Advertisement

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

01:22 AM Jun 24, 2024 | Team Udayavani |

ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜೂ.26ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್‌ ಅಥವಾ ರೆಡ್‌ ಅಲರ್ಟ್‌ನ ಮುನ್ಸೂಚನೆ ಇರುತ್ತದೆ. ಆದ್ದರಿಂದ ಜಿಲ್ಲಾದ್ಯಂತ ವ್ಯಾಪಕ ಮಳೆಯಾಗುವ ಸಂಭವ ಇದ್ದು, ಈ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಸೂಚನೆ ನೀಡಿದ್ದಾರೆ.

Advertisement

ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆ ವಹಿಸಬೇಕು. ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ವಿಪತ್ತು ನಿರ್ವಹಣೆಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು.

ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾದ ಇನ್ಸಿಡೆಂಟ್‌ ಕಮಾಂಡ್‌ಗಳು ಸದಾ ಜಾಗೃತರಾಗಿದ್ದು, ಸಾರ್ವಜನಿಕ ದೂರುಗಳಿಗೆ ತತ್‌ಕ್ಷಣ ಸ್ಪಂದಿಸಬೇಕು. ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪ್ರತಿ ತಾಲೂಕುಗಳಲ್ಲಿ ಕಾಳಜಿ ಕೇಂದ್ರ ತೆರೆದು ಸನ್ನದ್ಧ ಸ್ಥಿತಿಯಲ್ಲಿರಿಸಬೇಕು ಎಂದು ಸೂಚಿಸಿದ್ದಾರೆ.

ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಸನ್ನದ್ಧ
ಮುಂಗಾರು ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ತಂಡ ಸನ್ನದ್ಧವಾಗಿದೆ. ದೀಪಕ್‌ ಕುಮಾರ್‌ ನೇತೃತ್ವದ 30 ಮಂದಿಯ ಎನ್‌ಡಿಆರ್‌ಎಫ್‌ ತಂಡ ಉಪ್ಪಿನಂಗಡಿಯಲ್ಲಿ ತಂಗಿದ್ದಾರೆ. 10 ಮಂದಿಯ ಎಸ್‌ಡಿಆರ್‌ಎಫ್‌ ತಂಡ ಸುಬ್ರಹ್ಮಣ್ಯದಲ್ಲಿ ಮತ್ತು 25 ಮಂದಿ ಮಂಗಳೂರಿನಲ್ಲಿ ಸನ್ನದ್ಧವಾಗಿದ್ದಾರೆ. ಅಗತ್ಯ ಬಿದ್ದರೆ ಜಿಲ್ಲೆಯ ವಿವಿಧ ಭಾಗಕ್ಕೆ ತೆರಳಲು ಈ ತಂಡ ಸಜ್ಜಾಗಿದೆ.

ಉತ್ತಮ ಮಳೆ
ಕರಾವಳಿ ಭಾಗದಲ್ಲಿ ರವಿವಾರ ಮಳೆ ಬಿರುಸು ಪಡೆದಿತ್ತು. ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಮಂಗಳೂರಿನಲ್ಲಿ 29.8 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.4 ಡಿ.ಸೆ. ಹೆಚ್ಚಿತ್ತು. 23.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.1 ಡಿ.ಸೆ. ಹೆಚ್ಚು ಇತ್ತು. ಮಳೆ ಬಿರುಸು ಪಡೆಯುವ ನಿರೀಕ್ಷೆ ಇದ್ದು, ಜೂ.24ರಿಂದ 27ರ ವರೆಗೆ “ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಈ ವೇಳೆ ಗಾಳಿ-ಮಳೆಯಾಗುವ ಸಾಧ್ಯತೆ ಇದೆ. ಕಡಲಿನಲ್ಲಿ ಅಲೆಗಳ ಅಬ್ಬರವೂ ಹೆಚ್ಚಿರಲಿದೆ.

