿಯ ಪುಟಾಣಿ ರೈಲು ಇನ್ನು 8-10 ದಿನಗಳಲ್ಲಿ ನಗರಕ್ಕೆ ಆಗಮಿಸಲಿದೆ. ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ ಅಂದಾಜು 4.4 ಕೋಟಿ ರೂ. ವೆಚ್ಚದಲ್ಲಿ ಈ ರೈಲು ನಿರ್ಮಾಣವಾಗುತ್ತಿದ್ದು, ಪುಣೆಯ ಸಿಸಿ ಇಂಜನಿಯರ್ ಕಂಪನಿ ನಿರ್ಮಾಣ ಮತ್ತು 5 ವರ್ಷಗಳ ನಿರ್ವಹಣೆಯ ಗುತ್ತಿಗೆ ಪಡೆದಿದ್ದಾರೆ. ಈಗಾಗಲೇ ಇಂಜಿನ್ ಮತ್ತು ಬೋಗಿಗಳನ್ನು ನಿರ್ಮಿಸಿದೆ.
ಈ ರೈಲು ಸಂಪೂರ್ಣ ಸೆಂಟ್ರಲೈಜ್x ಏರ್ ಕೂಲರ್ (ಸಂಪೂರ್ಣ ಹವಾನಿಯಂತ್ರಿತ) ಆಗಿದೆ. ಸಂಪೂರ್ಣ ಸುರಕ್ಷಿತವಾಗಿದ್ದು, ಪ್ರಯಾಣಿಕರು ಕಿಟಕಿ ಮೂಲಕವೇ ಹೊರಗಿನ ದೃಶ್ಯ ನೋಡಬಹುದಾಗಿದೆ. 930 ಮೀಟರ್ ರೈಲು ಓಡಾಟ: ಈ ರೈಲು ಮಹಾತ್ಮಾ ಗಾಂಧಿ ಉದ್ಯಾನವನ ಆವರಣದ ಸುತ್ತ 930ಮೀಟರ್‌ವರೆಗೆ ಓಡಲಿದೆ. ಈ ರೈಲು ಮುಂಭಾಗದಲ್ಲಿ ಒಂದು, ಹಿಂಭಾಗದಲ್ಲಿ ಒಂದರಂತೆ ಎರಡು ಇಂಜಿನ್ ಮತ್ತು ನಾಲ್ಕು ಬೋಗಿ ಹೊಂದಿದೆ. ಈ ಪುಟಾಣಿ ರೈಲು ಒಂದು ತುದಿಯಿಂದ ಹೋಗಿ ಇನ್ನೊಂದು ತುದಿಯಿಂದ ವಾಪಸ್ ಅದೇ ಮಾರ್ಗವಾಗಿ ಮರಳಿ ಸ್ಟೇಶನ್‌ಗೆ ಬರಲಿದೆ. ಪುಟಾಣಿ ರೈಲು ಓಡಾಟಕ್ಕಾಗಿ ಪ್ರವೇಶ ದ್ವಾರ ಸಮೀಪದ ಎಡಕ್ಕೆ ಮತ್ತು ಬಲಕ್ಕೆ ಪ್ರತ್ಯೇಕವಾಗಿ ಎರಡು ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ.
ಒಂದು ಭಾಗದ ನಿಲ್ದಾಣದಿಂದ ಹೊರಟ ರೈಲು ಮರಳಿ ಬರುವಾಗ ಇನ್ನೊಂದು ಇಂಜಿನ್ ಮೂಲಕ ಓಡುತ್ತದೆ. ಅಂದರೆ ಚಾಲಕನು ಮುಂದಿನ ಇಂಜಿನ್ ಇಳಿದು ಹಿಂದಿನ ಇಂಜಿನ್‌ಗೆ ಬಂದು ಚಲಾಯಿಸುತ್ತಾನೆ. ಒಂದು ಬೋಗಿ 16 ಜನರ ಸಾಮರ್ಥ್ಯ ಹೊಂದಿದ್ದು, ಒಟ್ಟು ನಾಲ್ಕು ಬೋಗಿಗಳಲ್ಲಿ 64 ಜನರು ಪ್ರಯಾಣಿಸಬಹುದು. ಸೋಲಾರ್ ವಿದ್ಯುತ್‌ನಿಂದಲೇ ರೈಲು ಚಾಲನೆ: ಈ ರೈಲು ಸೋಲಾರ್ ವಿದ್ಯುತ್ ಚಾಲಿತವಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 10ರಿಂದ 15 ಬಾರಿ (ಟ್ರಿಪ್) ಸಂಚರಿಸುತ್ತದೆ.
ಈಗ ಫ್ಲೋರ್ ಲೆವಲ್ ಸಿದ್ಧತೆ, ನಿಲ್ದಾಣ ಕಾಮಗಾರಿ, ಟ್ರಾÂಕ್ ಸೆಟ್ಟಿಂಗ್ ನಡೆಯುತ್ತಿದೆ. ಈಗಾಗಲೇ ಟ್ರಾÂಕ್ ಫಾರ್ಮೇಶನ್ ಪೂರ್ಣಗೊಂಡಿದ್ದು, 200 ಮೀಟರ್ ಟ್ರಾÂಕ್ ರಿಲೇ ಪರೀಕ್ಷೆ ಕೂಡ ಆಗಿದೆ. ಆಗಸ್ಟ್ 15 ಇಲ್ಲವೆ ಅಂತ್ಯದೊಳಗೆ ಪುಟಾಣಿ ರೈಲಿನ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಮೊದಲು ಉದ್ಯಾನವನದಲ್ಲಿದ್ದ ರೈಲು ಪ್ರವೇಶ ದ್ವಾರ ಮಾರ್ಗವಾಗಿಯೇ ಸಂಚರಿಸುತ್ತಿತ್ತು. ಇದರಿಂದ ಉದ್ಯಾನವನಕ್ಕೆ ಬರುವವರು ಪ್ರವೇಶ ದ್ವಾರ ಬಳಿ ರೈಲು ಹೋಗುವವರೆಗೂ ನಿಂತು ಕೊಳ್ಳಬೇಕಿತ್ತು.
ಈ ವೇಳೆ ಉದ್ಯಾನವನ ಪ್ರವೇಶಿಸುವವರು ಇಲ್ಲವೆ ರೈಲು ಚಾಲನೆ ಮಾಡುವವರು ಒಂದಿಷ್ಟು ಅಜಾಗರೂಕತೆ ತೋರಿದರೂ ಸಾಕು ಅವಘಡ ಸಂಭವಿಸುತ್ತಿತ್ತು. ಈಗ ಓಡಾಡಲಿರುವ ಪುಟಾಣಿ ರೈಲು ಸಂಪೂರ್ಣ ಸುರಕ್ಷಿತವಾಗಿದೆ.