Advertisement

ತುರ್ತು ಸ್ಪಂದನೆಗೆ ದೂರವಾಣಿ ಸಂಖ್ಯೆ
ಜಿಲ್ಲಾ ತುರ್ತು ಸೇವೆಗೆ 24×7 ಕಂಟ್ರೋಲ್‌ ರೂಂ: 1077/0824-2442590
ಮಂಗಳೂರು ಪಾಲಿಕೆ: 0824-2220306/2220319
ಮಂಗಳೂರು ತಾಲೂಕು : 0824-2220587
ಉಳ್ಳಾಲ ತಾಲೂಕು : 0824-2204424
ಬಂಟ್ವಾಳ ತಾಲೂಕು : 08255-232500
ಪುತ್ತೂರು ತಾಲೂಕು : 08251-230349
ಬೆಳ್ತಂಗಡಿ ತಾಲೂಕು : 08256-232047
ಸುಳ್ಯ ತಾಲೂಕು : 08257-231231
ಮೂಡುಬಿದಿರೆ ತಾಲೂಕು: 08258-238100
ಕಡಬ ತಾಲೂಕು : 08251-260435
ಮೂಲ್ಕಿ ತಾಲೂಕು : 0824-2294496

ಸಮುದ್ರದಲ್ಲಿ ಅಬ್ಬರದ ಅಲೆ ಸಾಧ್ಯತೆ
ಮಂಗಳೂರು/ಕಾಸರಗೋಡು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕೇರಳ ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರಲಿದ್ದು, ಬೃಹತ್‌ ಅಲೆಗಳು ಕಿನಾರೆಗೆ ಅಪ್ಪಳಿಸುವ ಸಾಧ್ಯತೆ ಇದೆ. ಆದುದರಿಂದ ಮೀನುಗಾರರು ಮತ್ತು ಸಮುದ್ರ ತೀರದ ನಿವಾಸಿಗಳು ಎಚ್ಚರಿಕೆ ವಹಿಸುವಂತೆ ಕೇಂದ್ರ ಸಮುದ್ರ ಸಂಶೋಧನ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ.

ಜೂ.23ರ ರಾತ್ರಿಯಿಂದ ಜೂ. 25ರ ರಾತ್ರಿ 11.30 ರ ವರೆಗೆ ಸಮುದ್ರದಲ್ಲಿ ಅಬ್ಬರದ ಅಲೆಗಳ ಸಾಧ್ಯತೆಯಿದೆ. ಮಂಗಳೂರಿನಿಂದ ಮೂಲ್ಕಿವರೆಗೆ 3.1 ಮೀಟರ್‌ನಿಂದ 3.4 ಮೀಟರ್‌ವರೆಗೆ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಕಾಪುವಿನಿಂದ ಬೈಂದೂರುವರೆಗೆ 3.2 ಮೀಟರ್‌ನಿಂದ 3.3 ಮೀಟರ್‌ ಎತ್ತರದವರೆಗೆ ಅಲೆಗಳು ಏಳುವ ಸಾಧ್ಯತೆ ಇದೆ. ಇದೇ ರೀತಿ ಉತ್ತರ ಕನ್ನಡ ಮತ್ತು ಕೇರಳ ವ್ಯಾಪ್ತಿಯಲ್ಲಿಯೂ ಸಮುದ್ರ ಅಬ್ಬರದಿಂದ ಕೂಡಿರಲಿದೆ ಎಂದು ಇಲಾಖೆ ತಿಳಿಸಿದೆ.

ಉಡುಪಿ ಜಿಲ್ಲೆ: ಸಾಧಾರಣ ಮಳೆ
ಉಡುಪಿ: ಜಿಲ್ಲಾದ್ಯಂತ ಹಲವೆಡೆ ಸಾಧಾರಣ ಮಳೆಯಾಗಿದೆ. ಉಡುಪಿ, ಮಣಿಪಾಲ, ಮಲ್ಪೆ, ಕಾಪು, ಹಿರಿಯಡಕ, ಬ್ರಹ್ಮಾವರ ಭಾಗದಲ್ಲಿ ಬಿಸಿಲು ಮೋಡ ಕವಿದ ವಾತಾವರಣದ ನಡುವೆ ಸಾಧಾರಣ ಮಳೆ ಸುರಿದಿದೆ. ಕಾರ್ಕಳ ಮತ್ತು ಕುಂದಾಪುರ ತಾಲೂಕಿನಲ್ಲಿ ಕೂಡ ರವಿವಾರ ಸಾಧಾರಣ ಮಳೆಯಾಗಿದೆ. ಹೆಬ್ರಿ, ಕೊಲ್ಲೂರು, ವಂಡ್ಸೆ ಸುತ್ತಮುತ್ತಲಿನ ಪರಿಸರದಲ್ಲಿ ಬಿಟ್ಟು ಬಿಟ್ಟು ಉತ್ತಮ ಮಳೆಯಾಗಿದೆ.

ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಕೃಷಿ ಕಾರ್ಯ ಕೂಡ ಚುರುಕುಗೊಂಡಿದೆ. ರವಿವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ಕಾಲ 18.76 ಸರಾಸರಿ ಮಳೆಯಾಗಿದೆ.

ಸುಳ್ಯದಲ್ಲಿ ದಿನವಿಡೀ ಮಳೆ
ಸುಳ್ಯ: ತಾಲೂಕಿನ ವಿವಿಧೆಡೆ ರವಿವಾರ ನಿರಂತರ ಮಳೆಯಾಗಿದೆ. ಶನಿವಾರ ರಾತ್ರಿಯೂ ಧಾರಾಕಾರ ಮಳೆಯಾಗಿದ್ದು, ರವಿವಾರ ಬೆಳಗ್ಗಿನಿಂದಲೇ ಸಂಜೆ ವರೆಗೂ ಮುಂದುವರಿದಿತ್ತು. ಕೆಲವು ದಿನಗಳಿಂದ ಸಾಧಾರಣ ಮಳೆಯಾಗಿ ಮುಖ್ಯವಾಗಿ ಹಗಲಿನಲ್ಲಿ ಬಿಸಿಲ ವಾತಾವರಣವಿತ್ತು. ಸುಬ್ರಹ್ಮಣ್ಯ ಪರಿಸರದಲ್ಲಿ ಕೂಡ ರವಿವಾರ ಹೆಚ್ಚಿನ ಅವಧಿಯಲ್ಲಿ ಮಳೆ ಸುರಿಯುತ್ತಿತ್ತು.

ಪುತ್ತೂರು ತಾಲೂಕಿನಲ್ಲಿ ಉತ್ತಮ ಮಳೆ
ಪುತ್ತೂರು ಮತ್ತು ಕಡಬ ತಾಲೂಕಿನಾದ್ಯಂತ ಕೂಡ ರವಿವಾರ ಉತ್ತಮ ಮಳೆಯಾಗಿದೆ. ಉತ್ತಮ ಮಳೆಯಾಗಿರುವುದರಿಂದ ರೈತರು ಖುಷಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲೂ ಉತ್ತಮ ಮಳೆ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನೆಲ್ಲೆಡೆ ರವಿವಾರ ಉತ್ತಮ ಮಳೆ ಸುರಿದಿದೆ. ಮುಂಜಾನೆ ಬಿಸಿಲಿನ ವಾತಾವರಣ ಕಂಡುಬಂದರೂ ಬಳಿಕ ಉತ್ತಮ ಮಳೆಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣವಿತ್ತು.

ಮಳೆಯಿಂದಾಗಿ ನೆರಿಯ ಗ್ರಾಮದ ಬಸ್ತಿ ಬಳಿ ಮನೆಯೊಂದರ ಕಾಂಪೌಂಡ್‌ ಕುಸಿದಿದೆ. ನದಿನಗಳಲ್ಲಿ ಉತ್ತಮ ನೀರಿನ ಹರಿವು ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next